ಕರೊನಾ ಸಾಂಕ್ರಾಮಿಕವು ಜಗತ್ತನ್ನು ಬಾಧೆಗೊಳಪಡಿಸಿ ಎರಡು ವರ್ಷಗಳ ಮೇಲಾಗಿದ್ದು, ಈಗಲೂ ಹಾವಳಿ ಮುಂದುವರಿದಿದೆ. ಕೆಲ ದೇಶಗಳನ್ನು ಹೊರತುಪಡಿಸಿ, ಭಾರತವೂ ಸೇರಿದಂತೆ ಇತರ ದೇಶಗಳಲ್ಲಿ ಕರೊನಾ ಪ್ರಮಾಣ ಕಡಿಮೆಯಾಗುತ್ತಿರುವುದು ಇದ್ದುದರಲ್ಲಿ ಸಮಾಧಾನದ ಸಂಗತಿ. ನಮ್ಮ ದೇಶದಲ್ಲಿ ದೈನಂದಿನ ಕರೊನಾ ಸಂಖ್ಯೆ ಮೂರು ಸಾವಿರಕ್ಕಿಂತ ಕೆಳಗೆ ಬಂದಿದೆ. ಇದೇ ಸಂದರ್ಭದಲ್ಲಿ, ಈ ಸಾಂಕ್ರಾಮಿಕದ ವಿರುದ್ಧದ ಸಮರದ ಮತ್ತೊಂದು ಹಂತವಾಗಿ, 12ರಿಂದ 14 ವಯೋಮಿತಿಯ ಮಕ್ಕಳಿಗೆ ದೇಶದಾದ್ಯಂತ ಮಾರ್ಚ್ 16ರಿಂದ ಕರೊನಾ-ತಡೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಬಯಾಲಾಜಿಕಲ್ -ಇ ಕಂಪನಿಯ ಕೊರ್ಬಿವ್ಯಾಕ್ಸ್ ಲಸಿಕೆಯನ್ನು ಈ ವಯೋಗುಂಪಿನ ಮಕ್ಕಳಿಗೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ತಯಾರಿಗಳು ಆಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜತೆಗೆ,
60 ವರ್ಷ ದಾಟಿದ ಎಲ್ಲರಿಗೂ ಯಾವುದೇ ಷರತ್ತಿಲ್ಲದೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕೆ ನೀಡಲೂ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ. ಈಗ ಅನ್ಯ-ವ್ಯಾಧಿ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಬೂಸ್ಟರ್ ಡೋಸ್ ಹಾಕಲಾಗುತ್ತಿದೆ. ಕೋವಿಡ್ ಅನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಜತೆಗೆ ಲಸಿಕೆ ಪಡೆಯುವುದು ಅತ್ಯಂತ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಆರಂಭದಲ್ಲಿ ಲಸಿಕಾಭಿಯಾನದ ಬಗ್ಗೆ ಅಲ್ಪಸ್ವಲ್ಪ ಹಿಂಜರಿಕೆ ಕಂಡುಬಂದರೂ ನಂತರದಲ್ಲಿ ಜನರು ಹಿಂದೇಟು ಹಾಕಲಿಲ್ಲ. ಭಾರತದಲ್ಲಿ ಕರೊನಾ ತಹಬಂದಿಗೆ ಬರಲು ಲಸಿಕೆ ಅಭಿಯಾನವೂ ಒಂದು ಮುಖ್ಯ ಕಾರಣ ಎಂದು ವೈದ್ಯ ವಿಜ್ಞಾನಿಗಳೂ ಸಹಮತಿಸಿದ್ದಾರೆ. ಭಾರತದಲ್ಲಿ 2021ರ ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾಗಿದ್ದು ಇದುವರೆಗೆ ಒಟ್ಟು ಸುಮಾರು 180 ಕೋಟಿ ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ಜಗತ್ತಿನ ಅತಿ ದೊಡ್ಡ ಲಸಿಕೆ ಅಭಿಯಾನ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ. ಕರೊನಾ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ಡೌನ್ನಿಂದಾಗಿ ಎಲ್ಲ ವಲಯಗಳು ಅಪಾರ ಕಷ್ಟನಷ್ಟ ಅನುಭವಿಸಿದ್ದು ಗೊತ್ತೇ ಇದೆ.
ಕೈಗಾರಿಕೆ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್- ಹೀಗೆ ವ್ಯಾಪಕ ಉದ್ಯೋಗಸೃಷ್ಟಿ ಮತ್ತು ಆದಾಯ ತರುವ ರಂಗಗಳಲ್ಲಿ ಈಗ ನಿಧಾನಕ್ಕೆ ಚೇತರಿಕೆ ಕಂಡುಬರುತ್ತಿದ್ದು, ಕೋವಿಡ್ಪೂರ್ವ ಸ್ಥಿತಿಗೆ ತಲುಪಲು ಇನ್ನೂ ಬಹಳ ಕಾಲ ಬೇಕು. ಏಕೆಂದರೆ ಹಾನಿಯ ಪ್ರಮಾಣ ಅಷ್ಟಿದೆ. ಇನ್ನೊಂದೆಡೆ, ಬಹು ದಿನಗಳ ನಂತರ ಈಗ ಕೆಲ ದಿನಗಳಿಂದ ಶಾಲಾಕಾಲೇಜುಗಳು ಮತ್ತೆ ತೆರೆದಿದ್ದು, ಪರೀಕ್ಷೆಗಳೂ ಸನಿಹ ಬಂದಿವೆ. ಭೌತಿಕ ತರಗತಿಗಳು ಸಾಧ್ಯವಿಲ್ಲದೆ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಿದ್ದು, ಆ ಸನ್ನಿವೇಶಕ್ಕೆ ಅನಿವಾರ್ಯವಾಗಿತ್ತು. ಆದರೆ ಆನ್ಲೈನ್ ತರಗತಿಗಳು ಆಫ್ಲೈನ್ ತರಗತಿಗಳಷ್ಟು ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗಿದೆ. ಜತೆಗೆ, ಆನ್ಲೈನ್ ಕಲಿಕೆ ಮಕ್ಕಳಲ್ಲಿ ಸಹ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಆ ತೊಂದರೆಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕಿದೆ.
ಈಗ ಕರೊನಾ ಪ್ರಮಾಣ ಕಮ್ಮಿಯಾಗಿದ್ದು ಹೌದಾದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನೂ ಸ್ವಲ್ಪ ಕಾಲ ಮುಂದುವರಿಸುವುದು ಒಳಿತು ಎಂಬುದು ತಜ್ಞರ ಸಲಹೆ. ಹೀಗಾಗಿ ಕರೊನಾ ಪೀಡೆ ಸಂಪೂರ್ಣ ತೊಲಗಿತು ಎಂದು ಪೂರ್ತಿ ನಿರಾಳರಾಗದೆ ಆ ದಿಕ್ಕಿನಲ್ಲಿ ಒಂದು ಎಚ್ಚರಿಕೆಯ ಕಣ್ಣು ಇರಿಸಿಕೊಂಡೇ ನಿತ್ಯಜೀವನ ಸಾಗಿಸಬೇಕಾದ್ದು ಈ ಕಾಲಘಟ್ಟದ ಅನಿವಾರ್ಯತೆ ಮತ್ತು ಈ ಕರೊನಾ ಅವಧಿಯಲ್ಲಿ ನಾವು ಕಲಿತ ಪಾಠ ಸಹ.