ನ್ಯೂಸ್

ಸಂಪಾದಕೀಯ | ಆಡಳಿತಕ್ಕೆ ಚುರುಕು; ಜಿಲ್ಲೆಯ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು..

Webdesk - Ravikanth

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ವರ್ಷವಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಸರ್ಕಾರದ ಇಮೇಜನ್ನು ವರ್ಧಿಸುವ ಅನಿವಾರ್ಯತೆಯಲ್ಲಿ ಆಡಳಿತಾರೂಢ ಬಿಜೆಪಿ ಸಿಲುಕಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸರ್ಕಾರಿ ಕಾಮಗಾರಿಗಳಲ್ಲಿ ಪರ್ಸೆಂಟೇಟ್ ಆರೋಪ, ನೇಮಕಾತಿಗಳಲ್ಲಿ ಅಕ್ರಮದ ಆರೋಪ... ಹೀಗೆ ಸಾಲು ಸಾಲು ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಮುಜುಗರ ತರುವಂತಿವೆ. ಇವೆಲ್ಲ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಕೇಳಿಬರುವ ಆರೋಪಗಳಾದರೂ, ವಿಪಕ್ಷಗಳು ಇಂಥ ಸನ್ನಿವೇಶವನ್ನು ಬಿಟ್ಟಾವೆಯೇ? ಸಹಜವಾಗಿಯೇ ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿವೆ. ಹೀಗಾಗಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವರ್ಧನೆ ಬಗ್ಗೆ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ, ಆಡಳಿತಕ್ಕೆ ಚುರುಕು ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ; ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.

ಭಾನುವಾರ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, ಜನಪರ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಅಲ್ಲದೆ, ಡಿಸಿಗಳು ವಾರಕ್ಕೊಮ್ಮೆ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯ ಮತ್ತಿತರ ಕೆಲಸದ ಪರಿಶೀಲನೆ ನಡೆಸುವಂತೆಯೂ ನಿರ್ದೇಶಿಸಿದರು. ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿದ ಬೊಮ್ಮಾಯಿ, ‘ಜಿಲ್ಲಾ ಪಂಚಾಯತ್ ಸ್ವತಂತ್ರ ಸರ್ಕಾರವಿದ್ದಂತೆ. ಬಡವರ ಪರವಾಗಿ ಕೆಲಸ ಮಾಡಲು ಧೈರ್ಯದಿಂದ ನಿರ್ಣಾಯಕ ಕ್ರಮಕೈಗೊಳ್ಳಲು ಹಿಂಜರಿಯಬಾರದು’ ಕಿವಿಮಾತು ಹೇಳಿದರು. ಜಿಪಂ ಸಿಇಒಗಳು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲಿಸುವುದು ಕಡ್ಡಾಯ ಎಂದು ಸೂಚಿಸಿದರು. ಬಜೆಟ್​ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಕೂಡ ಅವರು ಸ್ಪಷ್ಟವಾಗಿ ತಿಳಿಸಿದರು.

ಆಡಳಿತದಲ್ಲಿರುವವರು ರೂಪಿಸುವ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವ ಜವಾಬ್ದಾರಿ ವಿವಿಧ ಹಂತದ ಅಧಿಕಾರಿಗಳದ್ದೇ ಆಗಿರುತ್ತದೆ. ಅವರ ಕಾರ್ಯದಲ್ಲಿ ನಿರ್ಲಕ್ಷ್ಯ ಅಥವಾ ಆಲಸ್ಯತನ ವ್ಯಕ್ತವಾದರೆ ಯೋಜನೆಯ ಉದ್ದೇಶ ಸರಿಯಾಗಿ ಈಡೇರುವುದಿಲ್ಲ. ಅಲ್ಲದೆ, ಆಯಾ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಹಂತದ ಅಧಿಕಾರಿಗಳನ್ನು ಎಚ್ಚರಿಸುವ ಮತ್ತು ಅವರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕಾಲಕಾಲಕ್ಕೆ ಮುಖ್ಯಮಂತ್ರಿಗಳು ನಡೆಸುವ ಸಭೆಗಳಿಗೆ ಮಹತ್ವವಿರುತ್ತದೆ. ಆದರೆ ಇಂಥ ಸಭೆಗಳಲ್ಲಿ ನೀಡಲಾಗುವ ಸಲಹೆ-ಕಿವಿಮಾತು-ನಿರ್ದೇಶನಗಳು ಮಾತಿಗೆ ಸೀಮಿತವಾಗದೆ ಕೃತಿಯಲ್ಲಿ ಬರಬೇಕಾದುದು ಮುಖ್ಯ. ಮುಖ್ಯಮಂತ್ರಿಗಳು ನಡೆಸುವ ಜನತಾ ದರ್ಶನಗಳಲ್ಲಿ ವೃದ್ಧಾಪ್ಯ ವೇತನ, ಪಿಂಚಣಿಯಂತಹ ಸ್ಥಳೀಯ ಮಟ್ಟದಲ್ಲಿಯೇ ನಿರ್ವಹಿಸಬಹದಾದ ವಿಷಯಗಳು ಕೂಡ ಮತ್ತೆ ಮತ್ತೆ ಬರುತ್ತಿರುತ್ತವೆ. ಮುಖ್ಯಮಂತ್ರಿಯಾದವರು ಇಂಥ ಚಿಕ್ಕಪುಟ್ಟ ವಿಷಯಗಳಿಗೂ ಗಮನನೀಡಬೇಕು ಎಂದರೆ ಹೇಗೆ ಸಾಧ್ಯ? ಅದು ಉತ್ತಮ ಆಡಳಿತದ ಲಕ್ಷಣವೂ ಅಲ್ಲ. ಇಂಥದು ತಪ್ಪಬೇಕು ಎಂದಾದಲ್ಲಿ ಸ್ಥಳಿಯ ಹಂತದಲ್ಲಿ ಆಡಳಿತ ಸರಿಯಾಗಿರಬೇಕು; ಜನಪರವಾಗಿರಬೇಕು. ಆಡಳಿತದ ವಿಕೇಂದ್ರೀಕರಣವಾಗಬೇಕು ಎಂಬ ಉದ್ದೇಶದಿಂದಲೇ ಪಂಚಾಯಿತಿ ವ್ಯವಸ್ಥೆಯನ್ನು ತರಲಾಗಿದೆ. ಇವನ್ನು ‘ಸ್ಥಳೀಯ ಸರ್ಕಾರ’ ಎಂದೇ ಕರೆಯಲಾಗುತ್ತದೆ. ಇದು ಕೇವಲ ಕಾಗದದ ಹೆಗ್ಗಳಿಕೆಗೆ ಸೀಮಿತವಾಗದೆ, ಜನರಿಗೆ ಅಲ್ಲಲ್ಲಿಯೇ ಸರ್ಕಾರಿ ಸೇವೆ ಮತ್ತು ಸವಲತ್ತುಗಳು ಸಿಗುವಂತಾಗಬೇಕು; ಸಣ್ಣಸಣ್ಣ ಕೆಲಸಕ್ಕೂ ಪರದಾಡುವ ಪ್ರಮೇಯ ತಪ್ಪಬೇಕು.