ನ್ಯೂಸ್

ಪರ್ಯಾಯ ವಿಧಾನಗಳು ಅಗತ್ಯ; ವಿದ್ಯುತ್ ಸೋರಿಕೆಯನ್ನೂ ತಡೆಗಟ್ಟಬೇಕು

Webdesk - Ravikanth

ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಜನರನ್ನು ಹೈರಾಣಾಗಿಸಿದೆ. ಇಂಧನ ಬೆಲೆ ಹೆಚ್ಚುತ್ತಲೇ ಇದೆ. ಇದನ್ನೆಲ್ಲ ಹೇಗೆ ನಿಭಾಯಿಸುವುದು ಎಂಬ ಚಿಂತೆ ಶ್ರೀಸಾಮಾನ್ಯರಿಗೆ ಕಾಡುತ್ತಿರುವಾಗಲೇ, ರಾಜ್ಯಕ್ಕೆ ವಿದ್ಯುತ್ ಕೊರತೆಯ ಆತಂಕವೂ ಎದುರಾಗಿದೆ. ಧಾರಾಕಾರ ಮಳೆಯಿಂದಾಗಿ ಕಲ್ಲಿದ್ದಲು ಪೂರೈಕೆ ಏರುಪೇರಾಗಿರುವುದು ಮತ್ತು ಶಾಖೋತ್ಪನ್ನ ನೆಲೆಯ ವಿದ್ಯುತ್ ಉತ್ಪಾದನೆ ಕುಸಿದಿರುವ ಕಾರಣದಿಂದಾಗಿ ವಿದ್ಯುತ್ ಕೊರತೆ ಎದುರಾಗಿದೆ. ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಪೂರೈಕೆಗೆ ಸಮಸ್ಯೆಯಾಗುತ್ತದೆ. ತೋಯ್ದ ಕಲ್ಲಿದ್ದಲು ಬಳಕೆ ಅಸಾಧ್ಯ ಎಂಬುದು ಹೊಸದೇನಲ್ಲ. ಇದನ್ನರಿತು ಈ ಹಿಂದೆ ಶಾಖೋತ್ಪನ್ನ ಸ್ಥಾವರಗಳಲ್ಲಿ 10ರಿಂದ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇರುತ್ತಿತ್ತು. ಈ ಬಾರಿ ಇದರತ್ತ ಗಮನ ನೀಡಲಾಗಿಲ್ಲ. ಅಲ್ಲದೆ, ಶಾಖೋತ್ಪನ್ನ ಸ್ಥಾವರಗಳು ಸರ್ಕಾರದ ಅನಾದರಕ್ಕೆ ಗುರಿಯಾಗಿವೆ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಪ್ರಮಾಣ ಹೆಚ್ಚಬೇಕಿದೆ. ಕಲ್ಲಿದ್ದಲಿನ ಮೇಲೆ ಅತಿಯಾದ ಅವಲಂಬನೆ ಬೇಡ, ಇದು ಪರಿಸರಕ್ಕೂ ಪೂರಕವಲ್ಲ ಎಂದು ಈ ಹಿಂದೆಯೇ ಹಲವು ಬಾರಿ ವಿಷಯ ತಜ್ಞರು ಎಚ್ಚರಿಸಿ, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಹೆಚ್ಚಬೇಕು ಎಂದಿದ್ದರು.

ಪ್ರಸಕ್ತ ಅವಧಿಯಲ್ಲಿ ಕರ್ನಾಟಕದಲ್ಲಿ ದಿನದ ವಿದ್ಯುತ್ ಬೇಡಿಕೆ 7,500 ಮೆಗಾವಾಟ್ ಹಾಗೂ ಬಳಕೆ ಪ್ರಮಾಣ 181 ದಶಲಕ್ಷ ಯೂನಿಟ್​ನ ಆಸುಪಾಸಿನಲ್ಲಿದೆ. ಆದರೆ ಒತ್ತಡದ ಅವಧಿ (ಪೀಕ್ ಅವರ್)ಯಲ್ಲಿ ಬೇಡಿಕೆ 8,000 ಮೆಗಾವಾಟ್ ದಾಟುವ ಸಾಧ್ಯತೆಗಳುಂಟು. ಇದಕ್ಕೂ ಮೀರಿ ಬೇಡಿಕೆ ಹೆಚ್ಚಾದರೆ ಕೊರತೆ ಸರಿದೂಗಿಸಿಕೊಳ್ಳಲು ಅಘೋಷಿತ ಲೋಡ್​ಶೆಡ್ಡಿಂಗ್ ಅನಿವಾರ್ಯವಾಗಲಿದೆ. ಅಂಥ ಸ್ಥಿತಿ ಸೃಷ್ಟಿಯಾದರೆ ಜನಸಾಮಾನ್ಯರು ಮತ್ತು ಉದ್ಯಮಗಳು ಹೊಸದೊಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಧನ ಇಲಾಖೆಯ ಸುಧಾರಣೆ ನಿಟ್ಟಿನಲ್ಲಿ ಹಲವು ಅಪಸವ್ಯಗಳು ಅಡ್ಡಿಯಾಗಿವೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ವಿದ್ಯುತ್ ಸೋರಿಕೆಯ ಸಮಸ್ಯೆ ಹಳೆಯದಾಗಿದ್ದರೂ, ಸೋರಿಕೆ ಪ್ರಮಾಣ ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಿಲ್ಲ. ಇದರಿಂದ ವಿತರಣೆ ವ್ಯವಸ್ಥೆಯ ವೇಳೆಯೇ ಅಪಾರ ಪ್ರಮಾಣದ ವಿದ್ಯುತ್ ಪೋಲಾಗುತ್ತಿದೆ. ಭೌಗೋಳಿಕ ವಾತಾವರಣ, ಸೌಲಭ್ಯಗಳು ಹಾಗೂ ಇನ್ನಿತರ ಅನುಕೂಲಕರ ಅಂಶಗಳಿಂದ ರಾಜ್ಯದಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶಗಳಿವೆ. ಈ ವಿಷಯದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ಹೌದಾದರೂ, ಅವುಗಳಿಗೆ ಸಾಕಷ್ಟು ವೇಗ ನೀಡಬೇಕಿದೆ. ದಿನಗಳೆದಂತೆ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತ ಹೋಗಲಿದೆ. ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚಬೇಕು. ಆದರೆ, ಅದಕ್ಕಾಗಿ ಕಲ್ಲಿದ್ದಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಮೇಲಷ್ಟೇ ಅವಲಂಬಿತವಾಗಲು ಸಾಧ್ಯವಿಲ್ಲ. ವಿದ್ಯುತ್ ಸೋರಿಕೆ ತಡೆಗಟ್ಟುವುದಲ್ಲದೆ, ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಬೇಕು. ಈ ವಿಷಯದಲ್ಲಿ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಸುಧಾರಣೆ ನಿಟ್ಟಿನಲ್ಲಿ ದೂರದೃಷ್ಟಿಯ ಸಮಗ್ರ ಯೋಜನೆ ರೂಪಿಸಿಕೊಂಡು, ಅದು ಅನುಷ್ಠಾನಕ್ಕೆ ತರುವಂತಾದರೆ ಇಂಥ ಸಮಸ್ಯೆಗಳಿಗೆ ಕೊನೆ ಹಾಡಬಹುದು.

ಸರ್ಕಾರದ ಪ್ರಯತ್ನದ ಜತೆಗೆ ಜನಸಾಮಾನ್ಯರೂ ಎಚ್ಚೆತ್ತುಕೊಳ್ಳಬೇಕು. ವಿದ್ಯುತ್​ನ ಮಿತಬಳಕೆಯನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳಬೇಕು. ಅನಗತ್ಯ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಅಲ್ಲದೆ, ಪರಿಸರಕ್ಕೆ ಪೂರಕ ಇಂಧನ ಮೂಲಗಳತ್ತ ಹೊರಳಿದರೆ ಸಮಸ್ಯೆಯ ತೀವ್ರತೆಯನ್ನು ಸಾಕಷ್ಟು ತಗ್ಗಿಸಬಹುದು. ಒಟ್ಟಾರೆ, ಮತ್ತೆ ಲೋಡ್​ಶೆಡ್ಡಿಂಗ್ ಜಾರಿಯಾಗದಂತೆ ನಿಗಾ ವಹಿಸಿ ಸರ್ಕಾರ ಮುಂದಿನ ಹೆಜ್ಜೆ ಇರಿಸಬೇಕು.