ನ್ಯೂಸ್

ಸಂಪಾದಕೀಯ | ಉತ್ತರದಾಯಿತ್ವ ಬೇಕು; ಸಹಕಾರ ಸಂಘಗಳ ನಿವೇಶನ ವಿಳಂಬ

Webdesk - Ravikanth

ಸ್ವಂತ ನಿವೇಶನ ಮತ್ತು ಮನೆ ಹೊಂದಬೇಕು ಎಂಬುದು ಬಹುತೇಕ ಎಲ್ಲರ ಕನಸು ಹಾಗೂ ಹೆಬ್ಬಯಕೆ. ಜೀವನದಲ್ಲಿ ಏನೆಲ್ಲ ಸಾಧಿಸಿದರೂ ಒಂದು ಮನೆ ಕಟ್ಟಲಾಗಲಿಲ್ಲವೆಂದರೆ ಅಥವಾ ನಿವೇಶನ ಮಾಡಲಾಗಲಿಲ್ಲವೆಂದರೆ ಏನೋ ಕೊರತೆ ಉಳಿದುಬಿಡುತ್ತದೆ. ಹೀಗಾಗಿ ಸಾಲಸೋಲ ಮಾಡಲೂ ಹಿಂಜರಿಯುವುದಿಲ್ಲ. ಹೀಗಾಗಿಯೇ ಭೂಮಿಗೆ ಎಂದೆಂದೂ ಬೇಡಿಕೆ ಇರುತ್ತದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿಯೇ ಇರುತ್ತದೆ. ಆದರೆ ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳು ಜನರ ಈ ಭಾವನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರದೃಷ್ಟಕರ. ನಿಗದಿತ ಸಮಯಕ್ಕೆ ನಿವೇಶನ ನೀಡದಿರುವುದು ಅಥವಾ ಅಭಿವೃದ್ಧಿಪಡಿಸದಿರುವುದು, ಹೇಳಿದ ಸಮಯಕ್ಕೆ ಗೃಹ ಯೋಜನೆ ಪೂರ್ಣಗೊಳಿಸದಿರುವುದು ಈ ಮುಂತಾದ ಅಪಸವ್ಯಗಳು ಒಂದೆಡೆಯಾದರೆ, ಇನ್ನು ಕೆಲವರು ಸಂಘದ ಹೆಸರಿನಲ್ಲಿ ಒಂದೇ ನಿವೇಶನವನ್ನು ಬೇರೆಬೇರೆಯವರಿಗೆ ಮಾರಿ ಹಣಮಾಡುವುದೂ ಬೆಳಕಿಗೆ ಬಂದಿದೆ. ಹೀಗಾಗಿ ಯಾರನ್ನು ನಂಬಬೇಕು-ಬಿಡಬೇಕು ಎಂಬುದು ತಿಳಿಯದೆ ಜನರಿಗೆ ಅಯೋಮಯವಾಗಿದೆ.

ರಾಜ್ಯದ ನೂರಾರು ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಹಣ ಕಟ್ಟಿ ಆರೇಳು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದರೂ, ಫಲ ಸಿಗುತ್ತಿಲ್ಲ. ರಾಜ್ಯದಲ್ಲಿ 1,828 ಗೃಹ ನಿರ್ಮಾಣ ಸಹಕಾರ ಸಂಘಗಳಿದ್ದು, ಈ ಪೈಕಿ 279 ಸ್ಥಗಿತಗೊಂಡಿವೆ. 362 ಸಂಘಗಳು ಮುಚ್ಚುವ ಹಾದಿಯಲ್ಲಿವೆ. 127 ಸಂಘಗಳು ನಿವೇಶನ ಕೊಡುವುದಾಗಿ ಆರೆಂಟು ವರ್ಷಗಳಿಂದ ಹೇಳುತ್ತ ಬರುತ್ತಿದ್ದು, ಇನ್ನೂ ಕೊಟ್ಟಿಲ್ಲ. ಇಲ್ಲಿ ಇನ್ನೂ ಒಂದು ಸಂಗತಿ ಗಮನಿಸಬೇಕು. ಈ ಪೈಕಿ ಕೇವಲ ಆರು ಸಂಘಗಳು ರೇರಾದಲ್ಲಿ ನೋಂದಾಯಿಸಿಕೊಂಡಿವೆ. ನಿಯಮದ ಪ್ರಕಾರ ರೇರಾ ನೋಂದಣಿ ಕಡ್ಡಾಯ. ಸಹಕಾರ ಸಂಘಗಳೇ ಹೀಗೆ ನಿಯಮ ಉಲ್ಲಂಘಿಸಿದರೆ ಜನರ ಗತಿಯೇನು? ಎಷ್ಟೋ ಜನರು ಉಳಿತಾಯದ ಹಣವನ್ನು ನಿವೇಶನಕ್ಕಾಗಿ ಕಟ್ಟಿರುತ್ತಾರೆ; ಇನ್ನು ಕೆಲವರು ಬ್ಯಾಂಕಿನಲ್ಲಿ ಇರಿಸಿದ ಹಣವನ್ನು ಇಲ್ಲಿ ಹೂಡಿಕೆ ಮಾಡುತ್ತಾರೆ. ಸಕಾಲಕ್ಕೆ ನಿವೇಶನ ಸಿಗದಿದ್ದಲ್ಲಿ ಇಂಥವರು ಏನು ಮಾಡಬೇಕು? ಸಹಕಾರ ಸಂಘಗಳು ಮಾತಿನಂತೆ ನಡೆದುಕೊಳ್ಳುವ ಬದ್ಧತೆ ಪ್ರದರ್ಶಿಸಬೇಕು. ಒಮ್ಮೊಮ್ಮೆ ತಾಂತ್ರಿಕ ಕಾರಣಗಳಿಂದಾಗಿ ಅಥವಾ ನಿವೇಶನಕ್ಕಾಗಿ ಗುರುತಿಸಿದ ಭೂಮಿ ವ್ಯಾಜ್ಯದಲ್ಲಿ ಸಿಲುಕುವುದು ಇತ್ಯಾದಿ ಕಾರಣಕ್ಕೆ ವಿಳಂಬ ಆಗುವುದಂಟು. ಅಂಥ ಸಂದರ್ಭದಲ್ಲಿ ಜನರಿಗೆ ಕಾರಣ ತಿಳಿಸಿ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಯತ್ನವಾಗಬೇಕೆ ಹೊರತು ಅನಿರ್ದಿಷ್ಟಕಾಲ ಮೌನಧಾರಣೆ ಮಾಡುವುದಲ್ಲ.

ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಮನಹರಿಸಿ ಜನರಿಗೆ ನ್ಯಾಯಕೊಡಿಸುವತ್ತ ಚಿಂತಿಸಬೇಕು; ಈ ಸಂಬಂಧ ಇರುವ ನೀತಿನಿಯಮಗಳ ಅನುಷ್ಠಾನದ ಬಗ್ಗೆ ನಿಗಾ ವಹಿಸಬೇಕು. ಇದೇ ರೀತಿ ಮುಂದುವರಿದಲ್ಲಿ ಜನರಿಗೆ ವ್ಯವಸ್ಥೆಯ ಮೇಲೆ ವಿಶ್ವಾಸ ಕಡಿಮೆಯಾಗುವ ಸಾಧ್ಯತೆ ಇದೆ. ಅದು ಇನ್ನೂ ಅಪಾಯಕರ. ಈಗಂತೂ ತಂತ್ರಜ್ಞಾನ ಮುಂದುವರಿದಿರುವುದರಿಂದ ತ್ವರಿತವಾಗಿ ಸವಲತ್ತು ಕಲ್ಪಿಸುವ ಸಾಧ್ಯತೆಗಳಂತೂ ಇದ್ದೇ ಇವೆ. ಈ ದಿಕ್ಕಿನಲ್ಲಿಯೂ ಸಂಘಗಳು ಆಲೋಚಿಸಬೇಕು. ಇದಲ್ಲದೆ, ಜನರು ಸಹ ಹೂಡಿಕೆ ಮುನ್ನ ಎಚ್ಚರವಹಿಸಬೇಕು. ಸಂಘಸಂಸ್ಥೆಗಳ ಹಿನ್ನೆಲೆ, ಅವು ಅಭಿವೃದ್ಧಿಪಡಿಸಿರುವ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ತಿಳಿಯಬೇಕು; ಷರತ್ತುಗಳನ್ನು ಸರಿಯಾಗಿ ಅರಿತುಕೊಳ್ಳಬೇಕು; ಕಾನೂನು ಸಲಹೆ ಪಡೆದುಕೊಳ್ಳಬೇಕು.