ನ್ಯೂಸ್

ಉತ್ತಮ ನಿರ್ಧಾರ; ಮರಳು ಸಮಸ್ಯೆ ಇನ್ನಾದರೂ ಕೊನೆಯಾಗಲಿ..

rashmirhebbur

ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಮರಳಿನ ಸಮಸ್ಯೆ ಮೀತಿ ಮೀರಿ, ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವುದು ಮತ್ತು ಹಲವು ಕ್ಷೇತ್ರಗಳು ಕೂಡ ತೊಂದರೆ ಅನುಭವಿಸುತ್ತಿರುವುದು ಗೊತ್ತಿರುವಂಥದ್ದೇ. ಮರಳಿನ ಬೆಲೆ ಹೆಚ್ಚುತ್ತಲೇ ಹೋಗುತ್ತಿದ್ದು, ನಿರ್ಮಾಣ ಕ್ಷೇತ್ರದಲ್ಲಂತೂ ಭಾರಿ ಕಳವಳ ಸೃಷ್ಟಿಯಾಗಿದೆ. ಇಂಥ ಪರಿಸ್ಥಿತಿಯ ದುರ್ಲಾಭ ಪಡೆಯುವ ಜನರ ಸಂಖ್ಯೆ ಕಡಿಮೆಯೇನಲ್ಲ. ಎಷ್ಟೋ ಕಡೆ ಕೃತಕ ಅಭಾವ ಸೃಷ್ಟಿ ಮಾಡಿ, ಬೆಲೆ ಮತ್ತಷ್ಟು ಹೆಚ್ಚುವಂತೆ ಮಾಡಿದ ನಿದರ್ಶನಗಳೂ ಅಲ್ಲಲ್ಲಿ ಕಂಡುಬಂದವು. ಈ ಎಲ್ಲ ಸಮಸ್ಯೆಗಳನ್ನು ಕೊನೆಗಾಣಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿರುವುದು ಸಮಾಧಾನಕರ ಸಂಗತಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ‘ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2021’ಕ್ಕೆ ಅನುಮೋದನೆ ನೀಡಿ, ಹೊಸ ಮರಳು ನೀತಿ ಜಾರಿಗೆ ಅಸ್ತು ಎಂದಿದೆ. ಹೊಸ ಮರಳು ನೀತಿ ಅನೇಕ ಸುಧಾರಣೆಯ ಅಂಶಗಳನ್ನು ಒಳಗೊಂಡಿದ್ದು, ಇದರ ಸಮರ್ಪಕ ಜಾರಿಯ ಹೊಣೆಯೂ ಸರ್ಕಾರದ ಮೇಲಿದೆ.

ಮುಖ್ಯವಾಗಿ, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗಲಿದ್ದು, ಆನ್​ಲೈನ್ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿದೆ. ಅಂದರೆ, ಖರೀದಿಗೆ ಹೊಸ ಮತ್ತು ಪಾರದರ್ಶಕ ಆಯ್ಕೆಗಳು ಜನರಿಗೆ ಲಭ್ಯವಾಗಲಿವೆ. ಕೃತಕ ಅಭಾವ ಸೃಷ್ಟಿಸುವ ಜಾಲಗಳಿಗೂ ಕಡಿವಾಣ ಹಾಕಲು ಪೂರಕವಾಗಲಿದೆ.

ಮರಳು ನಿಕ್ಷೇಪದ ಸ್ಥಳ ಗುರುತಿಸುವಿಕೆ, ಗಣಿಗಾರಿಕೆಗೆ ಪರವಾನಗಿ, ಮರಳು ದಾಸ್ತಾನು ಕೇಂದ್ರಗಳ ಗುರುತಿಸುವಿಕೆ ಹಾಗೂ ಸಾಗಣೆ ವ್ಯವಸ್ಥೆ ಸರಳಗೊಳಿಸುವ ಮೂಲಕ, ಜನರ ದೂರುಗಳಿಗೆ ಸ್ಪಂದಿಸಲಾಗಿದೆ. ಹೊಸ ಮರಳು ನೀತಿ ಜಾರಿಗೆ ತರಬೇಕು ಎಂಬ ಆಗ್ರಹ ಕೆಲ ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವುದು ಅಗತ್ಯವಾಗಿತ್ತು. ಮರಳಿನ ಬೆಲೆ ಹೆಚ್ಚಿದ್ದಲ್ಲದೆ, ಅಭಾವ ಸೃಷ್ಟಿಯಾದ ಪರಿಣಾಮ ವಸತಿ, ವಾಣಿಜ್ಯ ಸಂಕೀರ್ಣ ಸೇರಿ ಎಲ್ಲ ಬಗೆಯ ನಿರ್ಮಾಣ ಚಟುವಟಿಕೆಗಳು ದುಬಾರಿಯಾಗಿವೆ. ಇದಕ್ಕೆ ಕಡಿವಾಣ ಹಾಕಲು ಹೊಸ ನೀತಿಯೇ ಅಗತ್ಯವಾಗಿತ್ತು. ಪ್ರಸಕ್ತ ಸಚಿವ ಸಂಪುಟವೂ ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಅನುಷ್ಠಾನದ ಹಂತದಲ್ಲಿ ಯಾವುದೇ ಎಡರುತೊಡರು ಎದುರಾಗದಂತೆ ನೋಡಿಕೊಳ್ಳಬೇಕು. ಹೊಸ ನೀತಿ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವೂ ಆಗಬೇಕು.