ನ್ಯೂಸ್

ಜಾಗೃತಿ ಮುಖ್ಯ: ಮೋಸ-ವಂಚನೆ ಜಾಲಕ್ಕೆ ಬಲಿಯಾಗದಿರಿ...

Webdesk - Ravikanth

ಕ್ಷಣಾರ್ಧದಲ್ಲೇ ಸಾಲ ನೀಡುವ ಆಪ್​ಗಳು ಬಳಕೆದಾರರಿಗೆ ಹೇಗೆ ಮಾರಕವಾಗಿ ಪರಿಣಮಿಸಿವೆ ಎಂಬುದರ ಕುರಿತಂತೆ ಹತ್ತುಹಲವು ನಿದರ್ಶನಗಳು ಕಳೆದ ಕೆಲವೇ ದಿನಗಳಲ್ಲಿ ಬೆಳಕಿಗೆ ಬಂದಿವೆ. ವಿಳಂಬವಿಲ್ಲದೆ, ಸುಲಭವಾಗಿ ಸಾಲ ನೀಡುತ್ತೇವೆ ಎಂದು ನಂಬಿಸುವ ಇಂಥ ಕಂಪನಿಗಳ ಪ್ರತಿನಿಧಿಗಳು ಸಣ್ಣ ಮೊತ್ತದ ಸಾಲವನ್ನೇನೋ ನೀಡುತ್ತವೆ. ಆದರೆ, ಒಂದೇ ವಾರದಲ್ಲಿ ಮರುಪಾವತಿಗೆ ಪೀಡಿಸುತ್ತ ಬಡ್ಡಿ, ಚಕ್ರಬಡ್ಡಿ, ವಿಳಂಬಶುಲ್ಕ ಎಂದೆಲ್ಲ ವಿಧಿಸಿ ಹತ್ತಾರು ಸಾವಿರದ ಸಾಲಕ್ಕೆ ಲಕ್ಷಾಂತರ ರೂಪಾಯಿ ಪಾವತಿಸುವಂತೆ ಪೀಡಿಸುತ್ತಾರೆ. ಬಿಟ್ಟುಬಿಡದೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುವುದು, ಬೆದರಿಸುವುದು ಸೇರಿ ಹಲವು ಕುತಂತ್ರಗಳನ್ನು ಅನುಸರಿಸುತ್ತಾರೆ. ಇನ್ನು, ಸಾಲ ಪಡೆದ ಆಪ್ ಬಳಕೆದಾರರು ಕೂಡ ಅರ್ಥಿಕ ಸಂಕಷ್ಟದ ತುರ್ತು ಪರಿಸ್ಥಿತಿ ಎಂದುಕೊಂಡು ಆಪ್​ನ ನಿಬಂಧನೆಗಳು, ನಿಯಮಗಳು ಅಥವಾ ರಹಸ್ಯ ಕಾರ್ಯಸೂಚಿಯನ್ನು ತಿಳಿದುಕೊಳ್ಳದೆ ಎಲ್ಲದಕ್ಕೂ ‘ಒಪ್ಪಿಗೆ’ ಸೂಚಿಸಿ ಬಿಡುತ್ತಾರೆ. ಅಲ್ಲದೆ, ಸಾಲ ಪಡೆಯುವ ಸಂದರ್ಭದಲ್ಲಿ ಮಹತ್ವದ ಮಾಹಿತಿಯನ್ನು ನೀಡಿರುವುದರಿಂದ ಆ ಕಂಪನಿಗಳ ಪ್ರತಿನಿಧಿಗಳ ಕಿರುಕುಳಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹಲವೆಡೆ ಇಂಥ ಆಪ್ ಪ್ರತಿನಿಧಿಗಳ ಕಾಟ ತಾಳಲಾರದೆ ಸಾಲಗಾರರು ಆತ್ಮಹತ್ಯೆಗೆ ಶರಣಾದ ಘಟನೆಗಳು ಸಂಭವಿಸಿವೆ.

ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಹಲವು ಬಗೆಯಲ್ಲಿ ವಂಚಿಸುವ, ಮೋಸ ಮಾಡುವ ಹಲವು ಜಾಲಗಳು ಸಕ್ರಿಯವಾಗಿವೆ. ಇವು ಸುಲಭದಲ್ಲಿ ದುಡ್ಡು ಮಾಡುವ ಅಥವಾ ಜನರನ್ನು ವಂಚಿಸಿ, ಕೊಳ್ಳೆ ಹೊಡೆಯುವ ಕೆಲಸದಲ್ಲೇ ನಿರತವಾಗಿವೆ. ಸೈಬರ್ ಅಪರಾಧ ಪತ್ತೆ ವಿಭಾಗದ ಪೊಲೀಸರು ಕಾಲಕಾಲಕ್ಕೆ ಇಂಥ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಆದರೂ, ಜನರ ಅಮಾಯಕತೆ, ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ಕಳವಳಕಾರಿ. ಈ ಬಗೆಯ ಸರಣಿ ಪ್ರಕರಣಗಳು ವರದಿಯಾದ ಬಳಿಕ ಇಂಥ ಸಾಲದ ಆಪ್​ಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ಈ ನಿಟ್ಟಿನಲ್ಲಿ ಗೂಗಲ್ ಮಹತ್ವದ ಹೆಜ್ಜೆ ಇರಿಸಿರುವುದು ತಾಜಾ ಬೆಳವಣಿಗೆ. ಬಳಕೆದಾರರ ಸುರಕ್ಷಾ ನೀತಿಗಳನ್ನು ಉಲ್ಲಂಘಿಸಿದ ಅನೇಕ ಭಾರತೀಯ ಲೋನ್ ಆಪ್​ಗಳನ್ನು ಗೂಗಲ್ ಪ್ಲೇಸ್ಟೋರ್​ನಿಂದ ತೆಗೆದು ಹಾಕಿದೆ. ವೈಯಕ್ತಿಕ ಬಳಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ್ದ ನೂರಾರು ದೂರುಗಳನ್ನು ಪರಿಶೀಲಿಸಿದೆ. ‘ಸುರಕ್ಷತಾ ನೀತಿ ಉಲ್ಲಂಘಿಸಿದ ಆಪ್​ಗಳನ್ನು ತಕ್ಷಣವೇ ಪ್ಲೇಸ್ಟೋರ್​ನಿಂದ ತೆಗೆದು ಹಾಕಲಾಗಿದೆ’ ಎಂದು ಗೂಗಲ್ ತಿಳಿಸಿದೆ. ಭದ್ರತಾ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳನ್ನು ಪಾಲಿಸದಿದ್ದರೆ ಅಂಥ ಆಪ್​ಗಳನ್ನೂ ತೆಗೆದು ಹಾಕಲಾಗುವುದು ಎಂದು ಗೂಗಲ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಈ ವಿಷಯದಲ್ಲಿ ಗೂಗಲ್ ತನ್ನ ಜವಾಬ್ದಾರಿ ನಿರ್ವಹಿಸಿದೆ. ಆದರೆ, ಜನರೂ ಜಾಗೃತರಾಗಬೇಕಾದ ಅಗತ್ಯವಿದೆ. ಅಷ್ಟಕ್ಕೂ, ಸಾಲ ಪಡೆಯಲು ಸಾಂಪ್ರದಾಯಿಕ ವಿಧಾನಗಳೇ ಸುರಕ್ಷಿತ ಮತ್ತು ಸರಳ ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು. ಸರ್ಕಾರಿ ವಲಯ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಇತ್ತೀಚಿನ ದಿನಗಳಲ್ಲಿ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಿವೆ. ಆ ಕುರಿತಂತೆ ಅಗತ್ಯ ಮಾಹಿತಿಯನ್ನೂ ಒದಗಿಸುತ್ತಿವೆ. ಹೀಗಿರುವಾಗ ಯಾವುದೋ ಆಪ್​ಗಳ ಮೋಸದ ಜಾಲಕ್ಕೆ ಸಿಲುಕಿ, ನರಳುವುದು ಬೇಡ.