ಕರೊನಾ ಲಾಕ್ಡೌನ್ ಕಾರಣದಿಂದಾಗಿ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರವಾದ ದುಷ್ಪರಿಣಾಮ ಆಗಿರುವುದು ಗೊತ್ತೇ ಇದೆ. ಬಹುತೇಕ ಚೀನಾವೊಂದನ್ನು ಹೊರತುಪಡಿಸಿ, ಈ ತೊಂದರೆಯಿಂದ ಜಗತ್ತಿನ ಯಾವ ದೇಶವೂ ಹೊರತಾಗಿಲ್ಲ. ಕೋಟ್ಯಂತರ ಸಂಖ್ಯೆಯ ಉದ್ಯೋಗನಷ್ಟ ಆಗಿರುವುದು ಒಂದುಕಡೆಯಾದರೆ, ಹೊಸ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗದಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಈ ತೊಂದರೆ ಹೀಗೇ ಬಹುಕಾಲ ಮುಂದುವರಿದರೆ ಸಮಾಜದಲ್ಲಿ ಮತ್ತಷ್ಟು ಅಪಸವ್ಯಗಳು ಕಂಡುಬರುವುದರಲ್ಲಿ ಸಂದೇಹವಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಜನವರ್ಗವರಿಗಾಗಿ ಕಾಲಕಾಲಕ್ಕೆ ನೆರವಿನ ಯೋಜನೆಗಳನ್ನು ಘೋಷಿಸುತ್ತಿರುವುದು ಉತ್ತಮ ಕ್ರಮ ಎಂದು ಹೇಳಬಹುದು. ಇದರಿಂದ, ಕಷ್ಟಕ್ಕೆ ಸಿಲುಕಿದವರ ಸಮಸ್ಯೆ ಪೂರ್ಣವಾಗಿ ಬಗೆಹರಿಯುವುದಿಲ್ಲ ಎಂಬುದು ನಿಜ. ಆದರೆ ತಾತ್ಕಾಲಿಕ ಆಸರೆಯಾದರೂ ಆಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಕರ್ನಾಟಕ ಸರ್ಕಾರದ ಕಾರ್ವಿುಕ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಕಾರ್ವಿುಕರಿಗೆ ಸುಮಾರು 22 ಲಕ್ಷ ಫುಡ್ ಕಿಟ್ ವಿತರಿಸಿದೆ. ಇದರಿಂದ ದೊಡ್ಡ ಸಂಖ್ಯೆಯ ಜನರಿಗೆ ಪ್ರಯೋಜನವಾಗಿದ್ದು, ಅಲ್ಲಲ್ಲಿ ಆರೋಪಗಳೂ ಕೇಳಿಬಂದಿದ್ದವು. ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರು ಫುಡ್ ಕಿಟ್ ವಿತರಣೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಕಾರ್ವಿುಕ ವಲಯಕ್ಕೆ ನೆರವಾಗುವ ಮತ್ತಷ್ಟು ಯೋಜನೆಗಳನ್ನು ಸಚಿವ ಹೆಬ್ಬಾರ್ ಪ್ರಕಟಿಸಿದ್ದಾರೆ. ಅಸಂಘಟಿತ ವಲಯದಲ್ಲಿರುವ ಆಟೋ, ಲಾರಿ, ಬಸ್ ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ಕಾರ್ವಿುಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಅನುದಾನವನ್ನು ದುಪ್ಪಟ್ಟು ಮಾಡಲು ಇಲಾಖೆ ತೀರ್ಮಾನಿಸಿದೆ. ಹಾಗೇ, ಕೆಎಎಸ್, ಐಎಎಸ್ ಓದುವ ಕಾರ್ವಿುಕ ಮಕ್ಕಳಿಗೆ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕಾರ್ವಿುಕ ಆದಾಲತ್, ಕಾರ್ವಿುಕ ಇಲಾಖೆಗೆ ಸಂಬಂಧಪಟ್ಟಂತೆ ವಿಜಲೆನ್ಸ್ ಸೆಲ್ ಸ್ಥಾಪನೆ ಮುಂತಾದ ವಿಚಾರಗಳನ್ನೂ ಸಚಿವರು ಪ್ರಕಟಿಸಿದ್ದಾರೆ.
ನಮ್ಮಲ್ಲಿ ಅಸಂಘಟಿತ ವಲಯಕ್ಕೆ ಸೇರಿದ ದೊಡ್ಡ ಸಂಖ್ಯೆಯ ಕಾರ್ವಿುಕರಿದ್ದು, ಇವರಲ್ಲಿ ಎಷ್ಟೋ ಜನರ ಬಳಿ ಸರ್ಕಾರಿ ಸವಲತ್ತು ಪಡೆಯಲು ಬೇಕಾದ ಸೂಕ್ತ ದಾಖಲೆಗಳು ಇಲ್ಲ. ಜತೆಗೆ, ಅಧಿಕೃತ ಸರ್ಕಾರಿ ಸಂಸ್ಥೆಗಳಲ್ಲಿ ಇವರ ನೋಂದಣಿ ಕೂಡ ಆಗಿಲ್ಲ. ಹೀಗಾಗಿ ಕೆಲವೊಮ್ಮೆ ಕಾರ್ವಿುಕರಲ್ಲಿ ಎಷ್ಟೋ ಮಂದಿಗೆ ಸರ್ಕಾರಿ ಸೌಲಭ್ಯಗಳು ದಕ್ಕುವುದಿಲ್ಲ. ಇದಲ್ಲದೆ, ಎಷ್ಟೋ ಅಸಂಘಟಿತ ಕಾರ್ವಿುಕರಿಗೆ ಸರ್ಕಾರದ ಯೋಜನೆ ಹಾಗೂ ಸವಲತ್ತುಗಳ ಅರಿವು ಸಹ ಸರಿಯಾಗಿ ಇಲ್ಲ. ಈ ಕಾರಣದಿಂದಾಗಿ ಅರ್ಹರು ಯೋಜನೆಯ ಫಲ ಪಡೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆ ಕಾರ್ವಿುಕ ಇಲಾಖೆಯದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಮಾನವೀಯ ಸಂವೇದನೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗಾಗಿ, ರಾಜ್ಯದ ಎಲ್ಲ ಅಸಂಘಟಿತ ಕಾರ್ವಿುಕ ವಲಯದ ವೈಜ್ಞಾನಿಕ ಡೇಟಾಬೇಸ್ ಅಭಿವೃದ್ಧಿಪಡಿಸುವತ್ತ ಗಮನ ನೀಡಬೇಕಿದೆ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಇದು ಅಸಾಧ್ಯವೇನೂ ಅಲ್ಲ. ಈ ವ್ಯವಸ್ಥೆ ನೂರಕ್ಕೆ ನೂರು ದೋಷರಹಿತವಾಗುತ್ತದೆ ಎಂದು ಹೇಳಲಾಗದಾದರೂ, ಬಹುಜನಕ್ಕೆ ಪ್ರಯೋಜನಕಾರಿಯಾಗುತ್ತದೆ.