ನ್ಯೂಸ್

ಸಂಪಾದಕೀಯ | ಸಡಗರದ ಜತೆಗೆ ಸಂಯಮ; ಹಬ್ಬ ನವೋಲ್ಲಾಸ ಮೂಡಿಸಲಿ..

Webdesk - Ravikanth

ಭಾರತೀಯ ಸಂಸ್ಕೃತಿಯಲ್ಲಿ ಪರ್ವಗಳಿಗೆ ವಿಶೇಷ ಸ್ಥಾನ. ದೈನಂದಿನ ಬದುಕಿನ ಜಂಜಾಟಗಳನ್ನು ಮರೆತು, ಬದುಕನ್ನು ಹೊಸ ಆಶಾವಾದದಿಂದ ನೋಡಲು, ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಇವು ಪ್ರೇರಣೆ ಒದಗಿಸುತ್ತವೆ. ಅದರಲ್ಲೂ, ಗಣೇಶ ಉತ್ಸವ ಎಂದರೆ ಸಂಭ್ರಮ ಒಂದಿಷ್ಟು ಹೆಚ್ಚೇ. ಈ ಉತ್ಸವ ಸೀಮಿತ ಆಚರಣೆಗೆ ಅಂಟಿಕೊಂಡಿಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಐಕ್ಯತೆಯನ್ನು ಮೂಡಿಸುತ್ತದೆ. ಸವಾಲುಗಳನ್ನು ಪರಿಹರಿಸುವ ಸ್ಥೈರ್ಯ ನೀಡುವ ಜತೆಗೆ ಜ್ಞಾನದೆಡೆಗೆ, ಸತ್ಯದೆಡೆಗೆ ಸಾಗುವ ಸಂದೇಶವನ್ನೂ ಗಣೇಶ ನೀಡುತ್ತಾನೆ. ಹಾಗಾಗಿಯೇ, ಅವನನ್ನು ಅತ್ಯಂತ ಭಕ್ತಿ, ಸಡಗರದಿಂದ ಮಾತ್ರವಲ್ಲದೆ ಭಾವಪೂರ್ಣವಾಗಿ ಪೂಜಿಸುವ ಪದ್ಧತಿ ವಿಶಿಷ್ಟವಾಗಿ ಬೆಳೆದುಕೊಂಡು ಬಂದಿದೆ. ಅನೇಕ ವರ್ಷಗಳಿಂದ ವೈಯಕ್ತಿಕವಾಗಿ ಮನೆಮನೆಗಳಲ್ಲಿ ಆಚರಣೆಯಲ್ಲಿರುವ ಗಣೇಶ ಚತುರ್ಥಿ ಈಗ ಸಾಮಾಜಿಕ ಉತ್ಸವವೂ ಆಗಿದೆ. ವಸಾಹತುಶಾಹಿ ಆಡಳಿತದಲ್ಲಿ ಸ್ವಾತಂತ್ರ್ಯದ ಆಸೆಯೇ ಇಲ್ಲದೆ ಹೋಗಿ, ಸಮಾಜದಲ್ಲಿ ಖಿನ್ನತೆ, ಹತಾಶೆ ನೆಲೆಸಿತ್ತು. ಆಗ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಯನ್ನು ಸಾಮಾಜಿಕ ಉತ್ಸವವಾಗಿಸಿದರು. ಈ ಮೂಲಕ ಹರುಷದ ಅಲೆ ಎಬ್ಬಿಸಿ, ಬಾಂಧವ್ಯ ಬೆಸೆದರು. ಆ ಆಶಯವನ್ನೇ ಇರಿಸಿಕೊಂಡು ಇಂದಿಗೂ ಗಣೇಶ ಚತುರ್ಥಿಯನ್ನು ಸಮಾಜಮುಖಿಯಾಗಿ ಆಚರಿಸುತ್ತಿರುವುದು ವಿಶೇಷ. ಆದರೆ, ಕಳೆದ ಒಂದೂವರೆ ವರ್ಷಗಳಲ್ಲಿ ಕರೊನಾ ಸೋಂಕಿನ ಹಾವಳಿ ಎಲ್ಲ ಹಬ್ಬಗಳ ಸಂಭ್ರಮವನ್ನು ನುಂಗಿ ಹಾಕಿದೆ.

ಈ ಬಾರಿಯೂ ಕರೊನಾ ಕರಿನೆರಳಲ್ಲೇ ಹಬ್ಬ ಆಚರಿಸುವ ಸ್ಥಿತಿ ಇದ್ದರೂ, ರಾಜ್ಯ ಸರ್ಕಾರ ಕೆಲ ಷರತ್ತುಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ವಾರ್ಡಿಗೊಂದೇ ಗಣೇಶ ಎಂಬ ನಿರ್ಬಂಧವನ್ನು ಹಿಂದೆ ಪಡೆದಿದೆ. ಸೀಮಿತ ಆಚರಣೆಯಲ್ಲೂ ಕಠಿಣ ನಿರ್ಬಂಧ ಹೇರಿದ್ದನ್ನು ಹಲವು ಗಣೇಶ ಮಂಡಳಿಗಳು, ಹಿಂದೂಪರ ಸಂಘಟನೆಗಳು ವಿರೋಧಿಸಿದ್ದವು. ಹಾಗಾಗಿ, ಸರ್ಕಾರ ತನ್ನ ನಿರ್ಧಾರವನ್ನು ಕೊನೆಕ್ಷಣದಲ್ಲಿ ಬದಲಾಯಿಸಿದೆ. ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಅಡ್ಡಿಯಿಲ್ಲ. ಹಾಗಂತ ಎದುರಿಗಿರುವ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಕೇರಳದಲ್ಲಿ ಸೋಂಕು ಪ್ರಕರಣಗಳು ನಿರಂತರವಾಗಿ ಏರುಮುಖ ಕಾಣುತ್ತಿದ್ದು, ಕರೊನಾ ಮೂರನೇ ಅಲೆ ಹರಡುತ್ತಿರುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಡೆಲ್ಟಾ ರೂಪಾಂತರದ ಎರಡು ಉಪ ವಂಶಾವಳಿಯೂ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಕೊಂಚ ಆತಂಕ ಮೂಡಿಸಿದೆ.

ಮೊದಲ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಜನರು ಸುರಕ್ಷತಾ ಕ್ರಮ ಅನುಸರಿಸದೆ ನಿರ್ಲಕ್ಷ್ಯ ವಹಿಸಿದರು. ಪರಿಣಾಮ, ಎರಡನೇ ಅಲೆಯಲ್ಲಿ ಜೀವಹಾನಿಯ ಪ್ರಮಾಣವೂ ಹೆಚ್ಚಾಯಿತು. ಚಿಕಿತ್ಸೆಗೆ ಪರದಾಡುವಂತಾಯಿತು. ಈಗ ಮೂರನೇ ಅಲೆಯ ಆತಂಕ ಕಾಡುತ್ತಿದೆ. ಜೀವ ಉಳಿಯಬೇಕು ಮತ್ತು ಜೀವನವೂ ಸಾಗಬೇಕು, ಈ ಎರಡೂ ಸಂಗತಿಗಳ ಸಮತೋಲನ ಈಗಿನ ಅನಿವಾರ್ಯ. ಹಬ್ಬ ಆಚರಿಸೋಣ, ಅದರಿಂದ ನವೋಲ್ಲಾಸವನ್ನು ಪಡೆಯೋಣ. ಆದರೆ, ಜನಜಂಗುಳಿ ಏರ್ಪಡಿಸಿ ಅಥವಾ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿ ಕರೊನಾದ ಮೂರನೇ ಅಲೆಗೆ ಆಹ್ವಾನ ನೀಡುವುದು ಬೇಡ. ಇಲ್ಲಿ ಸರ್ಕಾರ ಮತ್ತು ಜನಸಾಮಾನ್ಯರು ಅವರವರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.