ನ್ಯೂಸ್

ಸಂಪಾದಕೀಯ | ದಟ್ಟಣೆ ತಗ್ಗಲಿ; ಬೆಂಗಳೂರು ಸಂಚಾರ ಸಮಸ್ಯೆಗೆ ಪರಿಹಾರ ಅಗತ್ಯ..

Webdesk - Ravikanth

ರಾಜ್ಯ ರಾಜಧಾನಿ ಬೆಂಗಳೂರಿಗೆ ನಿತ್ಯವೂ ಸಾವಿರಾರು ವಾಹನಗಳು ಆಗಮಿಸುತ್ತವೆ; ಇಲ್ಲಿಂದ ನಿರ್ಗಮಿಸುತ್ತವೆ. ಲಕ್ಷಾಂತರ ಜನರು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ; ಇಲ್ಲಿಂದ ತೆರಳುತ್ತಾರೆ. ಪ್ರಯಾಣಿಕರ ವಾಹನಗಳಲ್ಲದೆ ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆಯ ವಾಹನಗಳು ಕೂಡ ಬಂದು ಹೋಗಿ ಮಾಡುತ್ತಿರುತ್ತವೆ. ಇದಲ್ಲದೆ, ದ್ವಿಚಕ್ರ, ತ್ರಿಚಕ್ರ ಹಾಗೂ ಚತುಷ್ಚಕ್ರ ಸೇರಿ ಬೆಂಗಳೂರಿನಲ್ಲಿಯೇ ಸುಮಾರು ಒಂದು ಕೋಟಿ ವಾಹನಗಳು ಇವೆ. ಹೀಗಾಗಿ ಬೆಂಗಳೂರಿನ ಯಾವ ರಸ್ತೆಯಲ್ಲಿ ನೋಡಿದರೂ ವಾಹನಗಳ ಸಾಲು ಕಾಣಿಸುತ್ತದೆ; ಟ್ರಾಫಿಕ್ ಜಾಮ್ ಸಾಮಾನ್ಯ ಎಂಬಂತಾಗಿದೆ. ಆದ್ದರಿಂದ ಬೆಂಗಳೂರಿನ ಸಂಚಾರ ದಟ್ಟಣೆ ಎಂದರೆ ಎಲ್ಲರೂ ಹೆದರುವಂತಾಗಿದೆ. ನಗರಾಡಳಿತದ ಜವಾಬ್ದಾರಿ ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಸೇರಿ ಸಂಬಂಧಪಟ್ಟ ಎಲ್ಲರಿಗೂ ಇದನ್ನು ನಿಭಾಯಿಸುವುದು ಭಾರಿ ಸವಾಲಾಗಿ ಪರಿಣಮಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ದಿನಗಳ ಹಿಂದೆ ಪ್ರಮುಖ ಅಧಿಕಾರಿಗಳ ಸಭೆ ನಡೆಸಿ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹೆಚ್ಚು ಸಂಚಾರ ದಟ್ಟಣೆಯ ಪ್ರದೇಶಗಳಿಗೆ ರಾತ್ರಿವೇಳೆಯಲ್ಲಿ ತೆರಳಿ ಪರಿಶೀಲಿಸುತ್ತಿದ್ದಾರೆ; ವಿವಿಧ ಕ್ರಮಗಳ ಬಗ್ಗೆ ಆಲೋಚಿಸುತ್ತಿದ್ದಾರೆ. ಜತೆಗೆ ಈವರೆಗೆ ಮೂರು ಸಭೆ ನಡೆಸಿ ರ್ಚಚಿಸಿದ್ದಾರೆ. ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವುದು ಒಂದೇ ಇಲಾಖೆ ಕೈಲಿ ಸಾಧ್ಯವಿಲ್ಲ. ಆದ್ದರಿಂದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಹೋಗಿ ವಾಸ್ತವ ಚಿತ್ರಣ ಪಡೆಯುವುದು ಹೆಚ್ಚು ಪರಿಣಾಮಕಾರಿ. ಬೆಂಗಳೂರು ಐಟಿಬಿಟಿ ನಗರವಾಗಿರುವುದರಿಂದ ಇಲ್ಲಿನ ತೊಂದರೆ, ಸಮಸ್ಯೆಗಳು ವ್ಯಾಪಕವಾಗಿ ಚರ್ಚೆಯಾಗುತ್ತವೆ ಮತ್ತು ಅಂತಾರಾಷ್ಟ್ರೀಯವಾಗಿ ಬೇರೆ ಬೇರೆ ಸಂದೇಶಗಳನ್ನು ರವಾನಿಸುತ್ತವೆ. ಅದರಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಹಾಗೂ ಬಿಬಿಎಂಪಿ ಚುನಾವಣೆ ಯಾವಾಗ ಬೇಕಿದ್ದರೂ ನಡೆಯುವ ಸಾಧ್ಯತೆ ಇರುವುದರಿಂದಾಗಿ ಸರ್ಕಾರ ಸಂಚಾರ ರಗಳೆ ಬಗ್ಗೆ ಚಿಂತಿತವಾಗಿದ್ದರೆ ಅದು ಸಹಜವೇ.

ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಆದಲ್ಲಿ ಸಮಯನಷ್ಟ, ಆರ್ಥಿಕನಷ್ಟದ ಜತೆಗೆ ಪರಿಸರದ ಮೇಲೂ ಅಷ್ಟರಮಟ್ಟಿಗೆ ದುಷ್ಪರಿಣಾಮವಾಗುತ್ತದೆ; ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬೆಂಗಳೂರಿನಲ್ಲಿ ಮೆಟ್ರೋ ಇದ್ದರೂ ಅದು ಸದ್ಯ ಕೆಲ ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ. ನಮ್ಮ ರಾಜ್ಯದಲ್ಲಿ ರೈಲು ಸಂಪರ್ಕ ಇನ್ನೂ ವ್ಯಾಪಕವಾಗಿಲ್ಲ. ಹೀಗಾಗಿ ರಸ್ತೆ ಅವಲಂಬನೆ ಹೆಚ್ಚು. ಅಗತ್ಯ ಇರುವಲ್ಲಿ ಮೇಲ್ಸೇತುವೆ ನಿರ್ವಣ, ರಸ್ತೆ ನಿರ್ವಣ, ಟ್ರಾಫಿಕ್ ಮಾರ್ಪಾಡು, ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿ ಜನರನ್ನು ಪ್ರೋತ್ಸಾಹಿಸುವುದು, ಮೆಟ್ರೋ ವಿಸ್ತರಣೆ- ಹೀಗೆ ಭಿನ್ನ ಕ್ರಮಗಳ ಮೂಲಕ ಸಂಚಾರ ದಟ್ಟಣೆಯನ್ನು ತಗ್ಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದುದು ಸಂಬಂಧಪಟ್ಟ ಇಲಾಖೆಗಳ ಹೊಣೆಗಾರಿಕೆ. ಸಂಚಾರ ನಿಯಮ ಪಾಲನೆ ಮೂಲಕ ಇದಕ್ಕೆ ಸಹಕರಿಸುವ ಜವಾಬ್ದಾರಿ ಜನರ ಮೇಲೂ ಇದೆಯೆಂಬುದನ್ನು ಮರೆಯಲಾಗದು. ಬೆಂಗಳೂರು ಸಂಚಾರ ಸುಗಮವಾದರೆ ಇಡೀ ರಾಜ್ಯಕ್ಕೆ ಅನುಕೂಲವಾದಂತೆ.