ನ್ಯೂಸ್

ಸಂಪಾದಕೀಯ | ಭರವಸೆ ಈಡೇರಲಿ; ಹಲವು ಘೋಷಣೆ ಮಾಡಿದ ಸಿಎಂ

Webdesk - Ravikanth

ಹಾಲಿ ನಡೆಯುತ್ತಿರುವ ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಸದನದಲ್ಲಿ ಸುದೀರ್ಘ ಉತ್ತರ ನೀಡಿದ್ದಾರೆ; ಅದೇ ಸಮಯದಲ್ಲಿ ಸರ್ಕಾರದ ಮುಂದಿನ ಸಾಗುವಿಕೆಯ ಜಾಡಿನ ಸುಳಿವು ಕೊಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ ರಚನೆ, ವಸತಿ ಯೋಜನೆಗಳ ಆದಾಯ ಮಿತಿ ಹೆಚ್ಚಳ, ನಕಲಿ ಬಿತ್ತನೆ ಬೀಜ ತಡೆಗೆ ಪ್ರಯತ್ನ, ಎಲ್ಲ ವಿದ್ಯಾರ್ಥಿ ವೇತನಗಳ ಮುಂದುವರಿಕೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಹಿತಾನುಭವದ ಭರವಸೆ ನೀಡಿದ್ದಾರೆ; ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಕಾರಾತ್ಮಕ ನೋಟವನ್ನೂ ನೀಡಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನಾಂತರವಾಗಿ ವೇತನ ಪರಿಷ್ಕರಿಸಲು ಆಯೋಗ ರಚಿಸಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ. ಈ ಬಗ್ಗೆ ವಿಸõತ ಅಧ್ಯಯನ ಮಾಡಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ತಯಾರಿಸಲು ಆದಷ್ಟು ಬೇಗ ವೇತನ ಆಯೋಗ ರಚನೆ ಮಾಡಲಾಗುವುದು ಎಂದು ಸಿಎಂ ಹೇಳಿದರು. ಈ ಮಾತು ನೌಕರರಲ್ಲಿ ಸಹಜವಾಗಿ ಆಶಾಭಾವ ಮೂಡಿಸಿದೆ. ವಸತಿ ಯೋಜನೆಗಳ ಆದಾಯ ಮಿತಿಯನ್ನು ಗ್ರಾಮೀಣ ಭಾಗದಲ್ಲಿ 32 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ, ನಗರ ಪ್ರದೇಶದಲ್ಲಿ 87,600 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಪ್ರಕಟಿಸಿರುವುದು ಫಲಾನುಭವಿಗಳಲ್ಲಿ ಸಂತಸ ಉಂಟುಮಾಡುವಂತಹದು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ, ಗೃಹ ನಿರ್ಮಾಣ ಯೋಜನೆಯ ಕೊಡುಗೆಯೂ ಸಾಕಷ್ಟಿದೆ ಎಂಬುದರ ಹಿನ್ನೆಲೆಯಲ್ಲಿ ಈ ಪ್ರಕಟಣೆ ಮಹತ್ವವಾದುದು. ನಕಲಿ ಬಿತ್ತನೆ ಬೀಜ ಹಾವಳಿಗೆ ತಡೆ ಹಾಕಲು ಸರ್ಕಾರದಿಂದಲೇ ಬಿತ್ತನೆ ಬೀಜ ಉತ್ಪಾದನೆ ಹೆಚ್ಚಿಸಲಾಗುವುದು ಎಂದೂ ಸಿಎಂ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲ ಎಂಬ ನೆಲೆಯಲ್ಲಿ ‘ಡಬಲ್ ಇಂಜಿನ್ ಸರ್ಕಾರ’ ಎಂಬ ಪದ ಠಂಕಿಸಲಾಗಿದೆ. ರಾಜ್ಯದ ವಿಪಕ್ಷಗಳು ಈ ಪದಪುಂಜವನ್ನಿಟ್ಟುಕೊಂಡು ಅವಕಾಶ ಸಿಕ್ಕಾಗೆಲ್ಲ ಸರ್ಕಾರವನ್ನು ಛೇಡಿಸುತ್ತವೆ. ‘ರಾಜ್ಯದ ಡಬಲ್ ಇಂಜಿನ್ ಸರ್ಕಾರ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಬಜೆಟ್ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಬೊಮ್ಮಾಯಿ ಈ ಟೀಕೆಗೆ ಉತ್ತರಿಸಿದರು. ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿಲ್ಲ ಎಂದೂ ಅವರು ಸಮರ್ಥಿಸಿಕೊಂಡು ಅಂಕಿಅಂಶದ ವಿವರ ನೀಡಿದರು. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಸಾಲ ಮರುಪಾವತಿ ಸಮಸ್ಯೆಯಾಗದಂತೆ ಎಚ್ಚರವಹಿಸಿದ್ದೇವೆ ಹಾಗೂ ರಾಜಸ್ವ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ ಎಂದೂ ಅವರು ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಅವರ ಮಾತುಗಳು ಹಲವು ವಲಯಗಳಲ್ಲಿ ಆಶಾಭಾವನೆ ಮೂಡಿಸುವಂತಿವೆ ಎಂಬುದು ನಿಜ. ಆದರೆ ಇಕ್ಕಟ್ಟಿನ ಆರ್ಥಿಕ ಪರಿಸ್ಥಿತಿಯಲ್ಲಿ ಎಷ್ಟು ಯೋಜನೆಗಳನ್ನು ಯಥಾವತ್ತಾಗಿ ಜಾರಿಯಲ್ಲಿ ತರಲು ಸಾಧ್ಯವಾಗುತ್ತದೆ ಎಂಬ ಜಿಜ್ಞಾಸೆ ಕೂಡ ಇದೆ. 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ಷಮತೆಯನ್ನು ಪುರಾವೆ ಮೂಲಕ ಜನರೆದುರು ಮಂಡಿಸಲು ಇದು ಕೊನೆಯ ಅವಕಾಶ. ಈ ನಿಟ್ಟಿನಲ್ಲಿ ಸರ್ಕಾರ ಎಷ್ಟು ಅಂಕ ಗಳಿಸುತ್ತದೆ ಎಂಬುದು ಮುಂದೆ ನಿರ್ಣಾಯಕವಾಗಲಿದೆ.