ರಾಜ್ಯದಲ್ಲಿ ಕೆಲ ತಿಂಗಳಿಂದ ಸರ್ಕಾರಿ ಹುದ್ದೆಗಳ ನೇಮಕಾತಿಯದೇ ಸುದ್ದಿ ಸದ್ದು. ಅದರಲ್ಲೂ ವಿಶೇಷವಾಗಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮಗಳಾಗಿವೆ ಎಂಬ ಮಾಹಿತಿ ಸ್ಪೋಟಗೊಂಡು, ಸಿಐಡಿ ತನಿಖೆ ನಡೆದು, ಪೊಲೀಸ್ ಅಧಿಕಾರಿಗಳೂ ಸೇರಿ ಹಲವರು ಬಂಧನಕ್ಕೀಡಾಗಿರುವುದು ಸಾರ್ವಜನಿಕ ವಲಯಕ್ಕೆ ಹಲವು ಸಂದೇಶಗಳನ್ನು ರವಾನಿಸಿದೆ. ಇನ್ನೊಂದೆಡೆ, 2012-13 ಹಾಗೂ 2014-15ರಲ್ಲಿ ನಡೆದ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಹಾಗೂ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಸಹ ಅವ್ಯವಹಾರ ಆರೋಪ ಕೇಳಿಬಂದಿದ್ದು, ಸಿಐಡಿ ಈವರೆಗೆ 12 ಮಂದಿಯನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಪರೀಕ್ಷೆಯನ್ನೇ ಬರೆಯದವರು ನೌಕರಿ ಗಿಟ್ಟಿಸಿರುವುದು ಹಾಗೂ ಆಯ್ಕೆಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿ ಸಲ್ಲಿಸಿರುವುದು ಅಕ್ರಮದ ಆಳವನ್ನು ತೋರಿಸುತ್ತದೆ.
ಶಿಕ್ಷಕರು, ಪೊಲೀಸರು ಮುಂತಾದವರು ಸಮಾಜದಲ್ಲಿ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿದ್ದು, ಇಂಥವರ ಆಯ್ಕೆಯಲ್ಲಿಯೇ ಇಂಥ ಅಪಸವ್ಯಗಳು ನಡೆದರೆ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಯುವುದಾದರೂ ಹೇಗೆ? ವಾಮಮಾರ್ಗದಿಂದ ನೇಮಕವಾದವರು ಪ್ರಾಮಾಣಿಕವಾಗಿ ಸೇವೆ ನಿರ್ವಹಿಸುತ್ತಾರೆಂದು ಭರವಸೆ ಇಡುವುದು ಹೇಗೆ? ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಿಂದ ಎಚ್ಚೆತ್ತಂತಿರುವ ರಾಜ್ಯ ಸರ್ಕಾರ, ಇನ್ನು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಕಟ್ಟುನಿಟ್ಟು ಕ್ರಮಕ್ಕೆ ಚಿಂತನೆ ನಡೆಸಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿಗೆ ಪ್ರತ್ಯೇಕ ವಿಭಾಗವಿದೆ. ಹಿರಿಯ ಅಧಿಕಾರಿಯೇ ಇದರ ನೇತೃತ್ವ ವಹಿಸಿರುತ್ತಾರೆ. ಮುಂದಿನ ದಿನಗಳಲ್ಲಿ, ಗೃಹ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಆ ಸಮಿತಿ ಮೂಲಕ ಪರೀಕ್ಷೆ, ಸಂದರ್ಶನ ನಡೆಸಿ ನೇಮಕದಲ್ಲಿ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಲು ನಿರ್ಧರಿಸಲಾಗಿದೆ. ಈಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ಮುಗಿದ ನಂತರದಲ್ಲಿ ಈ ಬಗ್ಗೆ ಸ್ಪಷ್ಟ ರೂಪುರೇಷೆ ತಯಾರಾಗಲಿದೆ. ಸರ್ಕಾರ ಈಗ 3064 ಪೊಲೀಸ್ ಪೇದೆಗಳ ನೇಮಕಕ್ಕೆ ಅರ್ಜಿ ಕರೆದಿದೆ. ಆ ಪ್ರಕ್ರಿಯೆ ಮುಗಿದ ನಂತರದಲ್ಲಿ ಇನ್ನೂ 1600 ಪೇದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ತಂತ್ರಜ್ಞಾನ ಬಳಕೆ ಮುಂತಾದ ಆಲೋಚನೆಗಳು ಸರ್ಕಾರದ ಮುಂದಿವೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಸಹ ಇಮೇಜ್ವರ್ಧನೆಯ ಜರೂರತ್ತಿದೆ. ವಿರೋಧ ಪಕ್ಷಗಳು ಇಂಥ ಅವಕಾಶಕ್ಕೆ ಕಾದಿರುತ್ತವೆ. ಸರ್ಕಾರದ ಇಲಾಖೆಗಳಲ್ಲಿ ಆಯಾ ಕಾಲಕ್ಕೆ ನೇಮಕಾತಿಗಳು ನಡೆಯುತ್ತಲೇ ಇರುವುದರಿಂದಾಗಿ, ನೇಮಕ ಪ್ರಕ್ರಿಯೆ ಪಾರದರ್ಶಕವೂ ಪ್ರಾಮಾಣಿಕವೂ ಆಗಿರುವಂತೆ ಎಚ್ಚರವಹಿಸಬೇಕಾದುದು ಅನಿವಾರ್ಯ. ಈಗಾಗಲೇ ಸರ್ಕಾರಿ ವ್ಯವಸ್ಥೆ ಎಂದರೆ ಜನರಲ್ಲಿ ಒಂದು ಬಗೆಯ ನಕಾರಾತ್ಮಕ ಭಾವನೆ ಇದೆ. ಈ ಭಾವನೆ ಇನ್ನಷ್ಟು ತೀವ್ರಸ್ವರೂಪಕ್ಕೆ ತಿರುಗದಂತೆ ನೋಡಿಕೊಳ್ಳಬೇಕಾದುದು ಈಗಿನ ತುರ್ತ. ಅಧಿಕಾರಶಾಹಿಯಲ್ಲಿ ಪ್ರಾಮಾಣಿಕರು, ದಕ್ಷರ ಸಂಖ್ಯೆ ಸಾಕಷ್ಟಿದ್ದು, ಅಂಥವರನ್ನು ಹುಡುಕಿ, ಅವರಿಗೆ ಮಹತ್ವದ ಹೊಣೆಗಾರಿಕೆಗಳನ್ನು ವಹಿಸಿದರೆ, ಪಾರದರ್ಶಕ ನೇಮಕಾತಿ ನಿಟ್ಟಿನಲ್ಲಿ ಅನುಕೂಲವಾಗಬಹುದು. ಇನ್ನು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಸಹ ಅಡ್ಡದಾರಿ ಬಗ್ಗೆ ಆಲೋಚಿಸದೆ ಪ್ರತಿಭೆ, ಪರಿಶ್ರಮದಿಂದ ನೌಕರಿಗಿಟ್ಟಿಸುವತ್ತ ಚಿತ್ತಹರಿಸಬೇಕು.