ಪಶ್ಚಿಮ ಬಂಗಾಳದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಒದಗುತ್ತಿದೆಯೇ ಎಂಬ ಭಾವನೆ ಬಲವಾಗುತ್ತಿದೆ. ಮುಂದಿನ ವರ್ಷ ಈ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಾಕಷ್ಟು ಮುಂಚೆಯೇ ರಾಜಕೀಯ ಬಿಸಿ ತಾರಕಕ್ಕೆ ಏರಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಧಿಕಾರ ಕೈತಪ್ಪದಂತೆ ತಂತ್ರಗಳನ್ನು ಹೆಣೆಯುತ್ತಿದ್ದರೆ, ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಸರ್ವಪ್ರಯತ್ನ ಮಾಡುತ್ತಿದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಕಾಪಾಡುವ ಬಲಿಷ್ಠ ವ್ಯವಸ್ಥೆ. ಇಲ್ಲಿ ಮತದಾರರೇ ನಿರ್ಣಾಯಕರು. ಅವರಿಗೆ ಯಾರ ಕೆಲಸ, ಅಭಿವೃದ್ಧಿಯ ದಿಕ್ಸೂಚಿ ಉತ್ತಮ ಎನಿಸುತ್ತದೋ, ಅಂಥವರಿಗೆ ಮತ ಹಾಕುತ್ತಾರೆ. ಯಾವುದೇ ಪಕ್ಷವನ್ನೂ ಆರಿಸಿದರೂ ಅದು ಜನಾದೇಶ ಎನಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಎಲ್ಲರೂ ತಲೆಬಾಗಲೇಬೇಕು. ಮತದಾರರನ್ನು ಓಲೈಸಲು, ವಿಚಾರಗಳನ್ನು ಮುಟ್ಟಿಸಲು ಪಕ್ಷಗಳು ಯತ್ನಿಸುವುದು ಸ್ವಾಭಾವಿಕ. ಆದರೆ, ಅದನ್ನೇ ನಿಮಿತ್ತ ಮಾಡಿಕೊಂಡು ರಾಜಕೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದು ಅಕ್ಷಮ್ಯ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ, ಸೌಹಾರ್ದಗಳಿಗೂ ಇಂಥ ಘಟನೆಗಳು ಭಂಗ ತರುತ್ತವೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪಶ್ಚಿಮ ಬಂಗಾಳ ಪ್ರವಾಸದ ಸಂದರ್ಭದಲ್ಲಿ, ಅವರ ಬೆಂಗಾವಲು ಪಡೆ ಮೇಲೆ ಕಲ್ಲುತೂರಾಟ ನಡೆದಿರುವುದು ಗಂಭೀರ ಘಟನೆ. ಈ ಬಗ್ಗೆ ರಾಜ್ಯಪಾಲರಿಂದ ವರದಿ ತರಿಸಿಕೊಂಡ ಕೇಂದ್ರ ಸರ್ಕಾರ ಕೆಲ ಸ್ಪಷ್ಟೀಕರಣಕ್ಕಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ದೆಹಲಿಗೆ ಬರುವಂತೆ ತಿಳಿಸಿದೆ. ಈ ಬಗ್ಗೆಯೂ ಕ್ಯಾತೆ ತೆಗೆದಿರುವ ರಾಜ್ಯ ಸರ್ಕಾರ, ಅಧಿಕಾರಿಗಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದೆ. ಇದೊಂದೇ ಘಟನೆಯಲ್ಲ. ಕಳೆದ ಹಲವು ತಿಂಗಳುಗಳಿಂದಲೂ ಈ ರಾಜ್ಯದಲ್ಲಿ ರಾಜಕೀಯ ಪ್ರೇರಿತ ಹಲ್ಲೆಗಳು, ಹತ್ಯೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಚೆ, ಕಮ್ಯುನಿಸ್ಟ್ ಪಕ್ಷ ಮತ್ತು ಟಿಎಂಸಿ ನಡುವೆ ಇಂಥದ್ದೇ ರಕ್ತರಂಜಿತ ಸಂಘರ್ಷಗಳು ನಡೆಯುತ್ತಿದ್ದದ್ದನ್ನು ಜನರು ಮರೆತಿಲ್ಲ. ಮತ್ತೆ ಆ ಹಳೆಯ ಪಶ್ಚಿಮ ಬಂಗಾಳ ಮರುಕಳಿಸುತ್ತಿದೆಯೇ ಎಂಬ ಅನುಮಾನ ಈಗಿನ ಬೆಳವಣಿಗೆಗಳಿಂದ ದಟ್ಟವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಅಪಾಯದಲ್ಲಿರುವುದಂತೂ ನಿಜ. ಜನರು ಪ್ರಜ್ಞಾವಂತರಾಗಿದ್ದಾರೆ. ರಾಜಕೀಯ ಅಪರಾಧ, ಭ್ರಷ್ಟಾಚಾರವನ್ನು ತಿರಸ್ಕರಿಸಿದಂತೆಯೇ ಹಿಂಸಾಚಾರವನ್ನೂ ಧಿಕ್ಕರಿಸುತ್ತಾರೆ. ಈ ವಾಸ್ತವವನ್ನು ಎಲ್ಲ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು.
ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿದ್ದರೂ, ಕೇಂದ್ರದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಅಗತ್ಯ. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಾಜಕೀಯ ದುರುದ್ದೇಶಗಳಿಂದಲೇ ಕೇಂದ್ರದೊಂದಿಗೆ ಅಸಹಕಾರ ನೀತಿ ತೋರು ತ್ತಿದ್ದು, ಈ ಮೂಲಕ ರಾಜನೀತಿ ಮೌಲ್ಯಗಳ ಚೌಕಟ್ಟನ್ನು ಮೀರುತ್ತಿದೆ. ಇದು ಕಳವಳ ಮೂಡಿಸುವ ಸಂಗತಿ. ಚುನಾವಣೆ ಹೊತ್ತಲ್ಲಿ ರಾಜಕೀಯ ಹಿಂಸಾಚಾರ ಮತ್ತಷ್ಟು ಹೆಚ್ಚುವ ಭೀತಿಯೂ ಇದೆ. ಹಾಗಾಗಿಯೇ ಪಶ್ಚಿಮ ಬಂಗಾಳದ ನಡೆ, ಮಮತಾ ಬ್ಯಾನರ್ಜಿ ಹಠ ಕೇಂದ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೆ, ಅಹಿತಕರ ಘಟನೆಗಳು ನಡೆಯದಂತೆ, ಸಂಯಮ ಮತ್ತು ವಿವೇಕದಿಂದ ನಡೆದುಕೊಳ್ಳುವುದು ಅಗತ್ಯ.