ಸಾಮಾಜಿಕ ಜಾಲತಾಣಗಳ ಸಾರ್ವಜನಿಕ ಬಳಕೆ ವ್ಯಾಪಕವಾಗಿ ವಿಸ್ತರಿಸುತ್ತಿರುವಂತೆಯೇ ಹಲವಾರು ರೀತಿಯ ಕಾಯಿಲೆಗಳನ್ನು, ಅದರಲ್ಲೂ ವಿಶೇಷವಾಗಿ ಮಾನಸಿಕ ಚಿಕಿತ್ಸೆಗಳನ್ನು ಸುಲಭವಾಗಿ ಗುಣಪಡಿಸುತ್ತೇವೆ ಎಂದು ಆಕರ್ಷಿಸುವವರ ಆನ್ಲೈನ್ ಚಿಕಿತ್ಸಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾವುದೇ ವೈದ್ಯಕೀಯ ಪದವಿ, ಅನುಭವ ಇಲ್ಲದಿದ್ದರೂ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ ಆನ್ಲೈನ್ ಚಿಕಿತ್ಸಕರಿಗೆ ಕಡಿವಾಣ ಹಾಕಲು ಸೂಕ್ತ ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸಬೇಕೆಂದು ಹೈಕೋರ್ಟ್ ಸೂಚಿಸಿರುವುದನ್ನು ತ್ವರಿತಗತಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸುವ ಅಗತ್ಯ ಇದೆ.
ಮೊಬೈಲ್ ಡೇಟಿಂಗ್ ಆಪ್ ಒಂದರಲ್ಲಿ ಪರಿಚಯವಾಗಿ ತಾನು ವೆಲ್ನೆಸ್ ಥೆರಪಿಸ್ಟ್ ಎಂದು ಹೇಳಿಕೊಂಡು ಟೆಕಿಯೊಬ್ಬನಿಂದ 3.1 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ಸೂಚನೆ ನೀಡಿರುವ ಹೈಕೋರ್ಟ್, ಆನ್ಲೈನ್ ಥೆರಪಿಯಲ್ಲಿ ಘೋಷಿಸಲಾಗುವ ಚಿಕಿತ್ಸಾ ವಿಧಾನಗಳ ಸತ್ಯಾಸತ್ಯತೆ ಕುರಿತು ಪರಿಶೀಲಿಸಲು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿರುವುದು ಸಮಂಜಸವಾಗಿಯೇ ಇದೆ. ಪ್ರಸ್ತುತವಾಗಿ ದೇಶದಲ್ಲಿ ವೈದ್ಯವೃತ್ತಿಯ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ನಿಯಂತ್ರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ವೈದ್ಯಕೀಯ ಅರ್ಹತೆಗಳಿಗೆ ಮನ್ನಣೆ, ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡುವ ಹಾಗೂ ವೈದ್ಯಕೀಯ ಚಿಕಿತ್ಸೆಗಳ ಮೇಲೆ ನಿಗಾ ಇಡುವ ಕಾರ್ಯವನ್ನು ಇದು ಮಾಡುತ್ತದೆ. ಈ ಆಯೋಗಕ್ಕೆ ಕಾನೂನಿನ ಮಾನ್ಯತೆ ಇದ್ದು, ಸಂಸತ್ತಿನಲ್ಲಿ ಅಂಗೀಕರಿಸಲಾದ ಕಾನೂನಿನ ಮೂಲಕ 2019ರ ಆಗಸ್ಟ್ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದೇ ರೀತಿಯಲ್ಲಿ ಪರಿಣತರ ಮಾರ್ಗದರ್ಶನ ಮೂಲಕ ನಕಲಿ ಚಿಕಿತ್ಸಕರ ಹಾವಳಿ ತಡೆಗಟ್ಟಲು ಸೂಕ್ತ ನಿಯಂತ್ರಣ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರೂಪಿಸಬೇಕಾಗಿದೆ.
ಇನ್ನು ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಎಷ್ಟೊಂದು ವಿಸ್ತರಿಸಿದೆ ಹಾಗೂ ವಿಶಾಲವಾಗಿ ಬೆಳೆದಿದೆಯೆಂದರೆ ಯಾವುದೇ ಒಂದು ನಿಯಂತ್ರಕ ವ್ಯವಸ್ಥೆಯ ಮೂಲಕ ಇದರ ಮೇಲೆ ಪೂರ್ಣ ಪ್ರಮಾಣದಲ್ಲಿ ನಿಗಾ ವಹಿಸುವುದು ಬಹುತೇಕ ಅಸಾಧ್ಯ ಎಂಬಂತಿದೆ. ಹೀಗಾಗಿ, ಅನ್ಲೈನ್ನಲ್ಲಿ ನಕಲಿ ಚಿಕಿತ್ಸಕರ ಬಗೆಗೆ ಪ್ರತಿಯೊಬ್ಬರು ಸ್ವಯಂ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಆನ್ಲೈನ್ನಲ್ಲಿ ಕಾಣಿಸಿಕೊಳ್ಳುವ ಚಿಕಿತ್ಸಕರ ಪೂರ್ವಾಪರಗಳನ್ನು ಪರಿಶೀಲಿಸಬೇಕು. ಆರೋಗ್ಯ ಸಂಬಂಧಿ ಸಮಸ್ಯೆ ಇದ್ದರೆ ತಜ್ಞವೈದ್ಯರನ್ನು ಹಾಗೂ ಮಾನಸಿಕ ತೊಂದರೆಗಳಿದ್ದರೆ ಮನೋವೈದ್ಯರನ್ನು ನೇರವಾಗಿ ಸಂರ್ಪಸಿ ಚಿಕಿತ್ಸೆ ಪಡೆಯುವುದು ಉತ್ತಮ ಮಾರ್ಗ. ಹೀಗಾದಾಗ, ನಕಲಿ ಆನ್ಲೈನ್ ಚಿಕಿತ್ಸಕರಿಗೆ ಕಡಿವಾಣ ಹಾಕಬಹುದು.
ಇದೇ ವೇಳೆ ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ಮಂಡಳಿಯಲ್ಲಿ ನಕಲಿ ಸರ್ಟಿಫಿಕೇಟ್ ಪಡೆದು ರಾಜ್ಯದಾದ್ಯಂತ 50 ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್ಗಳನ್ನು ಆರಂಭಿಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ನಕಲಿ ವೈದ್ಯರು ಹಾಗೂ ಅವರು ನಡೆಸುವ ಕ್ಲಿನಿಕ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.