ನ್ಯೂಸ್

ಸಂಪಾದಕೀಯ | ಸ್ವಾಗತಾರ್ಹ ನಿಲುವು; ಕನ್ನಡದಲ್ಲೂ ಇಎಸ್​ಐ ಪರೀಕ್ಷೆ ಅವಕಾಶ

Webdesk - Ravikanth

ಕೇಂದ್ರ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಅಥವಾ ವಿವಿಧ ಇಲಾಖಾ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಬರೆಯುವ ಅವಕಾಶ ಇರಬೇಕು ಎಂಬ ಕೂಗು ಈಚಿನ ವರ್ಷಗಳಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಆಕಾಂಕ್ಷಿ ಅಭ್ಯರ್ಥಿಗಳಿಗೆ ಸಮಾನ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಇಂಥ ನೀತಿ ಅಗತ್ಯ ಎಂಬುದು ಇದರ ಹಿಂದಿರುವ ತರ್ಕ. ಅದಿಲ್ಲವಾದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಹಿಡಿತ ಇರುವವರು ಮಾತ್ರ ಹೆಚ್ಚೆಚ್ಚು ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತ ಪ್ರಾದೇಶಿಕ ಸಮಾನತೆಯೆಂಬುದು ಮರೀಚಿಕೆಯಾಗುತ್ತದೆ. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದಲ್ಲಿ ಅಲ್ಲಿ ಬೆಳವಣಿಗೆಯೆಂಬುದು ಆದಷ್ಟು ಏಕಪ್ರಕಾರವಾಗಿರಬೇಕಾಗುತ್ತದೆ. ಅಂದರೆ ಪ್ರಾದೇಶಿಕ ಸಮತೋಲನ ಇರಬೇಕಾಗುತ್ತದೆ. ಇದು ಸರ್ಕಾರಿ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಅವಕಾಶವಿದ್ದಲ್ಲಿ ಕಾಲಕಾಲಕ್ಕೆ ಸರ್ಕಾರಿ ನೀತಿನಿಯಮಗಳಲ್ಲಿ ಬದಲಾವಣೆ ಅಥವಾ ತಿದ್ದುಪಡಿ ತರಬೇಕಾಗುತ್ತದೆ.

ಕಾರ್ವಿುಕರ ರಾಜ್ಯ ವಿಮಾ ನಿಗಮದ (ಇಎಸ್​ಐಸಿ), ರಾಜ್ಯದಲ್ಲಿಯೇ ಕಾರ್ಯ ನಿರ್ವಹಿಸಬೇಕಾದ ಹಾಗೂ ಕೆಳಹಂತದ ಹುದ್ದೆಗಳಾದ ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲೂ ಎಂಟಿಎಸ್​ನಂಥ ಅಟೆಂಡರ್ ಅಥವಾ ಆಫೀಸ್ ಬಾಯ್ ಹುದ್ದೆಗೆ ಇಂಗ್ಲಿಷ್​ನಲ್ಲಿ ಪರೀಕ್ಷೆ ಬರೆಯಬೇಕೆಂಬ ನಿಯಮ ಕುರಿತಂತೆ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದು ಸಂಚಲನ ಉಂಟುಮಾಡಿ, ಕನ್ನಡಪರ ಮನಸ್ಸುಗಳು ಮತ್ತು ಸಂಸಸಂಸ್ಥೆಗಳಿಂದ ಈ ನಿಯಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಕೆಳಹಂತದ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ನಿಗಮವು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಇಎಸ್​ಐಸಿ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಂತಾಗಿದೆ. ಇದರ ಜತೆಗೆ, ಎಲ್ಲೆಡೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬರೆಯುವ ಅವಕಾಶ ಇದ್ದೇ ಇದೆ. ಕರ್ನಾಟಕ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲಿಯೂ ಇಂಥ ಅವಕಾಶ ಕಲ್ಪಿಸಲಾಗಿದೆ.

ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂನಲ್ಲಿ ಪರೀಕ್ಷೆ ಬರೆಯಬಹುದು. ದೇಶಾದ್ಯಂತ 3,865 ಹುದ್ದೆ ಭರ್ತಿಗಾಗಿ ಈ ಪರೀಕ್ಷೆ ನಡೆಯುತ್ತಿದ್ದು, ಕರ್ನಾಟಕದಲ್ಲಿ 282 ಹುದ್ದೆಗಳಿವೆ. ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ಬರೆಯುವ ಅವಕಾಶವಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದಾಗ ರಾಜ್ಯ ಸರ್ಕಾರ ತಕ್ಷಣ ಕೇಂದ್ರದ ಜತೆ ವ್ಯವಹರಿಸಿ ನಿಯಮ ತಿದ್ದುಪಡಿಗೆ ಯತ್ನಿಸಿದ್ದು ಶ್ಲಾಘನೀಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ಕೆಲವು ಸಾಮಾನ್ಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ಒಪ್ಪತಕ್ಕ ವಿಷಯ. ಆದರೆ ಕೆಲವು ನಿಯಮಗಳನ್ನು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದು ಕಷ್ಟವೇನಲ್ಲ. ಅದರಲ್ಲೂ ಈಗ ತಂತ್ರಜ್ಞಾನ ಹೆಚ್ಚು ಅಭಿವೃದ್ಧಿಯಾಗಿರುವುದರಿಂದ ಆಡಳಿತದಲ್ಲಿ ತ್ವರಿತ ಮಾರ್ಪಾಡು ತಂದುಕೊಳ್ಳಬಹುದು. ಇದರೊಟ್ಟಿಗೆ, ಕೆಲ ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆ ವಿಚಾರದಲ್ಲಿ ಸಹ ಪ್ರಾದೇಶಿಕ ಭಾಷಾ ಅವಕಾಶದ ಬಗ್ಗೆ ಬೇಡಿಕೆಯಿದ್ದು, ಸರ್ಕಾರಗಳು ಗಮನಹರಿಸಬೇಕಿದೆ.