ನ್ಯೂಸ್

ಬೇಡ ವಾಮಮಾರ್ಗ; ಸರ್ಕಾರಿ ಉದ್ಯೋಗದ ಆಮಿಷ, ವಂಚನೆ

Webdesk - Ravikanth

ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ, ಅದರಲ್ಲೂ ಆಯಕಟ್ಟಿನ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಲ್ಲಿ ಅಕ್ರಮ, ಅವ್ಯವಹಾರಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇನ್ನೊಂದೆಡೆ, ಉದ್ಯೋಗ ಕೊಡುವ ಸೋಗಿನಲ್ಲಿ ಜನರನ್ನು ವಂಚಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ಯುವತಿಯೊಬ್ಬರಿಗೆ ಕೆಎಎಸ್, ತಹಸೀಲ್ದಾರ್ ಹುದ್ದೆ ಕೊಡಿಸುವ ಆಮಿಷವೊಡ್ಡಿ 59 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಈಗಷ್ಟೇ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಇದಕ್ಕಾಗಿ ಈ ಯುವತಿ ತನ್ನ ಕುಟುಂಬಕ್ಕೆ ಸೇರಿದ 3.5 ಎಕರೆ ಜಮೀನು ಮಾರಿ ಹಣ ಸಂದಾಯ ಮಾಡಿರುವ ಸಂಗತಿಯನ್ನು ಕೂಡ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಪಿಎಸ್​ಐ ನೇಮಕಾತಿ ಪ್ರಕರಣ ರಾಜ್ಯಕ್ಕೆ ಕಪು್ಪಚುಕ್ಕೆಯಾಗಿ ಪರಿಣಮಿಸಿದೆ. ಈ ಅಕ್ರಮ ಪ್ರಕರಣ ಸಂಬಂಧ, ಸಿಐಡಿ ತನಿಖೆ ನಡೆಯುತ್ತಿದ್ದು, ಅನೇಕರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಹಲವರು ಸರ್ಕಾರಿ ನೌಕರರು; ಬಂಧನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವುದು ನಿಶ್ಚಿತವಾಗಿದೆ. ಬಂಧಿತರಲ್ಲಿ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ಅಮೃತ್ ಪೌಲ್, ಡಿವೈಎಸ್​ಪಿ ಶಾಂತಕುಮಾರ ಸಹ ಸೇರಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ಯೊಂದರ ವಿಚಾರಣೆ ನಡೆಸುವಾಗ ಹೈಕೋರ್ಟ್, ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದು ಕೊಲೆಗಿಂತ ಗಂಭೀರ ಅಪರಾಧ. ಕೊಲೆಯಾದರೆ ಒಬ್ಬ ಸಾವನ್ನಪು್ಪತ್ತಾನೆ. ಇಲ್ಲಿ 50 ಸಾವಿರ ಅಭ್ಯರ್ಥಿಗಳು ತೊಂದರೆಗೀಡಾಗಿದ್ದಾರೆ’ ಎಂದು ಹೇಳಿರುವುದು ಈ ಅವ್ಯವಹಾರದ ಆಳ-ಅಗಲವನ್ನು ಸೂಚಿಸುತ್ತದೆ.

ಇಂತಹ ಪ್ರಕರಣಗಳಲ್ಲಿ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಸ್ವತಃ ವಾಮ ಮಾರ್ಗ ತುಳಿದಿರುವುದು. ದುಡ್ಡು ಕೊಟ್ಟು ಅಕ್ರಮ ಹಾದಿಯ ಮೂಲಕ ನೌಕರಿಯನ್ನು ಗಿಟ್ಟಿಸಿಕೊಂಡರೆ, ಇವರು ಮುಂದೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬಲ್ಲರೆ ಎಂದು ಜನರಲ್ಲಿ ಸಂದೇಹ ಮೂಡುವುದು ಸಹಜ. ಅಲ್ಲದೆ, ಇವರು ಅಡ್ಡದಾರಿಯಲ್ಲಿ ಯಶಸ್ವಿಯಾದರೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ. ಒಂದು ವೇಳೆ ಹಣ ಕೊಟ್ಟು ನೌಕರಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ ಹಾಗೂ ಹಣವೂ ಮರಳಿ ಬಾರದಿದ್ದರೆ ಅವರು ವಂಚನೆ ಪ್ರಕರಣ ದಾಖಲಿಸಲು ಮುಂದಾಗುತ್ತಾರೆ. ಹೀಗೆ ಅಕ್ರಮ ಹಾದಿ ತುಳಿಯಲು ಹೋಗಿ ಮುಂದೆ ಕಾನೂನು ಕೋಟಲೆಯಲ್ಲಿ ಸಿಕ್ಕಿಕೊಂಡ ಅನೇಕ ನಿದರ್ಶನಗಳಿವೆ. ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಮೋಸಮಾಡುವ ಪ್ರಕರಣಗಳೂ ವರದಿಯಾಗುತ್ತಿರುತ್ತವೆ.

ಕರ್ನಾಟಕ ಲೋಕಸೇವಾ ಆಯೋಗವು 1998ರಲ್ಲಿ ಪ್ರೊಬೇಷನರಿ ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳಿಗೆ ನಡೆಸಿದ ನೇಮಕಾತಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಲೇ ಇದೆ. 2021ರ ಜ. 30ರಂದು ನೇಮಕಾತಿಯ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ, ಈಗ ಈ ಪಟ್ಟಿಯನ್ನೂ ಪ್ರಶ್ನಿಸಿರುವುದರಿಂದ ಪಟ್ಟಿಯನ್ನು ಯಥಾಸ್ಥಿತಿ ಮುಂದುವರಿಕೆಗೆ ನ್ಯಾಯಾಲಯ ಸೂಚಿಸಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಇಂಥ ಸಂಗತಿಗಳತ್ತ ಗಮನಹರಿಸಿ ಎಚ್ಚೆತ್ತುಕೊಳ್ಳುವುದು ಒಳಿತು.

ಸರ್ಕಾರಿ ಕೆಲಸ ಎಂದರೆ ಅಧಿಕಾರದ ಮೆರೆಯುವಿಕೆ ಅಥವಾ ಹಣಮಾಡುವ ವೇದಿಕೆ ಅಲ್ಲ, ಬದಲಿಗೆ ಸಾರ್ವಜನಿಕ ಸೇವೆಯ ಒಂದು ಅಮೂಲ್ಯ ಅವಕಾಶ ಎಂಬ ಚಿತ್ತಸ್ಥಿತಿ ರೂಪುಗೊಂಡಲ್ಲಿ, ಉದ್ಯೋಗದ ಹೆಸರಲ್ಲಿ ಅಕ್ರಮ ಎಸಗುವವರಿಗೆ ಅವಕಾಶ ಇಲ್ಲದಂತಾಗುತ್ತದೆ.