ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಲಾಗಾಯ್ತಿನಿಂದಲೂ ದೃಢನಿಲುವು ತಾಳಿಕೊಂಡೇ ಬಂದಿದೆ; ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಹ ಈ ವಿಷಯವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಹೀಗಿದ್ದರೂ, ಪಾಕಿಸ್ತಾನ ಮಾತ್ರ ಅವಕಾಶ ಸಿಕ್ಕಾಗಲೆಲ್ಲ ಈ ವಿಷಯ ಪ್ರಸ್ತಾಪಿಸುತ್ತ, ಮುಜುಗರ ಎದುರಿಸುತ್ತಲೇ ಇದೆ. ಅಷ್ಟಕ್ಕೂ ಆ ದೇಶದ ರಾಜಕೀಯ ನಾಯಕರಿಗೆ ಕಾಶ್ಮೀರವನ್ನು ಒಂದು ವಿವಾದವಾಗಿ ಮುಂದುವರಿಸದಿದ್ದರೆ ರಾಜಕೀಯ ಅಸ್ತಿತ್ವಕ್ಕೆ ಕುತ್ತು ಬರುತ್ತದೆ ಎಂಬುದು ಗೊತ್ತಿರುವಂತಹುದೇ. ಈಗ ಚೀನಾ ಮತ್ತೆ ಪಾಕಿಸ್ತಾನದ ಪರವಾಗಿ ವಕಾಲತು ವಹಿಸಿ ಕಾಶ್ಮೀರದ ಬಗ್ಗೆ ಮಾತಾಡಿದೆ. ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಸಮರ್ಪಕವಾಗಿ ಮತ್ತು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ಮಾಡಿರುವ ಚೀನಾ, ಅದೇ ಸಂದರ್ಭದಲ್ಲಿ, ವಿಷಯವನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ನಿರ್ಧಾರ ಸಲ್ಲದೆಂದೂ ಹೇಳಿದೆ. ಈ ಮಾತು ಭಾರತವನ್ನು ಕುರಿತಾಗಿ ಹೇಳಿದ್ದು ಎಂಬುದನ್ನು ಊಹಿಸಲು ತಜ್ಞರೇ ಬೇಕಾಗಿಲ್ಲ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಸಮಯದಲ್ಲಿ, ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಇತರ ಕೆಲ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಬಹುಕೋಟಿ ವೆಚ್ಚದ ಚೀನಾ-ಪಾಕಿಸ್ತಾನ ಇಕಾನಮಿಕ್ ಕಾರಿಡಾರ್ (ಸಿಪಿಇಸಿ) ಬಗ್ಗೆಯೂ ಉಭಯ ನಾಯಕರು ರ್ಚಚಿಸಿದ್ದು, ಈ ಯೋಜನೆ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಕಾಮಗಾರಿ ವೇಗ ಹೆಚ್ಚಿಸಲು ನಿಶ್ಚಯಿಸಿದ್ದಾರೆ. ಚೀನಾ ನಾಯಕರು, ಸಿಪಿಇಸಿ ಕಾಮಗಾರಿ ಪ್ರದೇಶದಲ್ಲಿ ಚೀನಾದ ನಾಗರಿಕರು ಹಾಗೂ ಕಾರ್ವಿುಕರ ಮೇಲೆ ನಡೆಯುತ್ತಿರುವ ಉಗ್ರದಾಳಿಗಳ ಬಗ್ಗೆ ಪ್ರಸ್ತಾಪಿಸಿ ಸುರಕ್ಷತೆಗೆ ತಾಕೀತು ಮಾಡಿದ್ದಾರೆ. ಈ ಯೋಜನೆಯು ಪಾಕಿಸ್ತಾನವನ್ನು ಸಾಲದ ಕೂಪದಲ್ಲಿ ಮುಳುಗಿಸುವುದು ನಿಶ್ಚಿತವಾಗಿದ್ದರೂ, ಇಮ್ರಾನ್ ಖಾನ್ ಮಾತ್ರ ಚೀನಾವನ್ನು ನೆಚ್ಚಿಕೊಂಡಿದ್ದಾರೆ. ಚೀನಾವು ಕಾಶ್ಮೀರ ವಿಚಾರವನ್ನು ಉಲ್ಲೇಖ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಚೀನಾ-ಪಾಕಿಸ್ತಾನ ಜಂಟಿ ಹೇಳಿಕೆಯಲ್ಲಿ ಈ ವಿಷಯ ಬಂದಿದ್ದಾಗ, ಭಾರತ ಬಲವಾಗಿ ಖಂಡಿಸಿತ್ತು. ಸಿಪಿಇಸಿ ಕಾಮಗಾರಿ ಪ್ರದೇಶದ ಕೆಲ ಭಾಗ ಭಾರತಕ್ಕೆ ಸೇರಿದ್ದು, ಪಾಕಿಸ್ತಾನ ಹಿಂದೆ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದ್ದನ್ನು ನೆನಪಿಸಿ ಭಾರತವು ಚಾಟಿ ಬೀಸಿದೆ. ಹೀಗಿದ್ದರೂ ಪಾಕಿಸ್ತಾನ ಈ ವಿಷಯವನ್ನು ಕೆದಕುವ ಯತ್ನವನ್ನು ಮಾತ್ರ ಬಿಟ್ಟಿಲ್ಲ.
ಚೀನಾವು ಪಾಕ್ ಸಹಕಾರಕ್ಕೆ ಬರುವುದು ಅಚ್ಚರಿಯೇನೂ ಅಲ್ಲ. ಆದರೆ ಈ ಜೋಡಿಯ ಆಟಗಳು ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲವು ಎಂಬುದು ಗಂಭೀರ ಸಂಗತಿ. ಹಾಗಂತ ಭಾರತವೂ ಸುಮ್ಮನಿಲ್ಲ. ತನ್ನ ರಕ್ಷಣೆಗೆ ಬೇಕಾದ ಸಾಮರಿಕ ತಯಾರಿಯ ಹೆಜ್ಜೆಗಳ ಜತೆಗೆ ಅಂತಾರಾಷ್ಟ್ರೀಯ ವಲಯದಲ್ಲಿ ರಾಜತಾಂತ್ರಿಕ ಜಾಣ್ಮೆ ಪ್ರದರ್ಶಿಸುತ್ತಿದೆ. ಚೀನಾ ಜತೆಗಿನ ಗಡಿ ತಗಾದೆ ವಿಷಯದಲ್ಲಿ ಅಮೆರಿಕವು ಭಾರತದ ಬೆಂಬಲಕ್ಕೆ ಬಂದಿರುವುದು ಗಮನಾರ್ಹ. ಇದು ಕೂಡ ಚೀನಾದ ಅಸಹನೆಗೆ ಕಾರಣವಾಗಿದೆ. ಇತ್ತ, ಕಾಶ್ಮೀರದಲ್ಲಿ ಭಾರತ ಸರ್ಕಾರ ಖಡಕ್ ನಿಲುವನ್ನು ಅನುಸರಿಸುತ್ತಿದ್ದು, ಗಡಿಯಾಚೆಗಿನ ಭಯೋತ್ಪಾದಕರ ವಿಷಯದಲ್ಲಿ ಸೇನೆ ಸಹ ಬಿಗಿಯಾಗಿಯೇ ವ್ಯವಹರಿಸುತ್ತಿದೆ. ಹೀಗಿದ್ದರೂ, ಪಾಕ್-ಚೀನಾ ವಿಷಯದಲ್ಲಿ ಕಟ್ಟೆಚ್ಚರ ಬೇಕೇಬೇಕು.