ನ್ಯೂಸ್

ಸಂಪಾದಕೀಯ | ಬಿಗಿ ಕ್ರಮ ಅಗತ್ಯ; ಅಪರಾಧ ಪತ್ತೆ ಹಚ್ಚುವ ವ್ಯವಸ್ಥೆಯೂ ಬಲಗೊಳ್ಳಬೇಕು..

Webdesk - Ravikanth

ಹಣಕಾಸಿನ ಹೆಸರಿನಲ್ಲಿ ವಂಚನೆ, ಸೈಬರ್ ಅಪರಾಧಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆಮಿಷಗಳಿಗೆ ಒಳಗಾಗದಿರಿ ಎಂದು ಜನರನ್ನು ಕಾಲಕಾಲಕ್ಕೆ ಎಚ್ಚರಿಸಲಾಗುತ್ತಿದೆಯಾದರೂ, ವಂಚಕರು ವಿಭಿನ್ನ ಮಾರ್ಗ ಮತ್ತು ಹೊಸ ಹೊಸ ಉಪಾಯಗಳನ್ನು ಬಳಸಿ ಅಮಾಯಕರನ್ನು ದೋಚುತ್ತಿದ್ದಾರೆ. ಹಣ ದ್ವಿಗುಣ, ಹೆಚ್ಚಿನ ಬಡ್ಡಿ, ಕಮಿಷನ್ ಆಮಿಷ, ನಿವೇಶನ-ಚಿನ್ನದ ಮೇಲೆ ಹೂಡಿಕೆ ಆಸೆ ತೋರಿಸಿ ಜನರಿಗೆ ವಂಚಿಸುವ ಪ್ರಕರಣಗಳು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿವೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲೇ 4,357 ವಂಚನೆ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ ಎಂಬುದನ್ನು ಗಮನಿಸಿದರೆ, ಪರಿಸ್ಥಿತಿಯ ತೀವ್ರತೆ ಅರ್ಥಮಾಡಿಕೊಳ್ಳಬಹುದು. ಇಲ್ಲಿ ಇನ್ನೊಂದು ಮುಖವೂ ಇದೆ. ಆರೋಪಿಗಳಿಂದ ಬೆದರಿಕೆ, ಪದೇಪದೆ ವಿಚಾರಣೆ, ಪೊಲೀಸ್ ಠಾಣೆಗೆ ಅಲೆಯುವುದು, ಕೋರ್ಟ್​ಗೆ ಹಾಜರಾಗುವ ಫಜೀತಿಯಿಂದಾಗಿ ಶೇಕಡ 50ರಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಎಂಬುದು ಇನ್ನೂ ಶೋಚನೀಯ ಸಂಗತಿ.

ಬ್ಯಾಂಕಿನಿಂದ ಆಧಾರ್ ಅಪ್ಡೇಟ್ ಮಾಡುತ್ತಿದ್ದೇವೆ, ಡೆಬಿಟ್-ಕ್ರೆಡಿಟ್ ಕಾರ್ಡ್ ಅವಧಿ ಮುಗಿದು ಹೋಗಿದೆ ಎಂಬ ನೆಪದಲ್ಲಿ ಕರೆ ಮಾಡಿ, ಒಟಿಪಿ ಪಡೆದು ಖಾತೆಯಿಂದ ಹಣ ಲಪಟಾಯಿಸುವ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ಇಂಥ ವಿಷಯದಲ್ಲಿ ಗ್ರಾಹಕರು, ಜನಸಾಮಾನ್ಯರು ಎಚ್ಚರಿಕೆ ವಹಿಸಬೇಕು ಎಂಬುದೇನೋ ಸರಿಯೇ. ಆದರೆ, ಇಂಥ ಅಪರಾಧಗಳನ್ನು ಪತ್ತೆ ಹಚ್ಚಲು ಸೂಕ್ತ ತಂತ್ರಜ್ಞಾನ ಮತ್ತು ನುರಿತ ಸಿಬ್ಬಂದಿಯ ಕೊರತೆ ಕಾಡುತ್ತಿರುವುದು ದುರದೃಷ್ಟಕರ. ಇಂಥ ಪ್ರಕರಣಗಳು ಸಂಬಂಧಪಟ್ಟ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ಅವುಗಳನ್ನು ಪತ್ತೆ ಹಚ್ಚುವುದು ಹೇಗೆ, ಆರೋಪಿಗಳನ್ನು ಗುರುತಿಸುವುದು ಹೇಗೆ ಎಂಬ ಸಂಗತಿಗಳು ಪೊಲೀಸರಿಗೂ ಗೋಜಲಾಗಿ ಕಾಡುತ್ತಿವೆ. ಎಷ್ಟೋ ಪ್ರಕರಣಗಳಲ್ಲಿ ಅವರೇ ಕೈಚೆಲ್ಲಿ ಬಿಡುವುದರಿಂದ, ಸಂತ್ರಸ್ತರು ನ್ಯಾಯದ ನಿರೀಕ್ಷೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ವಂಚಕರು ದೂರದ ರಾಜ್ಯಗಳಲ್ಲಿ ಅಥವಾ ವಿದೇಶಗಳಳ್ಲಿ ಕುಳಿತು ಗುರುತು ಬಿಟ್ಟುಕೊಡದೆಯೇ ಖಾತೆಗೆ ಕನ್ನ ಹಾಕುವ, ಹಣ ಲಪಟಾಯಿಸುವ ಕೃತ್ಯಗಳನ್ನು ಮಾಡುತ್ತಾರೆ. ಮತ್ತೆ, ಬೇನಾಮಿ ಕಂಪನಿಗಳಂತೂ ಯಾವುದೋ ಸುಳ್ಳು ವಿಳಾಸ ನೀಡಿ, ಅದನ್ನೇ ಕಚೇರಿ ಎಂದು ನಂಬಿಸುತ್ತವೆ. ಹಣ ಕಳೆದುಕೊಂಡವರು ಅಂಥ ಕಂಪನಿಯ ವಿಳಾಸ ಹುಡುಕಿಕೊಂಡು ಹೋದರೆ ಅದು ನಕಲಿ ಎಂಬುದು ಗೊತ್ತಾಗುತ್ತದೆ. ತನಿಖಾ ಸಂಸ್ಥೆಗಳು ಕೂಡ ಇಂಥ ಸ್ಥಿತಿಯಲ್ಲಿ ಪ್ರಕರಣಗಳನ್ನು ಬೇಧಿಸುವುದು ಕಷ್ಟವಾಗುತ್ತದೆ.

ಕರೊನಾ ನಂತರದ ದಿನಗಳಲ್ಲಂತೂ ಇಂಥ ವಂಚನೆ ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆಗೆ ಈ ಸಮಸ್ಯೆಯ ಅರಿವಿದೆಯಾದರೂ, ಇದರ ಪರಿಹಾರದ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಬಲಗೊಳಿಸಬೇಕಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿ ಸೂಕ್ತ ತರಬೇತಿ ಪಡೆದ ಸಿಬ್ಬಂದಿಯ ನಿಯೋಜನೆ, ಅಪರಾಧಜಾಡುಗಳ ಶೀಘ್ರ ಪತ್ತೆ, ಮೋಸದ ಜಾಲಗಳ ಕುರಿತಾದ ನಿಖರ ಮಾಹಿತಿ ಇವೆಲ್ಲವನ್ನೂ ಈಗ ಪೊಲೀಸ್ ಇಲಾಖೆ ಒಳಗೊಳ್ಳಬೇಕಿದೆ. ಆಗಲೇ, ವಂಚಕರು ಎಲ್ಲೇ ಅಡಗಿದ್ದರೂ ಹೆಡೆಮುರಿ ಕಟ್ಟಿ, ಹೊಸ ಸ್ವರೂಪದ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ.