ನ್ಯೂಸ್

ಕೃಷಿಗೆ ದೊರೆಯಲಿ ಒತ್ತು; ಹೊಸನೀತಿ ಸಮರ್ಪಕವಾಗಿ ಜಾರಿಯಾಗಲಿ

chetannadiger

ಕೃಷಿ ಕ್ಷೇತ್ರದಲ್ಲಿ ಮತ್ತು ರೈತರಲ್ಲಿ ಮತ್ತಷ್ಟು ಭರವಸೆ ಮೂಡಿಸಲು ರಾಜ್ಯ ಸರ್ಕಾರ ಹೊಸ ಕೃಷಿ ನೀತಿ ಜಾರಿಗೆ ಮುಂದಾಗಿದೆ. ಈ ನೀತಿ ಹಲವು ಹೊಸತನಗಳನ್ನು, ಮಹತ್ವದ ಸುಧಾರಣೆಗಳನ್ನು ಒಳಗೊಂಡಿರುವುದರಿಂದ ಬೇರುಮಟ್ಟದ ಪರಿವರ್ತನೆಗೆ ಕಾರಣವಾಗಿ, ಕೃಷಿಯು ಉತ್ಕರ್ಷದ ಹೊಸ ದಿಕ್ಕಿನತ್ತ ಸಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಒಂದೆಡೆ, ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇಂದು (ಮಂಗಳವಾರ) ಭಾರತ ಬಂದ್​ಗೆ ಕರೆ ನೀಡಿದ್ದಾರೆ. ಅವರ ಅನುಮಾನಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸರಣಿ ಸಭೆಗಳನ್ನು ನಡೆಸಿದೆ. ವಾಸ್ತವಾಂಶಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಜಾರಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ಕೇಂದ್ರದ ಹೊಸ ಕಾನೂನುಗಳ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವ ಜತೆಯಲ್ಲೇ ರೈತರ ಆದಾಯ ದ್ವಿಗುಣಗೊಳಿಸುವ, ಎರಡನೇ ಹಂತದ ಕೃಷಿಗೆ ಪೂರಕವಾಗಿ ಹೊಸ ನೀತಿ ಜಾರಿಗೆ ಬರುತ್ತಿರುವುದು ವಿಶೇಷ. ಕೃಷಿಕ್ಷೇತ್ರದ ಮತ್ತು ರೈತರ ಮೂಲ ಸಮಸ್ಯೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಅವುಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಲು ಒತ್ತು ನೀಡಲಾಗಿದೆ.

ಕೃಷಿ ಮತ್ತು ತೋಟಗಾರಿಕೆಗೆ ಉದ್ದಿಮೆ ಸ್ವರೂಪ ನೀಡುವ ಮೂಲಕ ಕೃಷಿ ಹಾಗೂ ಪೂರಕ ಕ್ಷೇತ್ರಗಳನ್ನು ಲಾಭದಾಯಕವಾಗಿಸುವುದು, ಉದ್ಯೋಗಾವಕಾಶ ಹೆಚ್ಚಿಸುವುದು ಸರ್ಕಾರದ ಆಶಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಈ ಪ್ರಮಾಣ ಹೆಚ್ಚಿದೆ. ಅಲ್ಲದೆ, ಯುವಕರು ಕೃಷಿಗೆ ಸಂಬಂಧಿಸಿದ ನವೋದ್ಯಮಗಳಲ್ಲಿ ತೊಡಗಿಕೊಳ್ಳುವ ಮೂಲಕ ಸೌಲಭ್ಯಗಳ ವಿಸ್ತರಣೆ ಸಾಧ್ಯವಾಗಲಿದೆ, ಸ್ವಾವಲಂಬನೆಯ ಆಶಯವೂ ಈಡೇರಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಿದ್ಯಾವಂತ ಯುವಕರನ್ನು ಆಕರ್ಷಿಸಿ ರೈತೋದ್ಯಮಿಗಳನ್ನಾಗಿ ಮಾಡುವ ಯೋಜನೆ ರೂಪಿಸಲಾಗಿರುವುದು ಸ್ವಾಗತಾರ್ಹ. ಇದಲ್ಲದೆ, ಕೃಷಿ ಸಂಬಂಧಿತ ಎಲ್ಲ ಇಲಾಖೆಗಳ ನಡುವೆ ಸಮನ್ವಯ ತರುವುದು, ಕೃಷಿಕರ ಆದಾಯ ಹೆಚ್ಚಿಸುವಲ್ಲಿನ ಸವಾಲುಗಳನ್ನು ನಿವಾರಿಸುವುದು, ಕೃಷಿ ಉತ್ಪನ್ನಗಳ ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರುಕಟ್ಟೆ ಹಾಗೂ ರಫ್ತಿಗೆ ವಿನೂತನ ಕ್ರಮಗಳನ್ನು ಕೈಗೊಳ್ಳುವುದು, ಸವಳು, ಜವಳು ಭೂಮಿಯನ್ನು ಫಲವತ್ತತೆಗೆ ಒಳಪಡಿಸುವಂಥ ಅಂಶಗಳನ್ನು ಈ ನೀತಿ ಒಳಗೊಂಡಿದೆ. ಕೃಷಿ ಉತ್ಪನ್ನವನ್ನು ಹೆಚ್ಚಿಸಲು ಗಮನ ನೀಡಲಾಗಿದೆ. ರಾಜ್ಯದಲ್ಲಿ 120 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ 86.80 ಲಕ್ಷ ರೈತರಿದ್ದಾರೆ. ಈ ಕುಟುಂಬಗಳಿಗೆ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆ ಲಾಭ ದೊರಕಿಸಿಕೊಡಲು ಮುಂದಾಗಿರುವುದು ಮಹತ್ವದ ಕ್ರಮ.

ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು, ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದರೆ ಮಹತ್ವದ ಬದಲಾವಣೆ ಸಾಕಾರಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ರೈತರಲ್ಲೂ ಆತ್ಮವಿಶ್ವಾಸ ತುಂಬಬೇಕಿದೆ. ಕೃಷಿಯೆಂದರೆ ನಷ್ಟ ಎಂಬ ಮಾನಸಿಕತೆ ನಿವಾರಣೆ ಆಗಬೇಕಿದ್ದು, ಕೃಷಿಕರ ಸಂಖ್ಯೆ ಹೆಚ್ಚಿದ್ದಷ್ಟು ಗ್ರಾಮಗಳೂ ಶಕ್ತಿಶಾಲಿಯಾಗುತ್ತವೆ ಮತ್ತು ಆರ್ಥಿಕತೆಗೆ ಈ ರಂಗದ ಕೊಡುಗೆ ಮತ್ತಷ್ಟು ಹೆಚ್ಚುತ್ತದೆ. ಹಲವು ಸುಧಾರಣೆಗಳಿಗೆ ಮುನ್ನುಡಿ ಬರೆದಿರುವ ಕರ್ನಾಟಕಕ್ಕೆ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಹೊಸ ಕೃಷಿ ನೀತಿ ಬರುತ್ತಿದ್ದು, ಇದು ಪರಿಣಾಮಕಾರಿಯಾಗಿ ಜಾರಿಯಾಗಲಿ.