ನ್ಯೂಸ್

ಸಂಪನ್ಮೂಲದ ಸದ್ಬಳಕೆ; ಜನಸಂಖ್ಯೆಯಲ್ಲಿ ಶೀಘ್ರ ಭಾರತ ಅಗ್ರಗಣ್ಯ

Webdesk - Ravikanth

ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕಿ ಭಾರತ ಅಗ್ರಗಣ್ಯ ಸ್ಥಾನಕ್ಕೇರುವುದು ನಿಶ್ಚಿತವಾಗಿದೆ. ಕೆಲ ಅಂದಾಜು ಪ್ರಕಾರ ಈಗಾಗಲೇ ಚೀನಾವನ್ನು ಭಾರತ ಹಿಂದಿಕ್ಕಿದೆ. ಜನಗಣತಿಯಿಂದಲೇ ಈ ವಿಷಯ ನಿಖರವಾಗಿ ಖಚಿತವಾಗಬೇಕಾದರೂ 2023ರಲ್ಲಿಯೇ ಭಾರತ ಮೊದಲ ಸ್ಥಾನಕ್ಕೇರಲಿದೆ ಎಂದು ತಜ್ಞರು ಹೇಳಿದ್ದಾರೆ. ಜನಸಂಖ್ಯೆ ಬೆಳವಣಿಗೆ ಭಾರತಕ್ಕೆ ವರವೋ ಹೊರೆಯೋ ಎಂಬ ತೀವ್ರತೆರನಾದ ಚರ್ಚೆ ಸಹಜವಾಗಿ ಶುರುವಾಗಿದೆ. ಕಳೆದ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಜನಸಂಖ್ಯೆಯಲ್ಲಿ ಕುಸಿತವಾಗಿದೆ. ಜನಸಂಖ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಲ್ಲಿ ‘ಒಂದು ಕುಟುಂಬಕ್ಕೆ ಒಂದು ಮಗು’ ನೀತಿಯನ್ನು 1980ರಿಂದ 2015ರ ಅವಧಿಯಲ್ಲಿ ಜಾರಿಗೊಳಿಸಿತು. ಇದರಿಂದಾಗಿ ಅಂದಾಜು 40 ಕೋಟಿ ಜನಸಂಖ್ಯೆ ಹೆಚ್ಚಳವಾಗುವುದನ್ನು ನಿಯಂತ್ರಿಸಲಾಯಿತು. ಆದರೀಗ ಈ ನೀತಿಯ ದುಷ್ಪರಿಣಾಮವೂ ಕಂಡುಬರತೊಡಗಿದೆ. ಚೀನಾದ ಒಟ್ಟು ಜನಸಂಖ್ಯೆಯಲ್ಲಿ ದುಡಿಯುವ ವಯಸ್ಸಿನವರ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗತೊಡಗಿದೆ. ಹೀಗಾಗಿ, 2016ರಿಂದ ಎರಡು ಮಕ್ಕಳನ್ನು ಹೊಂದಲು ಹಾಗೂ 2021ರಿಂದ ಮೂರು ಮಕ್ಕಳನ್ನು ಹೊಂದಲು ಚೀನಾ ಪ್ರೋತ್ಸಾಹ ನೀಡುತ್ತಿದೆ. ವಿಶ್ವ ಸಂಸ್ಥೆಯು ಅಂದಾಜಿಸಿರುವಂತೆ 2023ರಲ್ಲಿ ಭಾರತದ ಜನಸಂಖ್ಯೆ 142.863 ಕೋಟಿ ತಲುಪುವ ಮೂಲಕ ಚೀನಾದ 142.567 ಕೋಟಿ ಜನಸಂಖ್ಯೆಯನ್ನು ಮೀರಿಸಲಿದೆ.

ಭಾರತದಲ್ಲಿ ದುಡಿಯುವ ವಯಸ್ಸಿನವರ ಪ್ರಮಾಣ ಒಟ್ಟಾರೆ ಜನಸಂಖ್ಯೆಯ ಶೇ. 50ನ್ನು 2007ರಲ್ಲಿಯೇ ದಾಟಿದೆ. 2030ರ ಮಧ್ಯದಲ್ಲಿ ಇದು ಶೇ. 57ಕ್ಕೆ ತಲುಪಲಿದೆ. ಭಾರತದ ಜನಸಂಖ್ಯೆಯ ಸರಾಸರಿ ವಯಸ್ಸು ಕೂಡ ಅಷ್ಟೇನು ಹೆಚ್ಚಾಗುವುದಿಲ್ಲ. ಇದು 2020ರಲ್ಲಿ 27.3 ವರ್ಷ ಇದ್ದು, 2050ರಲ್ಲಿ 38.1ಕ್ಕೆ ಹೆಚ್ಚಾಗಲಿದೆ. ಚೀನಾಕ್ಕೆ ಹೋಲಿಸಿದರೆ ಈ ಸರಾಸರಿ ವಯಸ್ಸು ತೀರ ಕಡಿಮೆ ಆಗಿರಲಿದೆ. ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಚೀನಾವು 1980ರ ದಶಕದ ಉತ್ತರಾರ್ಧದಿಂದ 2015ರವರೆಗೆ ತನ್ನ ಜನಸಂಖ್ಯೆಯ ಲಾಭಾಂಶವನ್ನು ಕೊಯ್ಲು ಮಾಡಿತು. ಇದರಿಂದಾಗಿ ಚೀನಾ ಈಗ ಅಮೆರಿಕದ ನಂತರ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅದರ ತಲಾದಾಯವು 10 ಲಕ್ಷ ರೂಪಾಯಿಗೂ ಅಧಿಕವಾಗಿದೆ. ಭಾರತವು ಆರ್ಥಿಕತೆಯಲ್ಲಿ ವಿಶ್ವದಲ್ಲಿಯೇ ಐದನೇ ಸ್ಥಾನದಲ್ಲಿದ್ದರೂ ಭಾರತೀಯರ ತಲಾದಾಯ 1.80 ಲಕ್ಷ ರೂಪಾಯಿಯಷ್ಟೇ ಇದೆ.

ಚೀನಾ ರೀತಿಯಲ್ಲಿ ಜನಸಂಖ್ಯೆಯ ಲಾಭವನ್ನು ಪಡೆದುಕೊಳ್ಳುವ ಅವಕಾಶ ಈಗ ಭಾರತಕ್ಕಿದ್ದು, ಸೂಕ್ತ ಮಾರ್ಗದಲ್ಲಿ ಹೆಜ್ಜೆ ಹಾಕಿದರೆ 2040ರ ವೇಳೆಗೆ ಇದರ ಫಲ ಮಜಬೂತಾಗಿ ದೊರೆಯಲಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ. ಇದೆಲ್ಲ ಸಾಧ್ಯವಾಗಬೇಕಾದರೆ, ಕೃಷಿ ಕ್ಷೇತ್ರವನ್ನು ಹೊರತುಪಡಿಸಿದ ಉದ್ಯೋಗಗಳನ್ನು ಸೃಷ್ಟಿಸುವ ಬೆಳವಣಿಗೆಯನ್ನು ಉತ್ತೇಜಿಸಬೇಕು. ಕೇವಲ ನಿರ್ಮಾಣ ವಲಯ ಮತ್ತು ಕಡಿಮೆ ಸಂಬಳ ಇರುವ ಅನೌಪಚಾರಿಕ ಸೇವೆಗಳಿಂದ ಉದ್ಯೋಗ ದೊರೆತರೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸರಾಸರಿ ಆದಾಯ ಹೆಚ್ಚು ಇರುವ ಆಧುನಿಕ ಉದ್ಯಮ ಮತ್ತು ಆಧುನಿಕ ಸೇವೆಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಇಂತಹ ರಚನಾತ್ಮಕ ರೂಪಾಂತರ ಸಾಧ್ಯವಾಗದಿದ್ದರೆ ಜನಸಂಖ್ಯೆಯ ಲಾಭಾಂಶದ ಬದಲು ಜನಸಂಖ್ಯೆಯೇ ದುಃಸ್ವಪ್ನವಾಗಬಹುದು. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ಪಾತ್ರ ಬಹುಮುಖ್ಯವಾದುದು.