ನ್ಯೂಸ್

ಬಡ್ಡಿ ದರ ಹೊರೆ; ಹಣದುಬ್ಬರ ನಿಯಂತ್ರಿಸಲು ರೆಪೋ ದರ ಹೆಚ್ಚಿಸಿದ ಆರ್​ಬಿಐ..

Webdesk - Ravikanth

ಕೈಮೀರುತ್ತಿರುವ ಹಣದುಬ್ಬರ ನಿಯಂತ್ರಿಸಲು ಹಾಗೂ ಆರ್ಥಿಕತೆ ಹಳಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) 5 ವಾರಗಳ ಅವಧಿಯಲ್ಲಿ 2ನೇ ಬಾರಿಗೆ ರೆಪೋ ದರವನ್ನು 50 ಮೂಲಾಂಶ ಹೆಚ್ಚಳ ಮಾಡಿದೆ. ಈ ಕ್ರಮದ ಮೂಲಕ ಹಣದುಬ್ಬರ ದರವನ್ನು ಶೇ. 6ರ ಚೌಕಟ್ಟಿನೊಳಗೆ ತರಲು ಉದ್ದೇಶಿಸಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ. ಹಣಕಾಸು ನೀತಿ ಸಮಿತಿಯ ಜತೆ ಸುದೀರ್ಘ ಸಮಾಲೋಚನೆಯ ನಂತರ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ತಿಂಗಳಷ್ಟೇ ರೆಪೋ ದರವನ್ನು 40 ಮೂಲಾಂಶದಷ್ಟು ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ರೆಪೋ ದರ ಬದಲಾವಣೆ ಮಾಡಿದ್ದು 2018ರ ಆಗಸ್ಟ್ ತಿಂಗಳಲ್ಲಿ. ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಬದಲಾವಣೆ ಮಾಡಿರುವುದು ಆರ್ಥಿಕತೆಯ ಮೇಲೆ ಹಾಗೂ ಜನರ ಜೀವನ ನಿರ್ವಹಣೆಯ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.

2018ರಲ್ಲಿ ರೆಪೋ ದರವು ಶೇ. 4 ಇತ್ತು. ಕಳೆದ ತಿಂಗಳು 40 ಹಾಗೂ ಈಗ 50 ಮೂಲಾಂಶ ಏರಿಕೆ ಮಾಡಿರುವುದರಿಂದ ಪ್ರಸ್ತುತ ದರ ಶೇಕಡ 4.9 ಆಗಿದೆ. ವಾಣಿಜ್ಯ ಬ್ಯಾಂಕುಗಳಿಗೆ ಆರ್​ಬಿಐ ವಿಧಿಸುವ ಬಡ್ಡಿಯೇ ರೆಪೋ ದರವಾಗಿರುತ್ತದೆ. ಹೀಗಾಗಿ, ರೆಪೋ ದರ ಹೆಚ್ಚಾದಂತೆ ವಾಣಿಜ್ಯ ಬ್ಯಾಂಕ್​ಗಳು ಕೂಡ ಸಾಲದ ಮೇಲಿನ ಬಡ್ಡಿ ದರವನ್ನು ಸಹಜವಾಗಿ ಹೆಚ್ಚಿಸುತ್ತವೆ. ಈ ಏರಿಕೆಯ ಮೊದಲ ಪೆಟ್ಟು ಬೀಳುವುದು ಬ್ಯಾಂಕ್​ಗಳಿಂದ ಸಾಲ ಪಡೆದ ಗ್ರಾಹಕರ ಮೇಲೆ. ಈ ಹಣಕಾಸು ವರ್ಷವೊಂದರಲ್ಲೇ ಗ್ರಾಹಕರು ತಮ್ಮ ಸಾಲಕ್ಕೆ ಕನಿಷ್ಠ ಶೇ. 0.9ರಷ್ಟು ಹೆಚ್ಚುವರಿ ಬಡ್ಡಿ ಪಾವತಿಸುವ ಹೊರೆ ಹೊರಬೇಕಾಗಿದೆ. ಗೃಹ ಸಾಲ, ನಿವೇಶನ ಸಾಲ, ವಾಹನ ಸಾಲ ಮುಂತಾದವುಗಳಿಗೆ ದೀರ್ಘಾವಧಿ ಸಾಲ ಪಡೆದುಕೊಂಡವರ ಇಎಂಐಗಳ ಮೊತ್ತ ಈಗ ಏರಿಕೆಯಾಗುವುದು ನಿಶ್ಚಿತ. ಸಾಮಾನ್ಯವಾಗಿ ಈ ರೀತಿಯ ಸಾಲಗಳನ್ನು ಪಡೆದುಕೊಳ್ಳುವವರು ಮಧ್ಯಮ ಹಾಗೂ ಮೇಲ್​ವುಧ್ಯಮ ವರ್ಗದ ಜನರು. ಕೋವಿಡ್ ಸಾಂಕ್ರಾಮಿಕದ ಹಾವಳಿಯಿಂದ ಈಗಾಗಲೇ ಈ ವರ್ಗವೇ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದು, ಈಗಷ್ಟೇ ಚೇತರಿಕೆ ಕಂಡುಕೊಳ್ಳುತ್ತಿದೆ. ಈಗ ಆರ್​ಬಿಐನ ಕ್ರಮವು ಈ ವರ್ಗಕ್ಕೆ ಹೊರೆಯನ್ನುಂಟು ಮಾಡಲಿದೆ.

ಇದೇ ವೇಳೆ ಬ್ಯಾಂಕುಗಳಲ್ಲಿ ಠೇವಣಿ ಇಡುವ ಗ್ರಾಹಕರಿಗೆ ಆರ್​ಬಿಐನ ಈ ಕ್ರಮದಿಂದ ಒಂದಿಷ್ಟು ಅನುಕೂಲ ಆಗಬಹುದಾಗಿದೆ. ಠೇವಣಿ ಬಡ್ಡಿ ಹಣ ಅವಲಂಬಿತರಿಗೆ ಇದರ ಲಾಭ ತಟ್ಟಬಹುದಾಗಿದೆ. ಆದರೆ, ಬ್ಯಾಂಕ್​ಗಳು ರೆಪೋ ದರಕ್ಕೆ ಅನುಗುಣವಾಗಿಯೇ ಠೇವಣಿ ಬಡ್ಡಿ ದರ ಏರಿಸುತ್ತವೆಯೋ ಇಲ್ಲವೋ ಕಾದುನೋಡಬೇಕಾಗಿದೆ. ತೈಲ ಸೇರಿದಂತೆ ಸರಕುಗಳ ಬೆಲೆ ಹೆಚ್ಚಳವಾಗುತ್ತಿರುವುದೇ ಹಣದುಬ್ಬರ ಅಧಿಕವಾಗಲು ಪ್ರಮುಖ ಕಾರಣವಾಗಿದೆ. ರಷ್ಯಾ- ಯೂಕ್ರೇನ್ ಯುದ್ಧವು ಈ ಏರಿಕೆಯನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ದಿದೆ. ಸಗಟು ಬೆಲೆ ಆಧರಿತ ಹಣದುಬ್ಬರವು ಕಳೆದ ಏಪ್ರಿಲ್ ತಿಂಗಳಲ್ಲಿ ದಾಖಲೆಯ ಮಟ್ಟವಾದ ಶೇ. 15.08ಕ್ಕೆ ಏರಿತ್ತು. ಈ ಹಿನ್ನೆಲೆಯಲ್ಲಿ ಹಣದುಬ್ಬರ ನಿಯಂತ್ರಿಸುವ ಕಾರ್ಯವನ್ನು ಕೇಂದ್ರ ಸರ್ಕಾರವು ಆರ್​ಬಿಐಗೆ ವಹಿಸಿತ್ತು. 2022-23 ನೇ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 6.7ರಷ್ಟು ಆಗಬಹುದೆಂದು ಅಂದಾಜಿಸಲಾಗಿದೆ. ಇದೇ ಅವಧಿಯಲ್ಲಿ ಆರ್ಥಿಕತೆಯು ಶೇ. 7.2ರಷ್ಟು ಅಭಿವೃದ್ಧಿ ಕಾಣಬಹುದು ಎಂದು ಆರ್​ಬಿಐ ನಿರೀಕ್ಷಿಸಿದೆ. ಈ ಸಂಗತಿಗಳ ಹಿನ್ನೆಲೆಯಲ್ಲಿ ರೆಪೋ ದರ ಬದಲಾವಣೆ ಅಸ್ತ್ರವನ್ನು ಆರ್​ಬಿಐ ಪ್ರಯೋಗಿಸಿದೆ.