ನ್ಯೂಸ್

ಯುದ್ಧದ ಯುಗವಲ್ಲ; ಶಾಂತಿ ಸ್ಥಾಪನೆ ಮಂತ್ರ ಭಾರತದ ಚಾಣಾಕ್ಷ ತಂತ್ರ

Bengaluru - General - Rama Kishan K V

ಇದೇ ವರ್ಷದ ಫೆ. 24ರಂದು ಆರಂಭಗೊಂಡಿರುವ ರಷ್ಯಾ- ಯೂಕ್ರೇನ್ ಯುದ್ಧವು ಏಳೂವರೆ ತಿಂಗಳುಗಳ ನಂತರವೂ ಸ್ಥಗಿತಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ನ್ಯಾಟೊ ಜತೆ ಯೂಕ್ರೇನ್ ಸೇರಿದರೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಎಚ್ಚರಿಕೆ ನೀಡುವುದೊಂದಿಗೆ ಮತ್ತೊಂದು ಮಹಾಯುದ್ಧ ಉಂಟಾಗಬಹುದೇ ಎಂಬ ಆತಂಕದ ಕಾಮೋಡ ಕಾಣಿಸಿಕೊಂಡಿದೆ. ಯುದ್ಧ ಮುಂದುವರಿದಷ್ಟು ದಿನಗಳ ಕಾಲ ಯೂಕ್ರೇನ್​ಗೆ ಶಸ್ತ್ರಾಸ್ತ್ರಗಳ ಪೂರೈಕೆ ಮಾಡುವುದಾಗಿ ಜರ್ಮನಿ ಚಾನ್ಸಲರ್ ಓಲಾಫ್ ಸ್ಕೊಲ್ಜ್ ಈಗಷ್ಟೇ ಘೋಷಿಸಿದ್ದಾರೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಪ್ರಮುಖ ಐರೋಪ್ಯ ರಾಷ್ಟ್ರಗಳು ಇದೇ ನಿಲುವನ್ನು ತಾಳಿ ಯೂಕ್ರೇನ್​ಗೆ ಯುದ್ಧದ ಆರಂಭದಿಂದಲೂ ಶಸ್ತ್ರಾಸ್ತ್ರ ಸೇರಿದಂತೆ ಎಲ್ಲ ರೀತಿ ಬೆಂಬಲ ನೀಡುತ್ತಿವೆ.

ಯೂಕ್ರೇನ್ 1991ರವರೆಗೆ ಈ ಹಿಂದಿನ ಸೋವಿಯತ್ ರಷ್ಯಾ ಒಕ್ಕೂಟದ ಒಂದು ಭಾಗವೇ ಆಗಿತ್ತು. 2014ರಲ್ಲಿ ಯೂಕ್ರೇನ್​ನ ಕೆಲವೆಡೆ ಪ್ರತ್ಯೇಕತಾವಾದಿ ಹೋರಾಟಗಳು ಆರಂಭವಾದವು. ಕ್ರಿಮಿಯಾವನ್ನು ರಷ್ಯಾ ದೇಶವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ, ಯೂಕ್ರೇನ್ ಗಡಿಯ ಸಮಗ್ರತೆಯನ್ನು ಕಾಪಾಡಲು ಬದ್ಧರಾಗಿರುವುದಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಘೋಷಿಸಿದವು. ಅಲ್ಲದೆ, ಅಮೆರಿಕ ನೇತೃತ್ವದ ಮಿಲಿಟರಿ ಒಕ್ಕೂಟವಾದ ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್) ಸೇರ್ಪಡೆಯಾಗಲು ಯೂಕ್ರೇನ್ ಆಸಕ್ತಿ ತೋರಿದ್ದು ತನ್ನ ಹಿತಾಸಕ್ತಿಗೆ ಹಾಗೂ ಪ್ರಾದೇಶಿಕ ಸಾರ್ವಭೌಮತ್ವ ಆತಂಕಕಾರಿ ಎಂದೇ ರಷ್ಯಾ ಭಾವಿಸಿತು. ನ್ಯಾಟೊಗೆ ಸೇರ್ಪಡೆ ಆಗಬಾರದೆಂಬ ಬೇಡಿಕೆಗೆ ಯೂಕ್ರೇನ್ ಸೊಪು್ಪ ಹಾಕದಿರುವುದು ಯುದ್ಧಕ್ಕೆ ಮೂಲ ಕಾರಣವಾಗಿದೆ.

ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾವು ಯೂಕ್ರೇನ್​ನ ರಾಜಧಾನಿ ಕಿಯೇವ್ ಮೇಲೆ ಇರಾನ್ ನಿರ್ವಿುತ ಕಮಿಕೇಜ್ ಡ್ರೋನ್ ಮೂಲಕ ಭಾರಿ ದಾಳಿ ನಡೆಸಿದೆ. ಅಣ್ವಸ್ತ್ರ ಬಳಕೆ ಸಾಧ್ಯತೆ ಕುರಿತೂ ಮಾತನಾಡಿದೆ. ಈ ಹಿಂದಿನ ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಶೀತಲ ಸಮರ ಕೊನೆಗೊಂಡರೂ ಅಮೆರಿಕ ಜತೆಗಿನ ರಷ್ಯಾ ಪೈಪೋಟಿ ಮುಂದುವರಿದಿದೆ. ರಾಜಕೀಯ, ಭೌಗೋಳಿಕ ಕಾರಣಗಳು ಮಾತ್ರವಲ್ಲದೆ, ಆರ್ಥಿಕ ಮೇಲುಗೈ ಸಾಧಿಸಲು ಯೂಕ್ರೇನ್​ನಂತಹ ರಾಷ್ಟ್ರಗಳನ್ನು ಅಮೆರಿಕ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳೂ ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಭಾರತವು ಈ ವಿಷಯದಲ್ಲಿ ತಟಸ್ಥ ಧೋರಣೆ ತೋರಿಸುತ್ತಲೇ, ಚಾಣಾಕ್ಷ ನಡೆ ಕೈಗೊಂಡಿದೆ.

ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುವ ಅಮೆರಿಕದ ಪ್ರಸ್ತಾವವನ್ನು ಬೆಂಬಲಿಸದೆ, ಕಡಿಮೆ ದರದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸಿತು. ಈಗ ಯೂಕ್ರೇನ್​ನ ನಾಲ್ಕು ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಕ್ರಮ ಖಂಡಿಸುವ ವಿಶ್ವ ಸಂಸ್ಥೆ ನಿರ್ಣಯ ಕುರಿತ ಮತದಾನದಲ್ಲಿ ಪಾಲ್ಗೊಳ್ಳದೆ ತಟಸ್ಥ ಧೋರಣೆ ಅನುಸರಿಸಿದೆ. ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ವಿುಕವಾಗಿ ಜಗತ್ತಿಗೆ ಉಪದೇಶ ನೀಡಿದ್ದಾರೆ. ಮಾತುಕತೆ ಮೂಲಕ ಶಾಂತಿ ಕಾಪಾಡಬೇಕೆಂಬ ಭಾರತ ನಿಲುವು ಮಹಾಯುದ್ಧದ ತಡೆಗೆ ಯೋಗ್ಯ ನಡೆಯಾಗಿದೆ.