ನ್ಯೂಸ್

ಸಂಪಾದಕೀಯ | ಮಿತವ್ಯಯದ ಮಂತ್ರ; ಜನಸಾಮಾನ್ಯರ ಸಂಕಷ್ಟ ಹೆಚ್ಚಿಸಿದ ಬೆಲೆ ಏರಿಕೆ

Webdesk - Ravikanth

ಕರೊನಾ ಸಾಂಕ್ರಾಮಿಕ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದ ಜನಸಾಮಾನ್ಯರು ಅನುಭವಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ. ಇನ್ನೇನು ಕರೊನಾ ನಿಯಂತ್ರಣಕ್ಕೆ ಬಂದು, ಆರ್ಥಿಕ ಚಟುವಟಿಕೆಗಳು ಹಳಿಗೆ ಮರಳುತ್ತಿವೆ ಎಂದೆನ್ನುವಷ್ಟರಲ್ಲಿ ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಹೊಸ ಆತಂಕ ಸೃಷ್ಟಿ ಮಾಡಿದೆ. ಎಲ್​ಪಿಜಿ, ಅಡುಗೆಎಣ್ಣೆ ದುಬಾರಿಯಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್​ಗೆ 115 ಡಾಲರ್ ತಲುಪಿದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 15ರಿಂದ 22 ರೂ. ಏರಿಕೆಯಾಗುವುದು ಬಹುತೇಕ ನಿಶ್ಚಿತ ಎನ್ನುತ್ತಿವೆ ಮೂಲಗಳು. ಅಷ್ಟೇ ಅಲ್ಲದೆ ಕಟ್ಟಡನಿರ್ವಣ ಸಾಮಗ್ರಿಗಳು ಕೂಡ ಕೈಗೆ ಎಟುಕದಂತಾಗಿವೆ. ಈ ನಡುವೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವ ಪರಿಣಾಮ ಶುಭ ಸಮಾರಂಭಗಳು ಮುಂದೂಡುವಂಥ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಸೇರಿದಂತೆ ಶುಭಸಮಾರಂಭಗಳಿಗೆ ಸಾಕಷ್ಟು ಮುಹೂರ್ತಗಳಿರುತ್ತವೆ. ಶುಭಸಮಾರಂಭಗಳ ದೊಡ್ಡ ಮೊತ್ತ ಆಭರಣಗಳ ಖರೀದಿಗೆಂದೇ ವೆಚ್ಚ ಮಾಡಲಾಗುತ್ತದೆ. ಆದರೆ, ದಿಢೀರ್ ಬೆಲೆ ಏರಿಕೆ ಪರಿಣಾಮ ಮಧ್ಯಮ ವರ್ಗದವರು ಮದುವೆಗಳನ್ನೇ ಮುಂದೂಡುವಂಥ ನಿರ್ಣಯ ಕೈಗೊಳ್ಳುತ್ತಿರುವುದು ಸಂಕಷ್ಟದ ತೀವ್ರತೆಗೆ ಸಾಕ್ಷಿ.

ಕೆಜಿ ಬೆಳ್ಳಿಯ ದರ 62 ಸಾವಿರ ರೂ.ನಿಂದ 74,700 ರೂ.ಗೆ ಜಿಗಿದಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದರ ಏರಿಕೆಯಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನ ಪ್ರತಿ ಗ್ರಾಂಗೆ ಹಿಂದೆ 4,800 ರೂ.ಇತ್ತು. ಈಗ 5,500 ರೂ. ಆಗಿದೆ. ಒಂದು ವಾರದಲ್ಲೇ ಪ್ರತಿ ಗ್ರಾಂ ಚಿನ್ನದ ಮೇಲೆ 700-800 ರೂ. ಹೆಚ್ಚಳವಾದರೆ, ಕೆಜಿ ಬೆಳ್ಳಿ ಮೇಲೆ 12 ಸಾವಿರ ರೂ.ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಭಾರತಕ್ಕೆ ದಕ್ಷಿಣ ಆಫ್ರಿಕಾದಿಂದ ಶೇಕಡ 80 ಚಿನ್ನ ಆಮದಾಗುತ್ತಿದೆ. ಉಳಿದ ಚಿನ್ನ ಆಸ್ಟ್ರೇಲಿಯಾ ಮತ್ತು ಅಮೆರಿಕ ಸೇರಿ ಇನ್ನಿತರ ದೇಶಗಳಿಂದ ಬರುತ್ತಿದೆ. ರಷ್ಯಾದ ಮೇಲೆ ವಿವಿಧ ದೇಶಗಳು ಹೇರಿರುವ ಆರ್ಥಿಕ ದಿಗ್ಬಂಧನದ ಪರಿಣಾಮವೂ ಬೆಲೆ ಏರಿಕೆಯಾಗಿದೆ. ಅದೇನೆ ಇದ್ದರೂ ಸಮಸ್ಯೆಗಳಿಗೆ ಸಿಲುಕುವವರು ಮಾತ್ರ ಜನಸಾಮಾನ್ಯರು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ಇವೆಲ್ಲ ಅಪಸವ್ಯ ಕಂಡುಬರುತ್ತಿದ್ದರೂ, ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳಬೇಕು.

ಶ್ರೀಸಾಮಾನ್ಯರು ಈಗಿನ ಸ್ಥಿತಿಯಲ್ಲಿ ಮಿತವ್ಯಯದ ಮಂತ್ರ ಅನುಸರಿಸುವುದು ಅನಿವಾರ್ಯವಾಗಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳಲಿದೆ. ಕದನವಿರಾಮವಾದರೂ, ಆರ್ಥಿಕ ಸ್ಥಿತಿ ಸಾಮಾನ್ಯಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಆಡಂಬರವನ್ನು ಬದಿಗಿರಿಸಿ, ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವತ್ತ ಗಮನವಹಿಸಬೇಕಿದೆ. ಇಲ್ಲದಿದ್ದಲ್ಲಿ ಮುಂಬರುವ ದಿನಗಳು ಇನ್ನಷ್ಟು ಸಂಕಷ್ಟದಿಂದ ಕೂಡಿರಲಿವೆ. ಹಾಗಾಗುವ ಮುನ್ನವೇ, ಜನರು ಕೂಡ ತಿಂಗಳ ಬಜೆಟ್​ನ್ನು ಮರುರೂಪಿಸಿಕೊಳ್ಳಬೇಕಿದೆ, ಶುಭ ಸಮಾರಂಭಗಳನ್ನು ಸರಳವಾಗಿ ಸಂಪನ್ನಗೊಳಿಸಬೇಕಿದೆ.