ನ್ಯೂಸ್

ಸಂಪಾದಕೀಯ| ನಿರ್ಲಕ್ಷ್ಯ ಧೋರಣೆ ಬೇಡ; ರಸ್ತೆಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ವಿಫಲ..

Webdesk - Ravikanth

ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪಗಳಾಗಿ ಕಾಡುತ್ತಿದ್ದರೂ, ಪ್ರಭುತ್ವ ಮತ್ತು ಅಧಿಕಾರಶಾಹಿ ಎಚ್ಚೆತ್ತುಕೊಳ್ಳದಿರುವುದು ಖಂಡನಾರ್ಹ. ಬೇಸಿಗೆ ಸಂದರ್ಭದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವಾಗಿದ್ದರೂ, ಮುಂಗಾರು ಆರಂಭದ ಕೆಲ ದಿನಗಳ ಮುನ್ನವೇ ಬಿಬಿಎಂಪಿ ತರಾತುರಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯ ಇಂದಿನಿಂದ (ಮಂಗಳವಾರ) ಆರಂಭಿಸುತ್ತಿರುವುದು, ಅದರ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿ. ಬೆಂಗಳೂರಲ್ಲಿ 9207 ರಸ್ತೆ ಗುಂಡಿಗಳಿದ್ದು, ಈ ಪೈಕಿ ಪೂರ್ವ ವಲಯದಲ್ಲೇ ಅತಿ ಹೆಚ್ಚು 2066 ಗುಂಡಿಗಳಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಬಾರಿ ಮುಂಗಾರು ಅವಧಿಗಿಂತ ಮುಂಚೆಯೇ ಅಡಿಯಿಡುತ್ತಿದ್ದು, ಇಂಥ ಹೊತ್ತಲ್ಲಿ ನಡೆಸುವ ಕಾಮಗಾರಿಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದೆಲ್ಲ ಸಂಬಂಧಿತ ಅಧಿಕಾರಿಗಳಿಗೆ ತಿಳಿದಿಲ್ಲ ಅಂತಲ್ಲ. ಆದರೂ, ಬಿಬಿಎಂಪಿ ಆಡಳಿತದಲ್ಲಿ ಅವ್ಯವಸ್ಥೆಯೇ ಹಾಸುಹೊಕ್ಕಾಗಿರುವುದರಿಂದ, ಇಂಥ ಅಪಸವ್ಯಗಳು ಸಂಭವಿಸುತ್ತಿವೆ. ಜನರ ತೆರಿಗೆ ಹಣವನ್ನು ವ್ಯರ್ಥವಾಗಿ ಪೋಲು ಮಾಡಲಾಗುತ್ತಿದೆ. ಅಲ್ಲದೆ, ಒಂಬತ್ತು ಸಾವಿರಕ್ಕೂ ಅಧಿಕ ರಸ್ತೆಗುಂಡಿಗಳ ಪೈಕಿ ಕೆಲವು ಕಡೆ ಅಪಘಾತ ಸಂಭವಿಸಿದರೂ, ಅದರಿಂದಾಗುವ ಜೀವಹಾನಿ ಎಷ್ಟು? ಇದನ್ನು ತಪ್ಪಿಸಬೇಕಲ್ಲವೇ?

ರಸ್ತೆಗುಂಡಿಗಳ ಸಮಸ್ಯೆಯ ವಿರುದ್ಧ ಜನರು ಪ್ರತಿಭಟಿಸಿದ್ದಾಯ್ತು, ಈ ಹಿಂದೆ ಹೈಕೋರ್ಟ್ ಛೀಮಾರಿ ಹಾಕಿದ್ದೂ ಆಯ್ತು; ಆದರೂ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂಥ ಸುಧಾರಣೆಯಿಲ್ಲ. ಬೆಂಗಳೂರಿನ ಯಾವುದೇ ಮುಖ್ಯಪ್ರದೇಶಕ್ಕೆ ಹೋದರೂ, ಸಣ್ಣ ಬಡಾವಣೆಗಳಿಗೆ ಹೋದರೂ ಗುಂಡಿಗಳು ವಾಹನ ಸವಾರರನ್ನು ಆತಂಕಗೊಳಿಸುತ್ತಿವೆ. ಇದೇ ವರ್ಷದ ಜನವರಿ ತಿಂಗಳಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಹಲವು ಅಪಘಾತಗಳು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇಂಥ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ತಮ್ಮದಲ್ಲದ ತಪ್ಪಿಗೆ ಜನಸಾಮಾನ್ಯರು ಯಾಕೆ ಇಂಥ ಘೋರ ಶಿಕ್ಷೆ ಅನುಭವಿಸಬೇಕು? ಜನರ ಜೀವಕ್ಕೆ ಬೆಲೆಯೇ ಇಲ್ಲವೇ? ಮಾಹಿತಿ-ತಂತ್ರಜ್ಞಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ನಗರ ರಸ್ತೆಗುಂಡಿಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗದಿರುವುದು ವಿಪರ್ಯಾಸ. ‘ರಸ್ತೆಗುಂಡಿ ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮಾರಣಾಂತಿಕ ರಸ್ತೆಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು’ ಎಂಬ ಮುಖ್ಯಮಂತ್ರಿಗಳ ಸೂಚನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಬಿಬಿಎಂಪಿ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಮುರ್ನಾಲ್ಕು ವರ್ಷಗಳೇ ಕಳೆದಿವೆ. ಆದರೂ ರಸ್ತೆ ಕಾಮಗಾರಿಗಳಿಗೆ ಮೂರು ವರ್ಷಗಳಲ್ಲಿ 3,547 ಕೋಟಿ ರೂ. ವ್ಯಯಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇಷ್ಟೊಂದು ಹಣ ವ್ಯಯಿಸಿದ್ದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ ಏಕೆ? ‘ಪಾಲಿಕೆ ಮುಚ್ಚುವ ರಸ್ತೆಗುಂಡಿಗಳು, ದುರಸ್ತಿ ಮಾಡಿದ ರಸ್ತೆಗಳು ದೀರ್ಘಕಾಲದವರೆಗೆ ಬಾಳಿಕೆ ಬರುವುದಿಲ್ಲವೇಕೆ?’ ಎಂದು ಹೈಕೋರ್ಟ್ ಕೂಡ ಪ್ರಶ್ನಿಸಿತ್ತು. ಗುತ್ತಿಗೆದಾರರು ಕೂಡ ರಸ್ತೆ ನಿರ್ವಹಣೆಯ ನಿಯಮವನ್ನು ಪಾಲಿಸದಿರುವುದು ಸ್ಪಷ್ಟವಾಗಿದೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಇದೆ. ಬಿಬಿಎಂಪಿ ಬೆಸ್ಕಾಂ, ಜಲಮಂಡಳಿಗಳನ್ನು ದೂರಿದರೆ, ಇತರ ಇಲಾಖೆಗಳು ಬಿಬಿಎಂಪಿಯತ್ತ ಬೊಟ್ಟು ಮಾಡುತ್ತವೆ. ಕಾಳಜಿಯನ್ನೇ ಮರೆತರೆ ಇಂಥ ಅಧ್ವಾನಗಳಾಗುತ್ತವೆ. ಯಾವ ಸಬೂಬುಗಳನ್ನು ಹೇಳದೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಲಿ.