ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಯಲ್ಲಿ ನೀರಾವರಿ ಯೋಜನೆಗಳ ಪಾತ್ರ ಪ್ರಮುಖವಾದುದು. ಇದರಿಂದ ಸಾವಿರಾರು, ಲಕ್ಷಾಂತರ ಎಕರೆ ಕೃಷಿಭೂಮಿಗೆ ನೀರು ಒದಗಿಸಬಹುದಲ್ಲದೆ, ದೊಡ್ಡ ಸಂಖ್ಯೆಯ ಜನರಿಗೆ ಕುಡಿಯುವ ನೀರಿನ ಅಗತ್ಯವನ್ನೂ ಈಡೇರಿಸಬಹುದು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯದ ಕೆಲ ಸಚಿವರು ಸೋಮವಾರ ಸಭೆ ನಡೆಸಿ, ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿರುವುದು ಮಹತ್ವದ ಬೆಳವಣಿಗೆ ಎಂದೇ ಹೇಳಬೇಕು. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ಸಮಾಧಾನಕರ. ಇದರಿಂದಾಗಿ ರಾಜ್ಯದ ಯೋಜನೆಗಳಿಗೆ ವೇಗ ದೊರೆಯಬಹುದೆಂದು ನಿರೀಕ್ಷಿಸಬಹುದಾಗಿದೆ. ಕೃಷ್ಣಾ ಯೋಜನೆಗೆ ಅಧಿಸೂಚನೆ ಹೊರಡಿಸುವುದು, ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಗುರುತಿಸುವುದು, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಅನುಮತಿ ನೀಡುವುದು, ಮೇಕೆದಾಟು ಯೋಜನೆ ಮುಂತಾದ ವಿಷಯಗಳು ಸಭೆಯಲ್ಲಿ ಚರ್ಚೆಯಾಗಿವೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಈ ವಿಷಯದ ಚರ್ಚೆ ನಡೆದಿರುವುದು ಕುತೂಹಲಕರ. ಇದೇ ಸಂದರ್ಭದಲ್ಲಿ, ಸಚಿವ ಶೆಖಾವತ್ ಅವರು ಜಲಜೀವನ್ ಮಿಷನ್ ಅನುಷ್ಠಾನದ ಕುರಿತೂ ಪರಾಮರ್ಶೆ ನಡೆಸಿದ್ದಾರೆ.
ಕರ್ನಾಟಕ ಇತರ ರಾಜ್ಯಗಳ ನೀರಿನ ಹಕ್ಕಿನ ಮೇಲೆ ಪ್ರಭುತ್ವ ಸಾಧಿಸಿ ಅಥವಾ ಇತರರಿಗೆ ತೊಂದರೆ ಉಂಟುಮಾಡಿ ತಾನು ನೀರು ಬಳಸಿಕೊಳ್ಳಬೇಕೆಂಬ ಉದ್ದೇಶವನ್ನು ಸುತರಾಂ ಹೊಂದಿಲ್ಲ. ಹಾಗೆನೋಡಿದರೆ ನೀರಿನ ವಿಷಯದಲ್ಲಿ ನಾವು ಇತರರಿಂದ ಅನೇಕ ಸಂದರ್ಭದಲ್ಲಿ ವಿನಾಕಾರಣ ರಗಳೆ ಎದುರಿಸಿದ್ದೇವೆ. ನೀರಿನ ವಿಷಯದಲ್ಲಿ ದೇಶ-ದೇಶಗಳ ನಡುವೆಯೂ ವ್ಯಾಜ್ಯ, ತಂಟೆ ಸಾಮಾನ್ಯವಾಗಿ ಕಂಡುಬರುತ್ತದೆ. ಅಷ್ಟೇ ಏಕೆ, ಒಂದು ದೇಶದೊಳಗಿನ ರಾಜ್ಯಗಳ ನಡುವೆಯೂ ಜಲವಿವಾದಗಳು ಇರುವುದು ಹೊಸದೇನಲ್ಲ. ನಮ್ಮ ದೇಶದಲ್ಲಿಯೇ ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಆದರೆ ಇಂತಹ ಸಂದರ್ಭದಲ್ಲಿ ಪರಸ್ಪರ ಮಾತುಕತೆ ಮೂಲಕ ಸೌಹಾರ್ದ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಸೂಕ್ತ. ಏಕೆಂದರೆ, ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲೇರುತ್ತ ಹೋದರೆ ಸಮಸ್ಯೆ ಪರಿಹಾರ ವಿಳಂಬವಾಗಿ, ಎರಡೂ ಪಕ್ಷದವರಿಗೆ ಯೋಜನೆಗಳನ್ನು ಜಾರಿಮಾಡುವಲ್ಲಿ ಸಮಸ್ಯೆಯಾಗಿ ಕಷ್ಟನಷ್ಟ ಅನುಭವಿಸಬೇಕಾಗುತ್ತದೆ. ರಾಜ್ಯಗಳ ನಡುವಣ ಜಲವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕ ನ್ಯಾಯಾಧಿಕರಣವನ್ನು ರಚಿಸಿರುವುದು ಕೂಡ ಒಂದು ಉತ್ತಮ ಹೆಜ್ಜೆ. ಇದರಿಂದ ವಿವಾದಗಳ ಸಂಕೀರ್ಣತೆಯನ್ನು ತಗ್ಗಿಸಿ, ವಿಳಂಬವನ್ನು ಕೂಡ ಕಡಿಮೆ ಮಾಡಬಹುದು. ಈ ಮೊದಲು, ಆಯಾ ವಿವಾದಕ್ಕೆ ಪ್ರತ್ಯೇಕ ನ್ಯಾಯಮಂಡಳಿಗಳು ರಚನೆಯಾಗುತ್ತಿದ್ದವು.
ಕರೊನಾ ಕಾರಣದಿಂದಾಗಿ ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದ್ದು, ಅಪೇಕ್ಷಿತ ಹಣವನ್ನು ಒದಗಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ; ಕರ್ನಾಟಕವೂ ಇದಕ್ಕೆ ಹೊರತಲ್ಲ. ತೆರಿಗೆ ಸಂಗ್ರಹ ಕೂಡ ಕಡಿಮೆಯಾಗಿದೆ. ಆದರೂ, ಅತಿ ಜರೂರಾದ ನೀರಾವರಿ ಯೋಜನೆಗಳಿಗೆ ತಕ್ಕಮಟ್ಟಿಗಾದರೂ ಹಣಕಾಸು ಒದಗಿಸುವ ಯತ್ನ ಮಾಡುವುದು ಅನಿವಾರ್ಯ. ಇಲ್ಲವಾದಲ್ಲಿ ರಾಜ್ಯದ ಮತ್ತು ಸಂಬಂಧಪಟ್ಟ ಯೋಜನಾ ವ್ಯಾಪ್ತಿಯ ಜನರ ಅಭಿವೃದ್ಧಿ ಮತ್ತಷ್ಟು ಮುಂದಕ್ಕೆ ಹೋಗುವಂತಾಗುತ್ತದೆ.