ನ್ಯೂಸ್

ಆತ್ಮನಿರ್ಭರದಿಂದ ಅನುಕೂಲ; ಭಾರತೀಯ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳ ಹಸ್ತಾಂತರ..

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮರುದಿನವೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿಪುಣ್ ಲ್ಯಾಂಡ್ ಮೈನ್ಸ್, ಎಫ್ ಇನ್ಸಾಸ್, ಎಲ್​ಸಿಎ ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿರುವುದು ಸೇನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಮಹತ್ವದ ಕ್ರಮವಾಗಿದೆ. ಈ ಸಾಧನಗಳು ಮೇಡ್ ಇನ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಫಲಶ್ರುತಿಗಳಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪೂರಕವೆಂದು ಹೇಳಬಹುದಾಗಿದೆ.

ಪದಾತಿ ದಳ ಸೈನಿಕರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಆಧುನಿಕ ಉಪಕರಣಗಳ ವ್ಯವಸ್ಥೆಯೇ ಫ್ಯೂಚರ್ ಇನ್​ಫ್ಯಾಂಟ್ರಿ ಸೋಲ್ಜರ್ ಆಸ್ ಎ ಸಿಸ್ಟಮ್ 300 ಮೀಟರ್ ವ್ಯಾಪ್ತಿಯ ಎಕೆ 203 ರೈಫಲ್ ಕೂಡ ಇದರಲ್ಲಿದೆ. ರಷ್ಯಾ-ಭಾರತ ಜಂಟಿ ಉದ್ಯಮದಲ್ಲಿ ಅಮೇಥಿ ಬಳಿಯ ಕೊರ್ವಾದಲ್ಲಿ ಈ ರೈಫಲ್ ತಯಾರಿಸಲಾಗುತ್ತಿದೆ ಎಂಬುದು ಗಮನಾರ್ಹ. ಎಕೆ 47 ಬಂದೂಕಿನಿಂದ ಹೊಡೆದ ಗುಂಡನ್ನು ತಡೆಯುವ ಸಾಮರ್ಥ್ಯದ ಬುಲೆಟ್ ಪೂ›ಫ್ ಜಾಕೆಟ್ ಮತ್ತು ಹೆಲ್ಮೆಟ್ ಈ ವ್ಯವಸ್ಥೆಯಲ್ಲಿದ್ದು, ಸೈನಿಕರ ಜೀವ ಕಾಪಾಡಲು ನೆರವಾಗಲಿದೆ. ಪುಣೆಯಲ್ಲಿರುವ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಯಾರಿಸಿರುವ ನಿಪುಣ್ ಹೆಸರಿನ ನೆಲಬಾಂಬ್, ಉಗ್ರರ ಒಳನುಸುಳುವಿಕೆ ತಡೆಯಲು ಅನುಕೂಲಕರ ಎನ್ನಲಾಗಿದೆ. ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ (ಎಸಿಎ) ಸ್ವದೇಶಿ ನಿರ್ವಿುತ ದೋಣಿ ಯಾಗಿದ್ದು, ಗೋವಾದ ಅಕ್ವೇರಿಯಸ್ ಶಿಪ್ ಯಾರ್ಡ್ ಲಿಮಿಟೆಡ್ ಇದನ್ನು ಅಭಿವೃದ್ಧಿಪಡಿಸಿದೆ. ಲಡಾಖ್- ಚೀನಾ ಗಡಿಯಲ್ಲಿರುವ ಪ್ಯಾಂಗೊಂಗ್ ತ್ಸೊ ಸರೋವರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸೀಮಿತ ಸಾಮರ್ಥ್ಯಗಳ ದೋಣಿಗಳ ಬದಲಿಯಾಗಿ ಇದನ್ನು ಬಳಸಲು ಉದ್ದೇಶಿಸಲಾಗಿದೆ.

ಭಾರತವು ರಕ್ಷಣೆಗಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತದೆ. 2022-23 ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ರಕ್ಷಣಾ ವೆಚ್ಚಗಳಿಗೆ ಮೀಸಲಿಟ್ಟಿರುವ ಹಣ 5,25,166 ಕೋಟಿ ರೂಪಾಯಿ. ಇದು ಒಟ್ಟಾರೆ ಬಜೆಟ್​ನ ಶೇ. 9.8ರಷ್ಟು ಆಗುತ್ತದೆ. ಅಮೆರಿಕ ಹಾಗೂ ಚೀನಾದ ನಂತರ ರಕ್ಷಣೆಗಾಗಿ ಅತಿಹೆಚ್ಚು ವ್ಯಯ ಮಾಡುವ ರಾಷ್ಟ್ರ ಭಾರತವಾಗಿದೆ. ರಷ್ಯಾ, ಫ್ರಾನ್ಸ್, ಇಸ್ರೇಲ್, ಅಮೆರಿಕ, ಇಂಗ್ಲೆಂಡ್​ಗಳಿಂದ ಬಹುಪಾಲು ರಕ್ಷಣಾ ಸಾಧನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. 2021ನೇ ಸಾಲಿನಲ್ಲಿ ಜಗತ್ತಿನ ಒಟ್ಟಾರೆ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ. 17.2 ಇತ್ತು. ಸೇನಾ ಸಾಧನಗಳಲ್ಲಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದು ಹಲವು ದೃಷ್ಟಿಕೋನಗಳಿಂದ ಅನನುಕೂಲ ಸಂಗತಿಯಾಗಿದೆ. ಶಸ್ತ್ರಾಸ್ತ್ರ ಖರೀದಿಗಾಗಿಯೇ ನಮ್ಮ ವಿದೇಶಿ ವಿನಿಮಯ ಸಂಗ್ರಹ ಕರಗಿ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಅಲ್ಲದೆ, ನಮಗೆ ಅಗತ್ಯವಿದ್ದ ಸಮಯದಲ್ಲಿ ಹಾಗೂ ನಾವು ಬಯಸುವಂತಹ ಶಸ್ತ್ರಾಸ್ತ್ರಗಳು ಲಭಿಸುವ ಸಾಧ್ಯತೆ ಕಡಿಮೆ. 36 ರಫೆಲ್ ಯುದ್ಧವಿಮಾನಗಳ ಖರೀದಿಗೆ ಫ್ರಾನ್ಸ್​ನೊಂದಿಗೆ 2016ರಲ್ಲೇ ಒಪ್ಪಂದವಾಗಿದ್ದರೂ ಈಗಷ್ಟೇ ಅವುಗಳನ್ನು ಪೂರೈಸಲಾಗಿದೆ. ದೇಶದಲ್ಲೇ ರಕ್ಷಣಾ ಉಪಕರಣಗಳ ಉತ್ಪಾದನೆ ಹೆಚ್ಚಿದರೆ ಉದ್ಯೋಗ ಸೃಷ್ಟಿಗೂ ಕೊಡುಗೆ ನೀಡಿದಂತಾಗುತ್ತದೆ. ಸ್ವದೇಶಿ ನಿರ್ವಿುತ ತೇಜಸ್ ಹಗುರ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಈಚೆಗೆ ಸೇರ್ಪಡೆ ಮಾಡಿರುವುದು ಈ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ. ರಕ್ಷಣಾ ಕ್ಷೇತ್ರದ ಆಧುನೀಕರಣಕ್ಕಾಗಿ ಬಜೆಟ್​ನಲ್ಲಿ ಮೀಸಲಿಟ್ಟಿರುವ ಹಣದಲ್ಲಿ ಅಂದಾಜು 70 ಸಾವಿರ ಕೋಟಿ ರೂಪಾಯಿಗಳನ್ನು ದೇಶೀಯವಾಗಿ ನಿರ್ವಿುಸಲಾದ ಉಪಕರಣಗಳ ಖರೀದಿಗೆ ಬಳಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿರುವುದು ಕೂಡ ಮಹತ್ವದ ಸಂಗತಿಯಾಗಿದೆ.