ನ್ಯೂಸ್

ಅಧಿವೇಶನ ವ್ಯರ್ಥವಾಗದಿರಲಿ: ರಾಜಕೀಯ ಮೇಲಾಟಕ್ಕೆ ಬಲಿಯಾಗದೆ ಅರ್ಥಪೂರ್ಣವಾಗಿ ನಡೆಯಲಿ..

Video - Jyothi Bhat

ಹದಿನೈದನೇ ವಿಧಾನಸಭೆಯ 13ನೇ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು, ಜನಸಾಮಾನ್ಯರು ತಾವು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯ ಹಾಗೂ ಸವಾಲುಗಳಿಗೆ ಅದರಲ್ಲೂ ಅತಿವೃಷ್ಟಿ ಹಾನಿಗೆ ಸದನದಿಂದ ಸೂಕ್ತ ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಹಿಂದಿನ ಅಧಿವೇಶನಗಳ ಕಾರ್ಯಕಲಾಪಗಳತ್ತ ಹಿನ್ನೋಟ ಹರಿಸಿದಾಗ ಇಂತಹ ಅಪೇಕ್ಷೆ ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆ ತಲೆದೋರುವಂತಾಗಿದೆ. ಈ ಹಿಂದೆ ಕೆಲ ಸಂಗತಿಗಳು ಒಣ ಪ್ರತಿಷ್ಠೆಯಾಗಿ ಕಲಾಪದ ಅಮೂಲ್ಯ ಅವಧಿಯೇ ವ್ಯರ್ಥವಾಗಿರುವ ಕಹಿ ಅನುಭವ ಜನರ ನೆನಪಿನಿಂದ ಮರೆಯಾಗಿಲ್ಲ. ಚರ್ಚೆಗೂ ಅವಕಾಶ ಕೊಡದೆ, ಆಸಕ್ತಿಯೂ ಇಲ್ಲ ಎನ್ನುವ ರೀತಿಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸಾಕಷ್ಟು ಸದಸ್ಯರು ವರ್ತಿಸಿರುವುದನ್ನು ರಾಜ್ಯದ ಜನತೆ ಗಮನಿಸಿಯೇ ಇದ್ದಾರೆ. ಸುಸೂತ್ರವಾಗಿ ಅಧಿವೇಶನ ನಡೆಯಲು ಕಲಾಪ ಸಲಹಾ ಸಮಿತಿ ಕೂಡ ನೆರವಿಗೆ ಬಾರದಿರುವುದು ಉತ್ತರದಾಯಿತ್ವದ ಕೊರತೆ, ರಾಜಕೀಯ ದಾಷ್ಟರ್್ಯತನದ ಪ್ರತೀಕ ಎಂಬಂತೆ ಗೋಚರಿಸುವಂತಾಗಿದೆ.

ನಾನಾ ಕಾರಣಗಳಿಂದಾಗಿ ಬಜೆಟ್ ಅಧಿವೇಶನದ ಬಳಿಕ ಸಾಕಷ್ಟು ದೀರ್ಘಾವಧಿ ನಂತರ ಸದನ ಮತ್ತೆ ಸೇರುತ್ತಿದೆ. ಈ ನಡುವೆ ರಾಜ್ಯದ ಜನರು ಅತಿವೃಷ್ಟಿಗೆ ತುತ್ತಾಗಿದ್ದಾರೆ. ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಸಮಸ್ಯೆ ನಿಭಾಯಿಸಲು, ಪರಿಹಾರ ಕಲ್ಪಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ; ಭವಿಷ್ಯದಲ್ಲಿ ಮಳೆ ಅವಾಂತರ ನಿವಾರಿಸಲು ಹೇಗೆ ಸಿದ್ಧತೆ ಮಾಡಿದೆ ಎಂಬುದನ್ನು ಸದನದ ಚರ್ಚೆಗಳ ಮೂಲಕ ಜನರು ತಿಳಿದುಕೊಳ್ಳಲು ಬಯಸಿದ್ದು, ಸರ್ಕಾರಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ತಪ್ಪಿದಲ್ಲಿ ಕಿವಿಹಿಂಡಿ ತಿದ್ದುವ ಜವಾಬ್ದಾರಿಯನ್ನು ವಿರೋಧಪಕ್ಷಗಳು ಮಾಡಬೇಕೆಂಬ ಅಪೇಕ್ಷೆಯನ್ನೂ ಹೊಂದಿದ್ದಾರೆ. ಇತ್ತೀಚಿನ ಬೆಳವಣಿಗೆಗಳಾದ ಕಮೀಷನ್ ಆರೋಪ, ಸರ್ಕಾರಿ ಹುದ್ದೆಗಳ ನೇಮಕದಲ್ಲಿ ಅಕ್ರಮ ಮುಂತಾದ ವಿಚಾರಗಳು ಸಹ ಕಲಾಪದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಆದರೆ, ಇದನ್ನೇ ನೆಪ ಮಾಡಿಕೊಂಡು ಅಡ್ಡಿಪಡಿಸುವುದು, ಹಠ ಹಿಡಿಯುವುದು ಮಾತ್ರ ಅಪೇಕ್ಷಣೀಯವಲ್ಲ. ಚುನಾವಣೆ ಕೂಡ ಸನಿಹದಲ್ಲಿದ್ದು, ಇದಕ್ಕೆ ತಯಾರಿ ನಡೆಸಿರುವ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಪರಸ್ಪರ ಆರೋಪದಲ್ಲಿ ತೊಡಗಿವೆ. ಈ ರಾಜಕೀಯ ಮೇಲಾಟವು ಕಲಾಪವನ್ನು ಆಪೋಶನ ತೆಗೆದುಕೊಂಡೀತು ಎಂಬ ಭೀತಿ ಕೂಡ ಇದೆ. ಶಾಸನಗಳನ್ನು ರೂಪಿಸುವುದೇ ವಿಧಾನಸಭೆಯ ಪರಮಕರ್ತವ್ಯವಾಗಿದೆ.

ಹೀಗಾಗಿ, ಶಾಸನಸಭೆ ಎಂದೂ ಇದನ್ನು ಕರೆಯುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಶಾಸನಗಳ ಕುರಿತು ಸೂಕ್ತ ಹಾಗೂ ವಿಸõತ ಚರ್ಚೆಗಳು ಜರುಗದೆ ಗದ್ದಲ-ಗಲಾಟ ನಡುವೆಯೇ ಅಂಗೀಕಾರವಾಗುತ್ತಿರುವುದು ಸದನದ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗುತ್ತಿದೆ. ಈಚೆಗೆ ಸದನದ ಕಾರ್ಯಕಲಾಪಗಳ ಅವಧಿಯೂ ಕ್ರಮೇಣ ಕಡಿಮೆಯಾಗುತ್ತಿದೆ. ಇದರ ನಡುವೆಯೇ ಲಭ್ಯ ಕಾಲಾವಕಾಶ ಬಳಸಿಕೊಂಡು ಅರ್ಥಪೂರ್ಣ ಚರ್ಚೆ, ದೂರದೃಷ್ಟಿಯ ವಿಚಾರಗಳು, ವಿಮರ್ಶಾತ್ಮಕ ನಡೆ ನುಡಿ ಇಲ್ಲದಿದ್ದರೆ ಶಾಸನ ರಚನಾ ಸಭೆಗಳ ಉದ್ದೇಶವೇ ತಲೆಕೆಳಗಾಗುತ್ತದೆ. ಆಡಳಿತ ಮತ್ತು ಪ್ರತಿಪಕ್ಷಗಳು ಜನ ಸೇವೆಯ ನೈಜ ಆಶಯವನ್ನು ಈಡೇರಿಸಬೇಕೆಂಬ ಕಳಕಳಿಯೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಜನರ ತೆರಿಗೆಯಿಂದ ಸದನ ನಡೆಯುತ್ತದೆ. ಕೋಟ್ಯಂತರ ರೂಪಾಯಿ ವ್ಯಯವಾಗುತ್ತದೆ. ಈ ಆರ್ಥಿಕ ದೃಷ್ಟಿಕೋನ ಹೊರತುಪಡಿಸಿದರೂ, ನಾಡಿನ ಆಶೋತ್ತರಗಳನ್ನು ಈಡೇರಿಸುವಂತಹ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕಾದುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ. ಅರ್ಥಪೂರ್ಣ ಚರ್ಚೆ ಮೂಲಕ ಸತ್ವಪೂರ್ಣ ನಿರ್ಧಾರಗಳು ಹೊರಹೊಮ್ಮಿದರೆ ಮಾತ್ರ ಇದು ಈಡೇರಲು ಸಾಧ್ಯ.