ನ್ಯೂಸ್

ಆತಂಕದ ಸಂಗತಿ: ಶಿಕ್ಷಕರ ಹುದ್ದೆ ಭರ್ತಿ ಆದ್ಯತೆಯಾಗಬೇಕು

Webdesk - Ravikanth

ಯಾವುದೇ ಸರ್ಕಾರದ ಆರಂಭದ ದಿನಗಳಲ್ಲಿ ವರ್ಗಾವಣೆಯೇ ಆದ್ಯತೆಯಾಗುತ್ತಿರುವುದು ಸರ್ವವೇದ್ಯ. ಬಹುತೇಕ ಶಾಸಕರು ಮುಖ್ಯಮಂತ್ರಿಗಳ ಬಳಿ ಇಡುವ ಮೊದಲ ಬೇಡಿಕೆಯೇ ವರ್ಗಾವಣೆ. ಕಳೆದ ಕೆಲವು ದಿನಗಳಿಂದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಶಂಕಾಸ್ಪದವಾಗಿವೆ. ಈ ಹಂತದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯೂ ಸದ್ದು ಮಾಡಿದೆ. ಸರ್ಕಾರದ ಮಾಹಿತಿಯ ಪ್ರಕಾರವೇ ವರ್ಗಾವಣೆ ಕಾರಣದಿಂದ ನೂರಾರು ಶಾಲೆಗಳನ್ನು ಅತಿಥಿ ಶಿಕ್ಷಕರಿಂದ ನಡೆಸಬೇಕಾದ ದುಸ್ಥಿತಿ ನಿರ್ವಣವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅಂತರ ಜಿಲ್ಲಾ ವರ್ಗಾವಣೆ ಅವಕಾಶದಲ್ಲಿ ಶಿಕ್ಷಕರು ಸ್ವಂತ ಜಿಲ್ಲೆ, ಸ್ವಂತ ತಾಲೂಕುಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಶಿಕ್ಷಕರ ಬೇಡಿಕೆ ತಪು್ಪ ಎನ್ನಲಾಗದು. ಆದರೆ ಸರ್ಕಾರ ಶಿಕ್ಷಕರ ವರ್ಗಾವಣೆಯಿಂದ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗದಂತೆ ಎಚ್ಚರ ವಹಿಸುವುದು ಅವಶ್ಯಕ. ರಾಜ್ಯದ ಅಭಿವೃದ್ಧಿಯನ್ನು ಅಳೆಯಬಹುದಾದ ಮಾನದಂಡಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಯೂ ಒಂದು ಎಂಬುದನ್ನು ಅಲ್ಲಗಳೆಯಲಾಗದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಶಾಲೆಗಳ ಸ್ಥಿತಿ-ಗತಿ ಅವಲೋಕನ ಮಾಡಿದರೆ ನಿರಾಶೆಯಾಗುವುದು ಸಹಜ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಒಟ್ಟು 60,988 ಮಂಜೂರಾದ ಹುದ್ದೆಗಳಿದ್ದು,18,187 ಹುದ್ದೆಗಳು ಖಾಲಿ ಇವೆ. ಕರ್ನಾಟಕದ ದೇವದುರ್ಗ ಶೈಕ್ಷಣಿಕವಾಗಿ ಏಷ್ಯಾ ಖಂಡದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಪ್ರತಿಶತ 30ಕ್ಕೂ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಪ್ರತಿಶತ 25ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಿನ್ನಡೆ ಕಂಡಿದೆ. ಪರಿಸ್ಥಿತಿ ಇನ್ನಷ್ಟು ಕರಾಳವಾಗುವ ಮುನ್ಸೂಚನೆ ಈ ವರ್ಗಾವಣೆ ಜಾತ್ರೆಯಿಂದ ಸ್ಪಷ್ಟವಾಗುತ್ತಿದೆ. ಹಾಗೆಂದು ವರ್ಗಾವಣೆ ಸರಿಯಲ್ಲ ಎಂದಲ್ಲ, ಆ ಭಾಗಕ್ಕೆ ಸೂಕ್ತ ಸರಿಯಾದ ವ್ಯವಸ್ಥೆ ಮಾಡಿ ನಂತರ ಈ ಪ್ರಕ್ರಿಯೆ ಆರಂಭಿಸಿದ್ದರೆ ಸೂಕ್ತವಾಗುತ್ತಿತ್ತು.

ಕಲಬುರಗಿ ಜಿಲ್ಲೆಯೊಂದರಲ್ಲೇ ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟು 5,56,685 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 80ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಈಗ ಇರುವ ಅಧಿಕೃತಿ ಮಾಹಿತಿ ಪ್ರಕಾರ 800 ಶಿಕ್ಷಕರು ಜಿಲ್ಲೆಯಿಂದ ವರ್ಗವಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ 53 ಏಕೋಪಾಧ್ಯಾಯ ಶಾಲೆಗಳಿವೆ. ಸುರಪುರ ತಾಲೂಕು ಒಂದರಲ್ಲೇ 39 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ ್ಲ ಕಾಯಂ ಶಿಕ್ಷಕರಿಲ್ಲದ ಶಾಲೆಗಳ ಪಟ್ಟಿ ದೊಡ್ಡದೇ ಇರುವುದು ಶಿಕ್ಷಣ ಇಲಾಖೆಯಿಂದಲೆ ಲಭ್ಯವಾಗಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಡ ಕುಟುಂಬಗಳ ಸಂಖ್ಯೆಯೇ ಅಧಿಕವಾಗಿದ್ದು, ಈ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಯನ್ನೇ ಅವಲಂಬಿಸಿವೆ. ಒಂದು ಕಡೆ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಮತ್ತೊಂದು ಕಡೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. 1,200ಕ್ಕೂ ಅಧಿಕ ಪ್ರಾಥಮಿಕ ಶಾಲಾ ಕಟ್ಟಡಗಳ ದುರಸ್ತಿಯಾಗಬೇಕಿದೆ. ಅವುಗಳಲ್ಲಿ 450ಕ್ಕೂ ಅಧಿಕ ಕೊಠಡಿಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಸರ್ಕಾರಿ ಪ್ರೌಢಶಾಲೆಗಳಲ್ಲಿ 200 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶಿಕ್ಷಕರ ಕೊರತೆ ಮತ್ತು ಶಾಲಾ ಕೊಠಡಿಗಳ ದುಸ್ಥಿತಿಯ ಅಂಕಿ ಅಂಶಗಳನ್ನು ಗಮನಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಯನ್ನು ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗಲಿದೆ. ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದಲಾದರೂ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿಕೊಳ್ಳಬೇಕಾದರೆ ಈ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಇದು ಸರ್ಕಾರದ ಮೊದಲ ಆದ್ಯತೆಯಾಗಬೇಕು.