‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ಗಾದೆಯೇ ಇದೆ. ಅದರಲ್ಲೂ ಈಗಿನ ದಿನಮಾನದಲ್ಲಿ ಮನೆ ನಿರ್ವಿುಸುವುದೆಂದರೆ ಹರಸಾಹಸವೇ ಸರಿ. ಗಗನಕ್ಕೇರಿರುವ ನಿರ್ಮಾಣ ಸಾಮಗ್ರಿಗಳ ಬೆಲೆ, ಕಾರ್ವಿುಕರ ಅಭಾವ ಇವೆಲ್ಲ ಒಂದೆಡೆಯಾದರೆ, ಇದಕ್ಕೆ ಮುಂಚಿತವಾಗಿ ಮನೆ ಅಥವಾ ಕಟ್ಟಡ ನಿರ್ವಿುಸುವುದಕ್ಕೆ ಸರ್ಕಾರದ ನಾನಾ ಇಲಾಖೆಗಳಿಂದ ಪರವಾನಿಗೆ ಅಥವಾ ನಿರಾಕ್ಷೇಪಣಾ ಪತ್ರ ಪಡೆಯುವುದು ಮತ್ತೊಂದು ಸಾಹಸದ ಕೆಲಸ.
ಇಲ್ಲಿ ಸಂಬಂಧಪಟ್ಟವರು ಕೇಳಿದಷ್ಟು ಹಣ ನೀಡದಿದ್ದರೆ ಕೆಲವೊಮ್ಮೆ ಕೆಲಸವೇ ಆಗುವುದಿಲ್ಲ; ನಾನಾ ನಿಯಮಗಳ ನೆಪ ಹೇಳಿ ತಿಂಗಳುಗಟ್ಟಲೆ ಸತಾಯಿಸಲಾಗುತ್ತದೆ ಎಂಬುದು ಬಹಳ ಜನರ ಅನುಭವ. ಒಟ್ಟಿನಲ್ಲಿ, ಕಟ್ಟಡ ಅಥವಾ ಮನೆ ನಿರ್ಮಾಣ ಎಂದರೆ ಜನರು ಹೌಹಾರುವ ಪರಿಸ್ಥಿತಿ ಇದೆ.
ಜನರ ಈ ಪರದಾಟಕ್ಕೆ ಸಾಂತ್ವನದ ನಿಟ್ಟಿನಲ್ಲಿ, ನಗರ ಪ್ರದೇಶದಲ್ಲಿ ಮನೆ ಅಥವಾ ಕಟ್ಟಡ ನಿರ್ವಿುಸುವದಕ್ಕೆ ಆನ್ಲೈನ್ನಲ್ಲೇ ನಕ್ಷೆ ಮಂಜೂರು ಮಾಡುವ ಕ್ರಮವನ್ನು ನಗರಾಭಿವೃದ್ಧಿ ಇಲಾಖೆ ಕೈಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರು ಸೇರಿ ರಾಜ್ಯದ 150 ನಗರಗಳಲ್ಲಿ ಮಾರ್ಚ್ ತಿಂಗಳ ಕೊನೆಯಲ್ಲಿ ಈ ಸೇವೆ ಆರಂಭವಾಗಲಿದೆ. ಈ ಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬಂದಲ್ಲಿ ಜನರು ಕುಳಿತಲ್ಲೇ ನಕ್ಷೆ ಮಂಜೂರಾತಿ ಪಡೆಯುವುದಕ್ಕೆ ಆಸ್ಪದವಾಗಲಿದ್ದು, ನಾನಾ ಕಚೇರಿಗಳಿಗೆ ಅಲೆದಾಟ ಮಾಡುವ ಪ್ರಮೇಯ ತಪ್ಪುತ್ತದೆ; ಸಮಯವೂ ಉಳಿತಾಯವಾಗಲಿದೆ.
ಮತ್ತು ಸರ್ಕಾರಿ ಕಾರ್ಯದಲ್ಲಿ ಪಾರದರ್ಶಕತೆಗೂ ಅನುವು ಮಾಡಿಕೊಡಲಿದೆ. ಕಟ್ಟಡ ನಿರ್ವಣಕ್ಕೆ ಅನುಮತಿ ನೀಡಬೇಕಾದ ಅಧಿಕಾರಿಯ ಸಹಿಯನ್ನು ಡಿಜಿಟಲ್ಗೊಳಿಸಲಾಗುತ್ತದೆ. ಜನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿ ಸಂಬಂಧಿಸಿದ ಅಧಿಕಾರಿಗೆ ಹೋಗುತ್ತದೆ. ಅವರು ನಿಗದಿಪಡಿಸಿದ ಸಮಯದಲ್ಲಿ ಅರ್ಜಿ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿ ಅರ್ಜಿ ವಿಲೇವಾರಿ ಮಾಡುತ್ತಾರೆ.
ಇಲ್ಲಿ ಸ್ವಯಂಚಾಲಿತ ಮಂಜೂರಾತಿ ದೊರೆಯಲಿದ್ದು, ಅಧಿಕಾರಿಗಳ ವಿಳಂಬ, ನಿರ್ಲಕ್ಷ್ಯಕ್ಕೆ ಅವಕಾಶವಿರುವುದಿಲ್ಲ ಎನ್ನಲಾಗಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಮನೆ ಅಥವಾ ಕಟ್ಟಡದ ಮಂಜೂರಾತಿ ಪಡೆದರೆ ಅದು ನೇರವಾಗಿ ‘ಕಾವೇರಿ’ ಪೋರ್ಟಲ್ಗೆ ಲಿಂಕ್ ಆಗುತ್ತದೆ. ಹೀಗಾಗಿ ಒಬ್ಬರಿಗೆ ಮಾರಾಟ ಮಾಡಿದ ಕಟ್ಟಡವನ್ನು ಇನ್ನೊಬ್ಬರಿಗೆ ಮಾರಾಟ ಮಾಡುವಂಥ ಅವ್ಯವಹಾರಕ್ಕೆ ಆಸ್ಪದ ಸಿಗುವುದಿಲ್ಲ.
ಹಾಗೇ ಸದರಿ ಆಸ್ತಿಗೆ ಸಂಬಂಧಿಸಿದ ಯಾವ ಪ್ರಕ್ರಿಯೆ ಆರಂಭಿಸಿದರೂ ಮಾಲೀಕರ ಮೊಬೈಲಿಗೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಮನೆ ಅಥವಾ ಕಟ್ಟಡ ಖರೀದಿಯಲ್ಲಿ ಜನರು ಮೋಸಹೋಗುವುದನ್ನು ತಪ್ಪಿಸಬಹುದು ಎಂಬ ಆಶಾಭಾವವಿದೆ.
ಕಾಲಕ್ಕೆ ಅನುಗುಣವಾಗಿ ಸರ್ಕಾರಿ ಇಲಾಖೆಗಳು ಸಹ ಅಪ್ಡೇಟ್ ಆಗಬೇಕು ಮತ್ತು ಲಭ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಸೇವೆಗಳು ಸುಲಭದಲ್ಲಿ ಮತ್ತು ಪಾರದರ್ಶಕವಾಗಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಮೊದಲೇ ವ್ಯವಸ್ಥೆ ಬಗ್ಗೆ ಭ್ರಮನಿರಸನಗೊಂಡಿರುವ ಜನರು ಇನ್ನಷ್ಟು ನಂಬಿಕೆ ಕಳೆದುಕೊಳ್ಳುತ್ತಾರೆ. ಆದ್ದರಿಂದ ಇಂಥ ಯೋಜನೆಗಳು ಸ್ವಾಗತಾರ್ಹ.
ಸರ್ಕಾರಿ ಯೋಜನೆಗಳು ನೋಡುವುದಕ್ಕೆ ಚೆನ್ನಾಗಿಯೇ ಇರುತ್ತವೆ. ಆದರೆ ಜಾರಿ ಹಂತದಲ್ಲಿ ಸಮಸ್ಯೆಯಾಗುತ್ತದೆ. ಈ ಯೋಜನೆಯೂ ಹಾಗಾಗದಂತೆ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸಂಬಂಧಪಟ್ಟ ಇಲಾಖೆಗಳ ಮೇಲಿದೆ.