ನ್ಯೂಸ್

ಭಾರತದ ಹಿತಾಸಕ್ತಿ ಮುಖ್ಯ; ಅಫ್ಘಾನಿಸ್ತಾನದಲ್ಲಿ ಅಶಾಂತಿ

Webdesk - Ravikanth

ಮತ್ತೆ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಅಯೋಮಯ ಉಂಟಾಗಿದೆ. ಅಲ್ಲಿನ ಜನರಲ್ಲಿ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದ್ದರೆ, ಜಾಗತಿಕ ದೇಶಗಳು ತಂತಮ್ಮ ಹಿತಾಸಕ್ತಿ ರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ; ಭಾರತವೂ ಇದಕ್ಕೆ ಹೊರತಲ್ಲ. ಅಲ್ಲಿ ತಾಲಿಬಾನ್ ಆಡಳಿತ ಶುರುವಾಗಲಿರುವುದರಿಂದ, ಏನಾಗುವುದೋ ಎಂಬ ಆತಂಕದಿಂದ ಹಲವರು ಅಲ್ಲಿಂದ ಹೊರತೆರಳಲು ಅವಸರಿಸುತ್ತಿದ್ದು, ಸೋಮವಾರ ಕಾಬುಲ್ ವಿಮಾನನಿಲ್ದಾಣದಲ್ಲಿ ಅಕ್ಷರಶಃ ನೂಕುನುಗ್ಗಲು ಏರ್ಪಟ್ಟಿತ್ತು; ವಿಮಾನ ಟೇಕಾಫ್ ಆಗುತ್ತಿದ್ದಾಗ ಹಲವರು ಅದರೊಟ್ಟಿಗೇ ಓಡಿದ್ದು, ರೆಕ್ಕೆಯೇರಿದ್ದು ಇವನ್ನೆಲ್ಲ ನೋಡಿದಾಗ, ಅಲ್ಲಿನ ಜನರ ಮನಸ್ಥಿತಿ ಹೇಗಿರಬಹುದೆಂದು ಊಹಿಸಬಹುದು. ಈ ಹಿಂದೆ, 1996-2001ರವರೆಗೆ ಆ ದೇಶದಲ್ಲಿ ತಾಲಿಬಾನ್ ಆಡಳಿತ ನಡೆಸಿದ್ದು, ಮತ್ತೊಮ್ಮೆ ಜನರಿಗೆ ಸ್ವಾತಂತ್ರ್ಯವಿಲ್ಲದ ಬಂಧನದ ಸ್ಥಿತಿ ಎದುರಾಗುವುದು ಖಚಿತ ಎಂಬ ಭಾವನೆ ಮೂಡಿದೆ. ಅಂತೂ ಶಿಕ್ಷಣದ ಮುಖ ಕಂಡಿದ್ದ ಹೆಣ್ಮಕ್ಕಳಿಗೆ ಮತ್ತೆ ಶಾಲೆಯಿಂದ ಬಹಿಷ್ಕಾರದ ಭೀತಿ ಎದುರಾಗಿದೆ.

ಇನ್ನು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಭಾರತ ತಲೆಕೆಡಿಸಿಕೊಳ್ಳಲು ಬಲವಾದ ಕಾರಣಗಳಿವೆ. ತಾಲಿಬಾನ್ ಆಡಳಿತದ ತರುವಾಯ ಅಫ್ಘನ್ ಪುನರ್ನಿರ್ವಣದಲ್ಲಿ ಭಾರತ ಕೂಡ ಪ್ರಮುಖ ಪಾತ್ರ ವಹಿಸಿದೆ. ಕಾಬುಲ್​ನಲ್ಲಿ ಭವ್ಯ ಸಂಸತ್ ಭವನ, ದೇಶದ ಹಲವೆಡೆ ಶಾಲಾಕಾಲೇಜುಗಳು, ಅಣೆಕಟ್ಟುಗಳು, ಸರ್ಕಾರಿ ಕಚೇರಿಗಳು ಮುಂತಾದವನ್ನು ನಿರ್ವಿುಸಿಕೊಟ್ಟಿದೆ. ಹೀಗಾಗಿ ಅಲ್ಲಿನ ಜನಸಾಮಾನ್ಯರಲ್ಲಿ ಭಾರತದ ಬಗ್ಗೆ ಸದ್ಭಾವನೆಯೇ ಇದೆ. ಆದರೆ ಭಾರತವನ್ನು ಸದಾ ದ್ವೇಷಿಸುವ ಪಾಕಿಸ್ತಾನ ಮತ್ತು ಚೀನಾಗಳು ಅಫ್ಘಾನಿಸ್ತಾನದಲ್ಲಿನ ಸದ್ಯದ ಅರಾಜಕ ಸನ್ನಿವೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಭಾರತಕ್ಕೆ ಮತ್ತಷ್ಟು ತಲೆನೋವು ಉಂಟುಮಾಡುವುದು ನಿಶ್ಚಿತ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ. ಲಷ್ಕರ್, ಜೈಷ್ ಮುಂತಾದ ಭಯೋತ್ಪಾದನಾ ಸಂಘಟನೆಗಳ ಸುಮಾರು 10 ಸಾವಿರ ಭಯೋತ್ಪಾದಕರು ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿದ್ದು, ಅಲ್ಲಿ ಭಾರತದ ಹಿತಾಸಕ್ತಿಗೆ ಧಕ್ಕೆ ತರುವುದು ಹಾಗೂ ಅಲ್ಲಿರುವ ಭಾರತೀಯರಿಗೆ ಜೀವಾಪಾಯ ಉಂಟುಮಾಡುವುದು ಇವರ ಉದ್ದೇಶ ಎಂದು ಹೇಳಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇದರ ಹಿಂದೆ ಇರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.

ಇಷ್ಟು ಸಾಲದೆಂಬಂತೆ, ಚೀನಾ ಕೂಡ ಪಾಕ್ ಕುಕೃತ್ಯಕ್ಕೆ ಸಾಥ್ ನೀಡುವ ಸಾಧ್ಯತೆ ಇರುವುದರಿಂದಾಗಿ ಭಾರತ ಸಹಜವಾಗಿಯೇ ಹೆಚ್ಚು ಜಾಗರೂಕವಾಗಿರಬೇಕಾಗುತ್ತದೆ. ಹಿಂದಿನ ಸಲ ತಾಲಿಬಾನ್ ಆಡಳಿತದ ಜತೆ ಮಾತುಕತೆ ಇಲ್ಲ ಎಂಬ ನಿಲುವನ್ನು ಭಾರತ ತಾಳಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ, ಅಲ್ಲಿ ನಮ್ಮ ಹಿತಾಸಕ್ತಿಗಳೂ ಇರುವುದರಿಂದಾಗಿ ಮಾತುಕತೆಗೆ ಮುಕ್ತ ಮನವನ್ನು ಭಾರತ ಹೊಂದಿರುವ ಸುಳಿವು ಸಿಕ್ಕಿದೆ. ಅಫ್ಘಾನಿಸ್ತಾನದಲ್ಲಿ ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಜತೆಗೆ, ಈ ಸಂದರ್ಭದ ದುರ್ಲಾಭ ಪಡೆದು ಭಾರತದೊಳಕ್ಕೆ ಭಯೋತ್ಪಾದಕರನ್ನು ನುಗ್ಗಿಸುವ ಕೆಲಸ ಆಗದಂತೆ ನೋಡಿಕೊಳ್ಳಬೇಕಾದುದು ಬಹುದೊಡ್ಡ ಜವಾಬ್ದಾರಿ,. ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಬಹುಮಟ್ಟಿಗೆ ಹತ್ತಿಕ್ಕಿರುವ ನಮ್ಮ ಸೇನೆ ಈ ವಿಷಯದಲ್ಲಿ ಸಮರ್ಥವಾಗಿ ಹೊಣೆಗಾರಿಕೆ ನಿಭಾಯಿಸುತ್ತದೆ ಎಂಬುದರಲ್ಲಿ ಸಂಶಯಕ್ಕೆ ಆಸ್ಪದವೇ ಇಲ್ಲ. ಅದಕ್ಕೆ ತಕ್ಕಂತೆ, ರಾಜಕೀಯ ನಾಯಕತ್ವ ಕೂಡ ರಾಜತಾಂತ್ರಿಕವಾಗಿ ಗಟ್ಟಿಯಾದ ಹಾಗೂ ಜಾಣ್ಮೆಯ ಕಾರ್ಯತಂತ್ರವನ್ನು ಹೆಣೆಯುತ್ತದೆ ಎಂಬುದಾಗಿ ನಂಬಬಹುದು.