ನ್ಯೂಸ್

ವ್ಯವಸ್ಥಿತವಾಗಿ ಜಾರಿಯಾಗಲಿ: ಪ್ಯಾಕ್ಸ್ ಭ್ರಷ್ಟಾಚಾರ ಕಡಿವಾಣಕ್ಕೆ ಕಾಮನ್ ಕೇಡರ್ ಅಥಾರಿಟಿ

Webdesk - Ravikanth

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್) ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಕಾಮನ್ ಕೇಡರ್ ಅಥಾರಿಟಿ (ಸಿಸಿಎ) ವ್ಯವಸ್ಥೆಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ನೀಡುವ ಸಾಲ ಯೋಜನೆಗಳಲ್ಲಿ ನಡೆಯುವ ಅಕ್ರಮಗಳನ್ನು ನಿಯಂತ್ರಿಸುವ ಮೂಲ ಉದ್ದೇಶವುಳ್ಳ ಈ ಕ್ರಮಕ್ಕೆ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತರಲು ಸದನದಲ್ಲಿ ವಿಧೇಯಕ ಮಂಡಿಸಲಾಗುತ್ತಿದೆ.

ಭಾರತದಲ್ಲಿ ಪ್ಯಾಕ್ಸ್​ಗಳು 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ವ್ಯಾಪಿಸಿದ್ದು, 13 ಕೋಟಿಗೂ ಅಧಿಕ ಸದಸ್ಯರ ಬೃಹತ್ ಬಲ ಹೊಂದಿದೆ. ವಿಶ್ವದ ಅತಿದೊಡ್ಡ ಗ್ರಾಮೀಣ ಹಣಕಾಸು ವ್ಯವಸ್ಥೆಗಳಲ್ಲಿ ಇದು ಒಂದಾಗಿದೆ. ಕರ್ನಾಟಕದಲ್ಲಿ 6040 ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ರೈತರು ಹೊಂದಿದ ಕೃಷಿ ಭೂಮಿ ಮತ್ತು ಬೆಳೆಗೆ ಅನುಗುಣವಾಗಿ ನಬಾರ್ಡ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೀಗೆ ತ್ರಿಸ್ತರ ವ್ಯವಸ್ಥೆಯಲ್ಲಿ ರೈತರಿಗೆ ಅಲ್ಪಾವಧಿ ಹಾಗೂ ಮಧ್ಯಮಾವಧಿ ಬೆಳೆ ಸಾಲ ನೀಡುವ ವ್ಯವಸ್ಥೆ ಈಗ ಜಾರಿಯಲ್ಲಿದೆ. 2010-11ರಲ್ಲಿ ಜಾರಿಗೆ ಬಂದ ವೈದ್ಯನಾಥನ್ ವರದಿಯಂತೆ ಪತ್ತಿನ ಸಹಕಾರಿ ಸಂಘಗಳಲ್ಲಿ ಏಕರೂಪದ ಲೆಕ್ಕಪತ್ರ ನಿರ್ವಹಣೆ ಪದ್ಧತಿ ಜಾರಿಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಕೆಲವೊಂದು ಬದಲಾವಣೆ ತರಲಾಗಿದೆ. ಆದರೂ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ 487 ಪ್ರಕರಣಗಳಲ್ಲಿ 114 ಕೋಟಿ ರೂಪಾಯಿ ಮೊತ್ತದ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದೆ. ಈ ಅಕ್ರಮಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇದ್ದರೂ ಶಿಸ್ತು ಪ್ರಾಧಿಕಾರಗಳಾದ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ ಎನ್ನಲಾಗಿದೆ. ಏಕೆಂದರೆ, ವೈದ್ಯನಾಥನ್ ವರದಿಯ ಶಿಫಾರಸುಗಳನ್ನು ಒಪ್ಪಿದ ನಂತರ ಶಿಸ್ತು ಪ್ರಾಧಿಕಾರಗಳಾಗಿ ಪ್ಯಾಕ್ಸ್​ಗಳ ಆಡಳಿತ ಮಂಡಳಿಗಳೇ ಕಾರ್ಯನಿರ್ವಹಣೆ ಮಾಡುತ್ತಿವೆ. ಅಕ್ರಮಗಳು ಹೆಚ್ಚಲು ಇದು ಮೂಲ ಕಾರಣವಾಗಿದೆ ಎಂದು ಗುರುತಿಸಲಾಗಿದೆ.

ರೈತರಿಗೆ ವಿವಿಧ ಯೋಜನೆಗಳಲ್ಲಿ ಪ್ರತಿ ವರ್ಷ 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತದೆ. ಇದನ್ನು ಅನೇಕ ಸಹಕಾರ ಸಂಘ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಈ ಹಿಂದೆ ಇದ್ದ ಕಾಮನ್ ಕೇಡರ್ ಅಥಾರಿಟಿ ವ್ಯವಸ್ಥೆ ಮರುಸ್ಥಾಪನೆ ಅಗತ್ಯ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಸಹಕಾರ ಸಂಘಗಳ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತುಕ್ರಮಗಳ ಅಧಿಕಾರ ಚಲಾಯಿಸಲು ಈ ಅಥಾರಿಟಿಗೆ ಅಧಿಕಾರ ನೀಡಲು ಯೋಜಿಸಲಾಗಿದ್ದು, ಈ ಮೂಲಕ ಪ್ಯಾಕ್ಸ್​ಗಳ ಸಿಇಒ, ಕಾರ್ಯದರ್ಶಿಗಳ ಮೇಲೆ ನಿಯಂತ್ರಣ ಹೊಂದಲು ಉದ್ದೇಶಿಸಲಾಗಿದೆ. ಸಹಕಾರ ವಲಯವು ವಿಶ್ವಾಸ, ನಂಬಿಕೆಯ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಮೀಟರ್ ಬಡ್ಡಿ ಕುಳಗಳಲ್ಲಿ ಜನರು ಸಿಲುಕಿ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯುವಲ್ಲಿ ಸಹಕಾರ ಸಂಘಗಳು ಅಪಾರ ಕೊಡುಗೆ ನೀಡಿವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಪ್ಯಾಕ್ಸ್​ಗಳ ಸದಸ್ಯರಾಗಿರುವ ರೈತರಿಗೆ ಸರ್ಕಾರದ ಯೋಜನೆಗಳ ಫಲವು ಸರಿಯಾದ ದೊರೆಯಬೇಕೆಂಬ ಸದುದ್ದೇಶದೊಂದಿಗೆ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಕಾಮನ್ ಕೇಡಾರ್ ಅಥಾರಿಟಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಸವಾಲಿನ ಸಂಗತಿಯಾಗಿದೆ. ರಾಜಕೀಯವಾಗಿ ದುರುಪಯೋಗ, ಅಧಿಕಾರಶಾಹಿಗಳ ಅತಿಯಾದ ಹಸ್ತಕ್ಷೇಪ ಆಗದಂತೆ ವ್ಯವಸ್ಥಿತವಾಗಿ ಜಾರಿಗೊಳಿಸುವ ಅಗತ್ಯತೆ ಇದೆ.