ಹಣಕಾಸು ಶಿಕ್ಷಣ ಮತ್ತು ಬಂಡವಾಳ ಹೂಡಿಕೆ ಜಾಗೃತಿ- ಈ ಎರಡು ವಿಷಯಗಳನ್ನು ಪದವಿ ವಿದ್ಯಾರ್ಥಿಗಳಿಗೆ ಕಲಿಸುವ ಕುರಿತಂತೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ (ಎನ್ಎಸ್ಇ- ರಾಷ್ಟ್ರೀಯ ಷೇರು ವಿನಿಮಯ) ಅಂಗಸಂಸ್ಥೆ ಎನ್ಎಸ್ಇ ಅಕಾಡೆಮಿ ಲಿಮಿಟೆಡ್ (ಎನ್ಎಎಲ್) ಜತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ಮಾಡಿಕೊಂಡಿರುವುದು ಮಹತ್ವದ ಹಾಗೂ ಸಕಾಲಿಕ ಬೆಳವಣಿಗೆ ಆಗಿದೆ. ಇದೇ ವೇಳೆ ಎನ್ಎಸ್ಇ ಅಕಾಡೆಮಿಯು ರಾಜ್ಯದ 20 ವಿಶ್ವವಿದ್ಯಾಲಯಗಳ ಜತೆಗೂ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದೆ. ಮಾರುಕಟ್ಟೆ ಬಂಡವಾಳೀಕರಣದಲ್ಲಿ ಎನ್ಎಸ್ಇ ವಿಶ್ವದ 11ನೇ ಅತಿದೊಡ್ಡ ಹಾಗೂ ಸಾಮಾನ್ಯ ಷೇರುಗಳ ವಹಿವಾಟಿನ ಸಂಖ್ಯಾ ದೃಷ್ಟಿಯಿಂದ ಜಗತ್ತಿನ ಮೂರನೇ ಅತಿದೊಡ್ಡ ಷೇರು ವಿನಿಮಯ ಕೇಂದ್ರವಾಗಿ ಗುರುತಿಸಿಕೊಂಡಿದೆ. 1992ರಲ್ಲಿ ಅಸ್ತಿತ್ವಕ್ಕೆ ಬಂದ ಇಂತಹ ಮಹತ್ವದ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು, ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಮುಂದಾಗಿರುವುದು ಮುಂಬರುವ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಸಾಮಾನ್ಯವಾಗಿ ಶಿಕ್ಷಣದಲ್ಲಿ ಪಠ್ಯಬೋಧನೆಗೆ ಒತ್ತು ಕೊಡಲಾಗುವುದರಿಂದ ವಿದ್ಯಾರ್ಥಿಗಳು ಪುಸ್ತಕ ಹುಳುಗಳಾಗಿ ಪರೀಕ್ಷೆ ಎದುರಿಸಲು ಸಜ್ಜಾಗುವುದಕ್ಕೆ ಸೀಮಿತವಾಗುವ ಸಾಧ್ಯತೆಗಳೇ ಕಂಡುಬರುತ್ತವೆ. ದೇಶದ ಹಣಕಾಸು ರಂಗದಲ್ಲಿ ಮುಂಚೂಣಿಯಲ್ಲಿರುವ ಎನ್ಎಸ್ಇಯಂತಹ ಸಂಸ್ಥೆಯಲ್ಲಿ ಪ್ರಾಯೋಗಿಕ ಅನುಭವ ಹೊಂದಿದ ಸಂಪನ್ಮೂಲ ವ್ಯಕ್ತಿಗಳ ಬೋಧನೆಯು ವಿದ್ಯಾರ್ಥಿಗಳ ಪ್ರಾಯೋಗಿಕ ತಿಳಿವಳಿಕೆ ಹಾಗೂ ಕೌಶಲ ವೃದ್ಧಿಗೆ ಸಹಕಾರಿಯಾಗಿ ಮುಂದೆ ಅವರು ಉದ್ಯೋಗಕ್ಕೆ ಹೋಗುವಾಗ ಪ್ರಯೋಜನಕ್ಕೆ ಬರಬಹುದಾಗಿದೆ.
ಎರಡನೇ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಹೊಸ ವಿಷಯಗಳನ್ನು ಬೋಧಿಸುವ ಉದ್ದೇಶದ ಒಡಂಬಡಿಕೆ ಇದಾಗಿದೆ. ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಇದೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಎಲ್ಲ ಪದವಿ ಕಾಲೇಜುಗಳು ಪಠ್ಯಕ್ರಮದ ಭಾಗವಾಗಿ ಈ ಕೋರ್ಸ್ ಅಳವಡಿಸಿಕೊಳ್ಳಬೇಕಾದುದು ಕಡ್ಡಾಯವಾಗಿದೆ. ಈ ಒಡಂಬಡಿಕೆಯ ಭಾಗವಾಗಿ ಎನ್ಎಸ್ಇ ಅಕಾಡೆಮಿಯು ಉಪನ್ಯಾಸಕರಿಗೆ ತರಬೇತಿ ಕೊಡಲು ‘ಟ್ರೇನ್ ದಿ ಟ್ರೇನರ್’ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ನಂತರ ಬೋಧಕ ವೃಂದದವರು ತಾವು ಕಲಿತದ್ದನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಲಿದ್ದಾರೆ. ಬೋಧಕ ವೃಂದವು ಈ ಹೊಸ ವಿಷಯಗಳನ್ನು ಕಲಿತು ಪ್ರಭುತ್ವ ಸಾಧಿಸಲು ಸಮಯಾವಕಾಶದ ಅಗತ್ಯ ಇರುತ್ತದೆ. ಹೀಗಾಗಿ, ತ್ವರಿತ ಗತಿಯಲ್ಲಿ ಆರಂಭಿಸುವಾಗ ಪೂರ್ವಸಿದ್ಧತೆ ಕೊರತೆಯಾಗದಂತೆ ಎಚ್ಚರವಹಿಸಬೇಕಾಗುತ್ತದೆ.
‘ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಈ ಎರಡನ್ನೂ ಕಲಿಕೆಯ ಭಾಗವನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ. ಉದ್ಯಮಶೀಲತೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಯುವಜನರು ತೊಡಗಿಸಿಕೊಳ್ಳಲು ಇದರಿಂದ ಪ್ರೇರಣೆ ಸಿಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಪ್ರಸ್ತುತ ಕಾಲಕ್ಕೆ ತಕ್ಕಂತೆ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆ, ಹೊಸ ವಿಷಯಗಳ ಸೇರ್ಪಡೆ ಅಪೇಕ್ಷಣಿಯವೇ. ಆದರೆ, ಬೋಧಕರಿಗೆ ತರಬೇತಿ, ಪಠ್ಯಕ್ರಮ, ಬೋಧನೆಗೆ ಸಮಯ ಹೊಂದಾಣಿಕೆ ಮುಂತಾದ ಅಗತ್ಯ ಸಿದ್ಧತೆ ಮತ್ತು ವ್ಯವಸ್ಥೆಗಳನ್ನು ಕೈಗೊಂಡು ಮುಂದಡಿ ಇಡುವುದು ಸಮಂಜಸ.