ನ್ಯೂಸ್

ಸಂಪಾದಕೀಯ | ಮಹತ್ವದ ಹೆಜ್ಜೆ: 7601ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ

Webdesk - Ravikanth

ರಾಜ್ಯ ಶಿಕ್ಷಣ ವಲಯಕ್ಕೆ ಸಂಬಂಧಿಸಿ ಸೋಮವಾರ ಮಹತ್ವದ ವಿದ್ಯಮಾನ ನಡೆದಿದೆ. ರಾಜ್ಯಾದ್ಯಂತ ಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ಒಟ್ಟು 7601 ಕೊಠಡಿಗಳ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಬಹುಶಃ ದಾಖಲೆಯೇ ಸರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ತಾಲೂಕಿನ ಮಾಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ನಿರ್ವಣದ ಶಂಕುಸ್ಥಾಪನೆ ನೆರವೇರಿಸಿದರೆ, ಉಳಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಜನಪ್ರತಿನಿಧಿಗಳು ಶಂಕುಸ್ಥಾಪನೆ ಮಾಡಿದರು. ಈ ಮೂಲಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಬೃಹತ್ ಪ್ರಮಾಣದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದಂತಾಗಿದೆ.

ಶಿಕ್ಷಣದ ಮಹತ್ವ ಹೆಚ್ಚಿದ ಹಾಗೆ ಖಾಸಗಿ ವಲಯ ಈ ನಿಟ್ಟಿನಲ್ಲಿ ಅಗಾಧ ಬೆಳವಣಿಗೆ ಸಾಧಿಸಿದ್ದು ಸ್ಪಷ್ಟಗೋಚರ. ಅದರಲ್ಲೂ ಉದಾರೀಕರಣ ತರುವಾಯ ‘ಗ್ಲೋಬಲ್ ವಿಲೇಜ್’ ಪರಿಕಲ್ಪನೆ ಮುನ್ನೆಲೆಗೆ ಬಂದು ಶಿಕ್ಷಣಕ್ಕೆ ಖರ್ಚುಮಾಡುವುದು ಒಂದು ರೀತಿಯ ಹೂಡಿಕೆ ಎಂಬ ಭಾವನೆ ಬಲಿಯಿತು. ಖಾಸಗಿ ಶಿಕ್ಷಣ ಅಧಿಕ ವೆಚ್ಚದ್ದು, ಅದು ಸಿರಿವಂತರಿಗೆ ಮಾತ್ರ, ಬಡವರಿಗೆ ಏನಿದ್ದರೂ ಸರ್ಕಾರಿ ಶಾಲೆಗಳು ಎಂಬ ಭಾವನೆ ಸಹ ಕ್ರಮೇಣ ಮೂಡಿತು. ಆದರೆ, ಈಚಿನ ವರ್ಷಗಳಲ್ಲಿ ಹೊಸ ಹೊಸ ಕೋರ್ಸ್ ಮತ್ತು ದೇಶವಿದೇಶಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಂಡಂತೆ, ಸಾಲ ಮಾಡಿಯಾದರೂ ಉನ್ನತ ಶಿಕ್ಷಣ ಕೊಡಿಸುವುದಕ್ಕೆ ಜನರು ಮುಂದಾದರು. ಈ ನಡುವೆ ಕಡ್ಡಾಯ ಶಿಕ್ಷಣ ಹಕ್ಕು ಜಾರಿಯಾಗಿ ಇನ್ನಷ್ಟು ಇಂಬು ದೊರಕಿತು. ಇನ್ನೊಂದೆಡೆ, ಸರ್ಕಾರಿ ವಲಯದ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಯತ್ನಗಳೂ ನಡೆಯಲಿಲ್ಲವೆಂದಲ್ಲ. ಆದರೂ, ಖಾಸಗಿಯವರ ಅತ್ಯಾಧುನಿಕ ವ್ಯವಸ್ಥೆಗಳು, ತಂತ್ರಜ್ಞಾನ ಅಳವಡಿಕೆ ಮುಂತಾದ ಕಾರಣಕ್ಕೆ ಆ ಕಡೆ ಜನರ ಒಲವು ಯಥಾರೀತಿ ಮುಂದುವರಿಯಿತು. ಈಚಿನ ವರ್ಷಗಳಲ್ಲಿ ಸರ್ಕಾರಗಳು ಶಿಕ್ಷಣ ರಂಗಕ್ಕೆ ಮತ್ತಷ್ಟು ಒತ್ತು ನೀಡುತ್ತಿದ್ದು, ಇಮೇಜ್ ಬದಲಾಗುತ್ತಿದೆ. ಬಜೆಟ್​ನಲ್ಲಿ ಸಹ ಹೆಚ್ಚು ಹಣ ಮೀಸಲಿಡಲಾಗುತ್ತಿದೆ.

ಕರೊನೋತ್ತರ ದಿನಗಳಲ್ಲಿ ಶಿಕ್ಷಣದ ಸ್ವರೂಪವನ್ನು ಕಾಪಾಡಿಕೊಂಡು ಹೋಗುವುದು ಸವಾಲಾಗಿದ್ದು, ಸರ್ಕಾರದ ನೀತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ವಿುಸಲು ಮುಂದಾಗಿರುವುದು ಮಹತ್ವದ ಹೆಜ್ಜೆಯೆನಿಸುತ್ತದೆ. ಲಾಬಿ ಅಥವಾ ಅಪಸ್ವರಕ್ಕೆ ಅವಕಾಶವಾಗದಂತೆ ಈ ಕಟ್ಟಡಗಳನ್ನು ಗುಣಮಟ್ಟದಲ್ಲಿ ನಿರ್ವಿುಸಬೇಕಾದುದು ಸರ್ಕಾರದ ಜವಾಬ್ದಾರಿ. ಇಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಹ ಮುತುವರ್ಜಿ ವಹಿಸಬೇಕಾಗುತ್ತದೆ. ಇದರ ಜತೆಗೆ, ಶಾಲೆಗಳಲ್ಲಿ ಶೌಚಗೃಹ ನಿರ್ಮಾಣ ಮತ್ತು ದುರಸ್ತಿ ಹಾಗೂ ಪೀಠೋಪಕರಣ ಸರಬರಾಜಿಗೂ ಸರ್ಕಾರ ಗಮನ ನೀಡಿರುವುದು ಉತ್ತಮ ಹೆಜ್ಜೆ. ಉತ್ತಮ ಶಿಕ್ಷಣಕ್ಕೆ ಭೌತಿಕ ಸವಲತ್ತು ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಜತೆಗೆ, ಉತ್ತಮ ಶಿಕ್ಷಕರು ಸಹ ಅಷ್ಟೇ ಮುಖ್ಯ. ಅದರಲ್ಲೂ ಈ ದಿನಗಳಲ್ಲಿ ಶಿಕ್ಷಕರ ಹೊಣೆ ಮತ್ತಷ್ಟು ಹೆಚ್ಚಿದೆ. ಆ ಸವಾಲನ್ನು ಎದುರಿಸುವ ದಿಕ್ಕಿನಲ್ಲಿ ಶಿಕ್ಷಕರನ್ನು ಅಪ್​ಡೇಟ್ ಮಾಡಿ ಕಾಲಕಾಲಕ್ಕೆ ತರಬೇತಿ ನೀಡಿ ಸಜ್ಜಾಗಿಸಬೇಕಾಗುತ್ತದೆ. ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಹಂತಹಂತವಾಗಿ ಬದಲಾವಣೆಗಳು ಆಗುತ್ತಿದ್ದು, ಅದಕ್ಕೆ ತಕ್ಕಂತೆ ವಾತಾವರಣ ನಿರ್ವಿುಸಬೇಕಾಗುತ್ತದೆ.