ನ್ಯೂಸ್

ಸವಾಲು-ಅವಕಾಶ: ಜಾಗತಿಕ ಜನಸಂಖ್ಯೆ 800 ಕೋಟಿ

Webdesk - Ravikanth

ಜಾಗತಿಕ ಜನಸಂಖ್ಯೆ ಮಂಗಳವಾರ 800 ಕೋಟಿಗೆ ತಲುಪಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 2030ರ ಹೊತ್ತಿಗೆ 850 ಕೋಟಿಗೆ, 2050ರ ಹೊತ್ತಿಗೆ 970 ಕೋಟಿಗೆ, 2100ರ ಹೊತ್ತಿಗೆ 1040 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇಪ್ಪತ್ತನೇ ಶತಮಾನದ ಆರಂಭದಿಂದ ಜನಸಂಖ್ಯೆ ಏರಿಕೆ ಪ್ರಮಾಣ ವೇಗ ಪಡೆದಿದ್ದು, ಈವರೆಗೆ ಸುಮಾರು 5 ಪಟ್ಟು ಹೆಚ್ಚಾಗಿದೆ. ಇನ್ನೊಂದು ಸಂಗತಿಯೆಂದರೆ, ಮುಂದಿನ ವರ್ಷದ ಹೊತ್ತಿಗೆ ಭಾರತವು ಚೀನಾವನ್ನು ಮೀರಿಸಲಿದೆ ಎಂದು ಸಹ ವರದಿ ಹೇಳಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿಶೀಲ ದೇಶಗಳಲ್ಲಿ ಜನರ ಸಂಖ್ಯೆ ಹೆಚ್ಚಿಗೆ ಇದೆ. ಜನಸಂಖ್ಯೆ ಹೆಚ್ಚಳಕ್ಕೆ ಬದಲಾದ ಕಾಲಘಟ್ಟದಲ್ಲಿ ಅನೇಕ ಕಾರಣಗಳಿವೆ. ವೈದ್ಯಕೀಯ ಸವಲತ್ತು ಅಷ್ಟಾಗಿ ಇಲ್ಲದ ಕಾಲದಲ್ಲಿ ಶಿಶುಮರಣ ಪ್ರಮಾಣ ಹೆಚ್ಚಿಗೆ ಇರುತ್ತಿತ್ತು. ಈಗ ಅನೇಕ ದೇಶಗಳಲ್ಲಿ ಈ ಪ್ರಮಾಣ ತಗ್ಗಿದೆ.

ಇನ್ನೊಂದೆಡೆ, ಜನರ ಜೀವಿತಾವಧಿ ಹೆಚ್ಚಳವಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ಲಭ್ಯತೆ ಮತ್ತು ಸೇವನೆ ಹೆಚ್ಚಿದೆ, ಆರೋಗ್ಯ ರಂಗದಲ್ಲಿ ಸಹ ಭಾರಿ ಬದಲಾವಣೆಗಳಾಗಿವೆ. ಜನಸಂಖ್ಯೆಯ ಹೆಚ್ಚಳವು ಸಹಜವಾಗಿಯೇ ಅನೇಕ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ. ತಾಪಮಾನ ಹೆಚ್ಚಳದ ಬಿಸಿ ಈಗಾಗಲೇ ಜಾಗತಿಕವಾಗಿ ತಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಷ್ಪರಿಣಾಮದ ಅಪಾಯ ಇದೆ. ಜನಸಂಖ್ಯೆ ಹೆಚ್ಚಿದಾಗ ಇಂಧನ ಬಳಕೆ ಹಾಗೂ ಮಾಲಿನ್ಯ ಪ್ರಮಾಣವೂ ಹೆಚ್ಚುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶ್ವದೇಶಗಳು ಪ್ಯಾರಿಸ್ ಒಡಂಬಡಿಕೆ ಮಾಡಿಕೊಂಡಿದ್ದು ಈ ಯತ್ನಗಳು ನಿಧಾನವಾಗಿ ಫಲ ಕೊಡುತ್ತವೆ. ಆದಾಯದಲ್ಲಿ ಅಸಮಾನತೆ ಮತ್ತೊಂದು ಸಮಸ್ಯೆ. ಇದರಿಂದ ಸಾಮಾಜಿಕ ಆರ್ಥಿಕ ಬಿಕ್ಕಟ್ಟುಗಳೂ ಉಂಟಾಗುತ್ತವೆ. ಅತಿಯಾದ ನಗರೀಕರಣ ಈಗಾಗಲೇ ಹಲವು ತೊಂದರೆಗಳನ್ನು ತಂದಿಟ್ಟಿದೆ. ಅದರಲ್ಲೂ ಉದಾರೀಕರಣದ ನಂತರದಲ್ಲಿ ನಗರ ವಲಸೆ ಹೆಚ್ಚಿದ್ದು, ಹಾಲಿ ಪ್ರಪಂಚದ ಜನಸಂಖ್ಯೆಯಲ್ಲಿ ಶೇ. 56ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.

ಮುಂದಿನ 25 ವರ್ಷಗಳಲ್ಲಿ 10ರಲ್ಲಿ 7 ಜನರು ನಗರಗಳಲ್ಲಿ ವಾಸಿಸುತ್ತಿರುತ್ತಾರೆಂದು ವಿಶ್ವಸಂಸ್ಥೆ ಅಂದಾಜಿಸಿದ್ದು, ನಗರ ಯೋಜನೆ, ಮೂಲಸೌಕರ್ಯ, ಉದ್ಯೋಗ ಇತ್ಯಾದಿ ವಿಚಾರದಲ್ಲಿ ಎದುರಾಗುವ ಸವಾಲುಗಳನ್ನು ಊಹಿಸುವುದು ಕಷ್ಟವೇನಲ್ಲ. ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ದಶಕಗಳ ಹಿಂದೆಯೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಇದರ ಪರಿಣಾಮ ಕಂಡುಬರಲು ದೀರ್ಘಕಾಲ ಬೇಕಾಗುತ್ತದೆ. ಹೀಗಾಗಿಯೇ ಇನ್ನೊಂದು ವರ್ಷದಲ್ಲಿ ಚೀನಾಕ್ಕಿಂತ ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇರುತ್ತದೆ. ಇದರರ್ಥ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ ಎಂದು. ಏಕೆಂದರೆ, ಭಾರತದಂತಹ ವಿಶಾಲ, ವೈವಿಧ್ಯಮಯ ದೇಶದಲ್ಲಿ ಸರ್ಕಾರಿ ಯೋಜನೆಗಳನ್ನು ರೂಪಿಸುವ ಜತೆಗೆ ಅದರ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದೇ ಪ್ರಯಾಸದ ಕೆಲಸ. ಹಾಗಂತ, ಜನಸಂಖ್ಯೆ ಹೆಚ್ಚಿದೆಯೆಂದು ಭಾರತದಂತಹ ದೇಶ ಕಂಗಾಲಾಗಬೇಕಿಲ್ಲ. ಇದನ್ನೇ ಅವಕಾಶವಾಗಿಸಿಕೊಂಡು ಹೊಸಹೊಸ ಬಗೆಯ ಉದ್ಯಮ-ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕಿದೆ. ಭಾರತವು ತನ್ನ ತಂತ್ರಜ್ಞಾನ ನೈಪುಣ್ಯವನ್ನು ಬಳಸಿಕೊಂಡು, ಯುವಜನರ ಪ್ರತಿಭೆಯನ್ನು ಸದುಪಯೋಗಪಡಿಸಿಕೊಂಡು ಅದ್ಭುತಗಳನ್ನು ಸಾಧಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದು ಸಕಾರಾತ್ಮಕ ಅಂಶ.