ನ್ಯೂಸ್

ಸೂಕ್ತ ಸ್ಪಂದನೆ ಅಗತ್ಯ: ಮಳೆಯಿಂದ ಹಲವು ಪ್ರದೇಶಗಳಲ್ಲಿ ಹಾನಿ..

Webdesk - Ravikanth

ರಾಜ್ಯದಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹಸದೃಶ ಸ್ಥಿತಿ ಸೃಷ್ಟಿಯಾಗಿದೆ. ಬೆಳೆ, ಆಸ್ತಿಪಾಸ್ತಿ ಹಾನಿಯ ಘಟನೆಗಳು ವರದಿಯಾಗುತ್ತಿದ್ದು, ಭೂಕುಸಿತ, ಗ್ರಾಮಗಳೇ ಜಲಾವೃತಗೊಂಡ ನಿದರ್ಶನಗಳೂ ಇವೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವರುಣನ ರುದ್ರನರ್ತನ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಿದೆ. ನದಿಗಳು ಮೈದುಂಬಿ ಹರಿಯುತ್ತಿವೆ. ಮುಂಬರುವ ದಿನಗಳಲ್ಲಿ ಮಳೆಯ ಅಬ್ಬರ ಇನ್ನಷ್ಟು ಜೋರಾಗಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರವಾಹ ಸಂಬಂಧಿತ ಅನಾಹುತಗಳನ್ನು ತಡೆಯಲು ಸರ್ಕಾರ ಸಜ್ಜಾಗಬೇಕಿದೆ. ಕರಾವಳಿಯಲ್ಲಿ ಮುಂದಿನ ಐದು ದಿನ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದರೆ, ಉತ್ತರ ಒಳನಾಡಿನಲ್ಲಿ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೊಷಣೆ ಮಾಡಲಾಗಿದೆ. ಅಂದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವುದು ಸ್ಪಷ್ಟ. ಮುಂಗಾರು ಆರಂಭದ ಹಂತದಲ್ಲೇ ಹವಾಮಾನ ಇಲಾಖೆ ಇಂಥದ್ದೊಂದು ಸಾಧ್ಯತೆಯನ್ನು ವ್ಯಕ್ತಪಡಿಸಿತ್ತು. ಹಾಗಾಗಿಯೇ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದರು.

ವಾಯುಭಾರ ಕುಸಿತವೂ ಮಳೆ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಪ್ರಕೃತಿಯ ಅವಘಡಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ಅವುಗಳ ಪರಿಣಾಮವನ್ನು ಒಂದಿಷ್ಟು ನಿಯಂತ್ರಿಸಲು ಸಾಧ್ಯವಿದೆ. ಈಗಾಗಲೇ ಕರೊನಾ ಸೋಂಕಿನ ಎರಡನೇ ಅಲೆಯಿಂದ ತತ್ತರಿಸಿರುವ ಕರ್ನಾಟಕ, ಕೆಲ ವಾರಗಳಿಂದ ಸಹಜಸ್ಥಿತಿಗೆ ಬರುತ್ತಿದೆ. ಈ ಬಾರಿ ಗ್ರಾಮೀಣ ಪ್ರದೇಶದಲ್ಲೂ ಕೋವಿಡ್ ಹಲವು ವಿಧವಾದ ಸಂಕಷ್ಟ ಸೃಷ್ಟಿಸಿದ್ದರಿಂದ, ಕೃಷಿಕರು ಸೇರಿ ಹಲವು ವಲಯದವರು ಸಮಸ್ಯೆ ಎದುರಿಸುತ್ತಿದ್ದಾರೆ. ಕರೊನಾಘಾತದ ಬೆನ್ನಲ್ಲೇ ಅತಿವೃಷ್ಟಿಯ ಆತಂಕ ಸೃಷ್ಟಿಯಾಗಿದ್ದು, ಪರಿಸ್ಥಿತಿಯನ್ನು ಆರಂಭದ ಹಂತದಲ್ಲೇ ನಿಯಂತ್ರಿಸಬೇಕಿದೆ. ಇಲ್ಲಿ ಪ್ರಮುಖ ಹೊಣೆ ಇರುವುದು ಜಿಲ್ಲಾಡಳಿತಗಳಿಗೆ. ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ, ಹಾನಿ ಸಂಭವಿಸಿದ ಪ್ರದೇಶಗಳೆಷ್ಟು, ಕೈಗೊಳ್ಳಬೇಕಾದ ತುರ್ತು ಪರಿಹಾರ ಕ್ರಮಗಳೇನು ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಅಲ್ಲದೆ, ಹಾನಿಯ ಪ್ರಮಾಣ ಕುರಿತಂತೆ ಸರ್ಕಾರಕ್ಕೆ ನಿಖರ, ಪಾರದರ್ಶಕ ವರದಿ ಸಲ್ಲಿಸಿದಲ್ಲಿ, ಮುಂದಿನ ದಿನಗಳಲ್ಲಿ ಪರಿಹಾರ ಕಾರ್ಯಗಳಿಗೆ ಅನುಕೂಲವಾಗುತ್ತದೆ.

ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೂ ಇಲ್ಲಿ ಮುಖ್ಯ. ಅವರಿಗೆ ತಮ್ಮ ಮತಕ್ಷೇತ್ರದ ಭೌಗೋಳಿಕ ಪರಿಸರದ ಅರಿವು ಇರುವುದರಿಂದ, ಮಳೆಯಿಂದ ಹಾನಿ, ಸಂಕಷ್ಟ ಅನುಭವಿಸಿದವರ ನೆರವಿಗೆ ತುರ್ತಾಗಿ ಧಾವಿಸಬಹುದು. ಮತ್ತು ಈ ಹೊತ್ತಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಗಳು ಅವ್ಯವಹಾರಕ್ಕೆ ಆಸ್ಪದವಿಲ್ಲದಂತೆ, ಮಧ್ಯವರ್ತಿಗಳನ್ನು ಸೃಷ್ಟಿಸದೆ ಪಾರದರ್ಶಕವಾಗಿ ನೈಜ ಫಲಾನುಭವಿಗಳಿಗೆ ತಲುಪಬೇಕು. ಕೃಷಿಕರಿಗಾಗಿಯೇ ಇರುವ ಯೋಜನೆಗಳೂ ಸಮರ್ಪಕವಾಗಿ ತಲುಪಬೇಕು.