ನ್ಯೂಸ್

ಹಳ್ಳಿಗಳನ್ನು ರಕ್ಷಿಸಿ; ಸೂಕ್ತ ಮಾಹಿತಿ ಮತ್ತು ಸಮರ್ಪಕ ಚಿಕಿತ್ಸೆ ಅಗತ್ಯ

Webdesk - Ravikanth

ನಗರಗಳಲ್ಲಿ ತೀವ್ರ ಪ್ರಮಾಣದಲ್ಲಿ ಹಬ್ಬಿರುವ ಕರೊನಾ ಸೋಂಕು ಗ್ರಾಮಗಳಿಗೂ ಪ್ರವೇಶಿಸಿದೆ. ಇಂಥದ್ದೊಂದು ಆತಂಕ ಕಳೆದ ಕೆಲವು ದಿನಗಳಿಂದ ಕಾಡುತ್ತಲೇ ಇತ್ತು. ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆ ಆದಾಗಿನಿಂದಲೂ ಮಹಾನಗರಗಳಿಂದ ಮರುವಲಸೆ ಆರಂಭವಾಯಿತು. ಸಂಪೂರ್ಣ ಲಾಕ್​ಡೌನ್ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಈ ಪ್ರಮಾಣ ಮತ್ತಷ್ಟು ಹೆಚ್ಚಿತು. ಬೆಂಗಳೂರಿನಿಂದ ಸಾವಿರಾರು ಕುಟುಂಬಗಳು ಸ್ವಗ್ರಾಮಗಳಿಗೆ ಮರಳಿದವು. ಪುಣೆ, ಮುಂಬೈ, ರತ್ನಾಗಿರಿ, ಹೈದರಾಬಾದ್ ಸೇರಿ ವಿವಿಧ ನಗರಗಳಿಗೆ ದುಡಿಯಲು ಹೋಗಿದ್ದ ಕಾರ್ವಿುಕರು ಉತ್ತರ ಕರ್ನಾಟಕ ಸೇರಿ ವಿವಿಧ ಭಾಗಗಳ ಗ್ರಾಮಗಳಿಗೆ ಮರಳಿದ್ದಾರೆ. ಒಟ್ಟಾರೆ ಹಳ್ಳಿಗಳಲ್ಲಿ ಕರೊನಾ ಕಾಟ ವ್ಯಾಪಕವಾಗತೊಡಗಿದೆ. ಮೊದಲನೇ ಅಲೆ ಕಾಣಿಸಿಕೊಂಡಾಗ ಹಳ್ಳಿಗಳು ಸುರಕ್ಷಿತವಾಗಿದ್ದವು. ಈ ಬಾರಿ ಹಾಗಿಲ್ಲ. ಹಳ್ಳಿ-ಹಳ್ಳಿಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಬಿಕ್ಕಟ್ಟನ್ನು ನಗರಗಳಲ್ಲಿ ನಿರ್ವಹಿಸುವುದ ಕ್ಕಿಂತಲೂ, ಗ್ರಾಮಗಳಲ್ಲಿ ಎದುರಿಸು ವುದು ತುಂಬ ಸವಾಲಿನದ್ದು. ಅದೆಷ್ಟೋ ಹಳ್ಳಿಗರು ಕರೊನಾ ಬಗ್ಗೆ ತಿಳಿದುಕೊಂಡಿದ್ದರೂ, ಅವರಿಗೆ ಸುರಕ್ಷತಾ ಕ್ರಮಗಳ ಬಗ್ಗೆ, ಚಿಕಿತ್ಸೆಯ ಕುರಿತಂತೆ ಸೂಕ್ತ ಮಾಹಿತಿ ಇಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ನಗರ ಕೇಂದ್ರೀಕೃತವಾಗಿದ್ದು, ಅದೆಷ್ಟೋ ಹಳ್ಳಿಗಳಲ್ಲಿ ಸ್ವಾಸ್ಥ್ಯ ರಕ್ಷಣೆಯ ಮೂಲಸೌಕರ್ಯಗಳೂ ಇಲ್ಲ. ಹೀಗಿರುವಾಗ ಸೋಂಕಿತರನ್ನು ಪತ್ತೆ ಮಾಡುವುದು, ಅವರನ್ನು ಚಿಕಿತ್ಸೆಗೆ ಒಳಪಡಿಸುವುದು, ವೈದ್ಯಕೀಯ ಆಮ್ಲಜನಕ, ಅಗತ್ಯ ಔಷಧಗಳನ್ನು ತಲುಪಿಸುವುದು ಕಷ್ಟದ ಕೆಲಸವೇ. ತಾಲೂಕು ಪ್ರದೇಶಗಳಲ್ಲೂ ಆಸ್ಪತ್ರೆಗಳಲ್ಲಿ ಹಾಸಿಗೆ, ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಡುತ್ತಿದ್ದಾರೆ. ಹೀಗಿರುವಾಗ ಗ್ರಾಮೀಣ ನಿವಾಸಿಗಳ, ಅಲ್ಲಿನ ಸೋಂಕಿತರ ಕಾಳಜಿ ವಹಿಸುವವರು ಯಾರು? ಗ್ರಾಮಗಳಲ್ಲಿ ಸೋಂಕಿನ ಸರಪಳಿ ತುಂಡರಿಸುವುದು ತುಂಬ ಅವಶ್ಯ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಕಾರ್ಯಪಡೆಗಳನ್ನು ಸನ್ನದ್ಧಗೊಳಿಸಿದೆ. ಕಳೆದ ವರ್ಷಕ್ಕಿಂತ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂಬ ಸೂಚನೆಯನ್ನೂ ರವಾನಿಸಿದೆ. ಈ ಕಾರ್ಯಪಡೆಗಳು ಜನರಿಗೆ ಸೂಕ್ತ ಮಾಹಿತಿ ನೀಡಿ ಅರಿವು ತುಂಬುವ ಜತೆಗೆ, ಭಯವನ್ನೂ ಹೋಗಲಾಡಿಸಬೇಕು. ಜನರಲ್ಲಿ ವಿಶ್ವಾಸ ತುಂಬಿ, ಆರೋಗ್ಯ ವ್ಯವಸ್ಥೆಯ ಸೌಲಭ್ಯಗಳನ್ನು ತಲುಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿ ಇರುವಂತೆ ಸೂಚಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳು, ಅವರವರ ಕ್ಷೇತ್ರಗಳಲ್ಲಿ ಇದ್ದು, ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೇಳಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಅಲ್ಲಿನ ಅಗತ್ಯಗಳು, ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಇರುವುದರಿಂದ ಶೀಘ್ರ ಸ್ಪಂದಿಸುವಿಕೆ ಸಾಧ್ಯವಾಗುತ್ತದೆ. ತಪ್ಪದೇ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವುದು, ಸಭೆ, ಸಮಾರಂಭ, ಮದುವೆ ಇನ್ನಿತರ ಚಟುವಟಿಕೆಗಳಿಂದ ಜನ ದೂರವಿರುವಂತೆ ನೋಡಿಕೊಳ್ಳುವುದು ಈ ಕಾರ್ಯಪಡೆಗಳ ಕರ್ತವ್ಯವಾಗಿದೆ. ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ. ಹಳ್ಳಿಗಳು ಆದಷ್ಟು ಬೇಗ ಕರೊನಾ ಸೋಂಕಿನಿಂದ ಮುಕ್ತವಾಗುವಂತೆ ಯೋಜನೆ ರೂಪಿಸಿ, ಕೆಲಸ ಆರಂಭಿಸಲಿ.