ನ್ಯೂಸ್

ಸಂಪಾದಕೀಯ | ಆಮೂಲಾಗ್ರ ಸುಧಾರಣೆ ತನ್ನಿ; ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಕಲ್ಪ ಅಗತ್ಯ

Webdesk - Ravikanth

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಪುನರ್ ವಿಂಗಡಿಸುವ ಕುರಿತು ಆರೋಗ್ಯ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ. ಸಮತಟ್ಟು ಪ್ರದೇಶದಲ್ಲಿ 30 ಸಾವಿರ ಜನಸಂಖ್ಯೆಗೆ ಒಂದು, ಗುಡ್ಡಗಾಡು ಪ್ರದೇಶದಲ್ಲಿ 20 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬೇಕು. ಆದರೆ, ಅಸಮಾನ ಹಂಚಿಕೆಯಿಂದ ಆಡಳಿತ ಕಾರ್ಯಗಳಿಗೆ ತೊಂದರೆಯಾಗಿದೆ. ಪುನರ್ ವಿಂಗಡಣೆಗಾಗಿ ಆಯಾ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಕೇಂದ್ರಗಳ ಪುನರ್ ವಿಂಗಡಣೆಯಿಂದ ಆರೋಗ್ಯ ಕಾರ್ಯಕ್ರಮಗಳ ಮೇಲ್ವಿಚಾರಣೆ, ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಿಕೆ ಸೇರಿದಂತೆ ಹಲವು ಅನುಕೂಲಗಳು ಆಗಲಿವೆ ಎಂಬುದೇನೋ ನಿಜ. ಆದರೆ, ಪಿಎಚ್​ಸಿಗಳ ಮೂಲಭೂತ ಸಮಸ್ಯೆಗಳನ್ನೇ ಬಗೆಹರಿಸದೆ ಇಂಥ ಕ್ರಮಗಳು ಕೈಗೊಂಡಲ್ಲಿ ಅವು ಯಾವುದೇ ಫಲ ನೀಡುವುದಿಲ್ಲ.

ಮುಖ್ಯ ಕೊರತೆಗಳನ್ನೇ ನಿವಾರಿಸದೆ, ಮೂಲಸೌಕರ್ಯಗಳನ್ನು, ಸೂಕ್ತ ಸಿಬ್ಬಂದಿಯನ್ನು ಕಲ್ಪಿಸದೆ ಬರೀ ಕಟ್ಟಡಗಳನ್ನು ನಿರ್ವಿುಸಿದರೆ, ಕೆಲ ಸಮಯದಲ್ಲೇ ಅವು ಸುಣ್ಣಬಣ್ಣ ಕಳೆದುಕೊಂಡು ಹಾಳುಕೊಂಪೆಯಂತಾಗಿ ಬಿಡುತ್ತವೆ. ಅದರಿಂದ ಏನು ಸಾಧಿಸಿದಂತಾಯಿತು? ಬಹುತೇಕ ಹಳ್ಳಿಗಳಿಗೆ ವೈದ್ಯರು ಬರಲು ಸಿದ್ಧರಿಲ್ಲ. ವೈದ್ಯರಿರುವಲ್ಲಿ ಇತರ ಸಿಬ್ಬಂದಿ, ವೈದ್ಯಕೀಯ ಉಪಕರಣಗಳಿಲ್ಲ. 2021ರ ಸೆಪ್ಟೆಂಬರ್​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್​ಗೆ ಸಲ್ಲಿಸಿದ್ದ ಸಮಗ್ರ ವರದಿಯಲ್ಲಿ, ಹಲವು ಕಳವಳಕಾರಿ ಅಂಶಗಳು ಬೆಳಕಿಗೆ ಬಂದಿದ್ದವು ಎಂಬುದನ್ನು ಮರೆಯುವಂತಿಲ್ಲ. ಬಹುತೇಕ ಪಿಎಚ್​ಸಿಗಳು ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದು, ಚಿಕಿತ್ಸೆ ನೀಡಲು ಬೇಕಾದ ಮೂಲಸೌಕರ್ಯಗಳೂ ಸಮರ್ಪಕ ಪ್ರಮಾಣದಲ್ಲಿ ಇಲ್ಲ. ಮಾನದಂಡದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರ 4,036ರಿಂದ 4,843 ಚದರ ಅಡಿ ವಿಸ್ತೀರ್ಣದಲ್ಲಿ ಇರಬೇಕು. ಆದರೆ, ಬಹುತೇಕ ಕಡೆ ಈ ಮಾನದಂಡ ಪಾಲನೆಯಾಗಿಲ್ಲ. 75 ಕೇಂದ್ರಗಳಲ್ಲಿ ತುರ್ತು ಆಂಬುಲೆನ್ಸ್ ಸೇವೆ, ಹೆರಿಗೆ ಕೊಠಡಿ ಇಲ್ಲ. ಹೀಗೆ ‘ಇಲ್ಲ’ಗಳ ಆಗರವಾಗಿರುವ ಪಿಎಚ್​ಸಿಗಳ ಆಮೂಲಾಗ್ರ ಸುಧಾರಣೆಗೆ ಸಂಕಲ್ಪ ಕೈಗೊಳ್ಳಬೇಕಿದೆ. ಬರೀ ಪುನರ್ ವಿಂಗಡಣೆ ಮಾಡಿ, ಆಡಳಿತಾತ್ಮಕ ಬದಲಾವಣೆಗಳನ್ನು ತಂದರೆ ಸಾಕಾಗುವುದಿಲ್ಲ.

ಪ್ರಮುಖ ಕೊರತೆಗಳನ್ನು ನೀಗಿಸದೆ ಗ್ರಾಮೀಣ ಆರೋಗ್ಯ ವ್ಯವಸ್ಥೆ ಶಕ್ತಿಶಾಲಿಯಾಗಲು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಸರ್ಕಾರ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಯೋಜನೆ, ಕಾರ್ಯಕ್ರಮಗಳನ್ನು ಬರೀ ಘೋಷಿಸಿ ಏನು ಫಲ? ಪಿಎಚ್​ಸಿಗಳ ಕುರಿತಂತೆ ಹಲವು ಆಶ್ವಾಸನೆಗಳು ಹಿಂದೆಯೂ ಬಂದಿವೆ. ಅವು ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದೆ, ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಹಾಗಾಗಿ, ಹಳ್ಳಿಗಳತ್ತ ವಿಶೇಷ ಗಮನ ವಹಿಸಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಜತೆಗೆ ಅಗತ್ಯ ಸೌಲಭ್ಯಗಳನ್ನು, ಸಿಬ್ಬಂದಿಯನ್ನು ಒದಗಿಸುವುದು ಅಗತ್ಯ. ಈ ವಿಷಯದಲ್ಲಿ ಸ್ಥಳೀಯ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕೂಡ ಬದ್ಧತೆ ಮೆರೆಯಬೇಕಿದೆ.