ಸ್ವಾತಂತ್ರ್ಯಪ್ರಾಪ್ತಿಯ ಅಮೃತ ಮಹೋತ್ಸವ ಇಡೀ ದೇಶದಲ್ಲಿ ಹೊಸ ಸಂಚಲನ ಮತ್ತು ಚೇತೋಹಾರಿ ವಾತಾವರಣವನ್ನು ನಿರ್ವಿುಸಿದೆ. 75ನೇ ಸ್ವಾತಂತ್ರೊ್ಯೕತ್ಸವ ಭವಿಷ್ಯದ ಭಾರತ ನಿರ್ವಣದ ಹೊಸ ಚಿಂತನೆಗಳಿಗೂ ನಾಂದಿ ಹಾಡಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ದಾಖಲಿಸಿದ್ದರೂ, ಅಭಿವೃದ್ಧಿಯ ಅಪಾರ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಭಾರತ ಆ ಶಕ್ತಿ ಮತ್ತು ಅಗತ್ಯ ಸಂಪನ್ಮೂಲಗಳನ್ನು ಹೊಂದಿದ್ದು, ಸರಿಯಾದ ಯೋಜನೆಯೊಂದಿಗೆ ಸಾಗಿದರೆ ಮುಂಬರುವ ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಮಾದರಿ ಜಗತ್ತಿನ ಗಮನ ಸೆಳೆಯಬಲ್ಲದು. ಹಿಂದೆಲ್ಲ ಸ್ವಾತಂತ್ರ್ಯಪ್ರಾಪ್ತಿಗಾಗಿ ಲಕ್ಷಾಂತರ ಜನರು ಜೀವವನ್ನೇ ಬಲಿದಾನ ಮಾಡಿದರು. ಆ ತ್ಯಾಗ, ಬಲಿದಾನ, ಹೋರಾಟ ಸಾರ್ಥಕವಾಗಬೇಕಾದರೆ ಇಂದಿನ ದಿನಗಳಲ್ಲಿ ದೇಶಕ್ಕಾಗಿ ಬದುಕುವ, ಸುಧಾರಣೆಗಾಗಿ ಶ್ರಮಿಸುವಂಥ ಅಗತ್ಯವಿದೆ. ಪ್ರಭುತ್ವ ಮತ್ತು ಜನಸಹಭಾಗಿತ್ವದ ಜಂಟಿಪ್ರಯತ್ನದೊಂದಿಗೆ ಕಾರ್ಯನಿರ್ವಹಿಸಿದಾಗ ಖಂಡಿತವಾಗಿಯೂ ವ್ಯವಸ್ಥೆ ಸುಧಾರಣೆಯಾಗಿ, ದೇಶ ಬಲಿಷ್ಠಗೊಳ್ಳುವುದರಲ್ಲಿ ಅನುಮಾನವಿಲ್ಲ.
ಸ್ವಾತಂತ್ರ್ಯೋತ್ಸವ ನಿಮಿತ್ತ ಸರ್ಕಾರದಿಂದ ಹೊಸ ಘೋಷಣೆಗಳು ಸ್ವಾಭಾವಿಕ. ಆದರೆ, ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಯೋಜನೆಗಳು, ಕಾರ್ಯಕ್ರಮಗಳು ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಆಶಾವಾದವನ್ನು ಸೃಷ್ಟಿಸಿವೆ. ಕೆಂಪುಕೋಟೆಯಲ್ಲಿ ಭಾನುವಾರ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉಡಾನ್ ವಿಮಾನಯಾನ ಯೋಜನೆ ಮಾದರಿಯಲ್ಲೇ 75 ವಂದೇ ಭಾರತ್ ರೈಲು ಘೋಷಣೆ ಮಾಡಿದ್ದಾರೆ. ಪಡಿತರ ಯೋಜನೆ ಅಡಿಯಲ್ಲಿ ಬಡವರಿಗೆ ಬಲವರ್ಧಿತ ಅಕ್ಕಿ ದೊರೆಯಲಿದ್ದು, ಇನ್ಮುಂದೆ ಹೆಣ್ಮಕ್ಕಳಿಗೂ ಸೈನಿಕ ಶಾಲೆಗಳು ಬಾಗಿಲು ತೆರೆಯಲಿವೆ ಎಂದಿದ್ದಾರೆ. ಉದ್ಯೋಗಾವಕಾಶ ಹೆಚ್ಚಿಸುವ, ತಯಾರಿಕಾ ವಲಯದಲ್ಲಿ ಉತ್ಪಾದನೆ ಚುರುಕುಗೊಳಿಸುವ ‘ಗತಿ ಶಕ್ತಿ’ ಹೆಸರಿನ ಸಮಗ್ರ ಮೂಲಸೌಕರ್ಯದ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಶೇಕಡ 100ರಷ್ಟು ಹಳ್ಳಿ ರಸ್ತೆಗಳ ಅಭಿವೃದ್ಧಿಯಂತೂ ಗ್ರಾಮೀಣ ಭಾರತಕ್ಕೆ ವರದಾನವೇ ಸರಿ. ಪರಿಸರ ಸ್ನೇಹಿಯಾದ ‘ಹಸಿರು ಜಲಜನಕ’ದ ಉತ್ಪಾದನೆ ಮತ್ತು ರಫ್ತಿಗೆ ಒತ್ತು ನೀಡುವ ಕ್ರಮ ಮಹತ್ವದ್ದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ, ಯುವಜನ ಕೌಶಲ, ಶಾಲೆಗಳ ಅಭಿವೃದ್ಧಿ, ಕ್ರೀಡೆ ಹಾಗೂ ಸ್ವಸಹಾಯ ಗುಂಪುಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದ ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳನ್ನು ಅಳವಡಿಸಲಾಗುವುದು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜಿಗೆ ಕ್ರಮ, ಜತೆಗೆ ಸೌರವಿದ್ಯುತ್ ಅಳವಡಿಕೆಗೆ ಒತ್ತು ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ, ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಹೊಸ ಯೋಜನೆಗಳು ಸಹಕಾರಿಯಾಗಬಲ್ಲವು. ಆದರೆ, ಯೋಜನೆ ಘೋಷಿಸುವಾಗಿನ ಉತ್ಸಾಹ ಅನುಷ್ಠಾನದ ಹಂತದಲ್ಲಿಯೂ ಇರಬೇಕು. ನಮ್ಮಲ್ಲಿ ಬಹುತೇಕ ಯೋಜನೆಗಳು ಹಳಿ ತಪು್ಪವುದೇ ಅನುಷ್ಠಾನದ ಹಂತದಲ್ಲಿ. ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿಯಂಥ ಹಲವು ಅಪಸವ್ಯಗಳು ಸೇರಿಕೊಂಡು ಯೋಜನೆಯ ನೈಜೋದ್ದೇಶವನ್ನೇ ಹಾಳು ಮಾಡುತ್ತವೆ. ಹಾಗಾಗದಂತೆ ಕಾಳಜಿ ವಹಿಸಿ, ಮುಂದಡಿ ಇಟ್ಟಲ್ಲಿ ಸುಧಾರಣೆಯ ಕಿರಣಗಳು ಗೋಚರಿಸಲು ಸಾಧ್ಯ.