ನ್ಯೂಸ್

ಕೃಷಿಹಿತಕ್ಕೆ ಪೂರಕ; ಸಾಲ ಮರುಪಾವತಿಸದ ರೈತರ ಆಸ್ತಿ ಜಪ್ತಿ ತಡೆಗೆ ಕಾನೂನು

Webdesk - Ravikanth

ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ 2022 ಜಾರಿಗೊಳಿಸುವ ಮೂಲಕ ಕೃಷಿ ಕಾರ್ಯಕ್ಕಾಗಿ ಜಮೀನು ಒತ್ತುವರಿ ಮಾಡಿಕೊಂಡ ರೈತರ ಹಿತ ಕಾಪಾಡಲು ಕ್ರಮ ಕೈಗೊಂಡಿದ್ದ ಕರ್ನಾಟಕ ಸರ್ಕಾರವು ಈಗ ಸಾಲ ಮರುಪಾವತಿಸಲಾಗದೆ ಸುಸ್ತಿದಾರರಾಗುವ ರೈತರ ಆಸ್ತಿ ಜಪ್ತಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಶೀಘ್ರ ಕಾನೂನು ರೂಪಿಸುವುದಾಗಿ ಹೇಳಿದೆ. ಕೋವಿಡ್ ಸಾಂಕ್ರಾಮಿಕ, ಅತಿವೃಷ್ಟಿ ಪರಿಣಾಮವಾಗಿ ಕೃಷಿ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಬಹುತೇಕ ಕೃಷಿಕರು ಸಾಲ ಮರುಪಾವತಿಸಲಾಗದಂಥ ಪರಿಸ್ಥಿತಿ ತಲೆದೋರಿರುವುದನ್ನು ಅರಿತಿರುವ ಮುಖ್ಯಮಂತ್ರಿಗಳು ಇಂತಹ ಕಾನೂನು ರೂಪಿಸುವುದಾಗಿ ಘೋಷಿಸಿರುವುದು ಅನ್ನದಾತರ ಹಿತ ಕಾಪಾಡುವ ನಡೆಯಾಗಿದೆ. ಆದರೆ, ಆಸ್ತಿ ಜಪ್ತಿ ತಡೆ ಕಾನೂನು ಸಾಲ ಮರುಪಾವತಿಗೆ ಕಾಲಾವಕಾಶ ವಿಸ್ತರಿಸುವ ಉದ್ದೇಶ ಹೊಂದಿದ್ದು ಸಾಲಮನ್ನಾ ಎಂದರ್ಥವಲ್ಲ. ಸಾಲ ಮರುಪಾವತಿಗೆ ಯಾವ ರೀತಿಯ ಅನುಕೂಲಗಳನ್ನು ರೈತರಿಗೆ ಕಲ್ಪಿಸಲಾಗುತ್ತದೆ? ಎಂಬಿತ್ಯಾದಿ ವಿವರಗಳು ಮಸೂದೆಯ ಕರಡು ಸಿದ್ಧವಾದ ನಂತರವೇ ಬಹಿರಂಗಗೊಳ್ಳಲಿವೆ. ರೈತರಿಗೆ ನೀಡಲಾಗುವ ಸಾಲದ ಪ್ರಮಾಣವನ್ನು 8ರಿಂದ 10 ಲಕ್ಷ ರೂಪಾಯಿವರೆಗೂ ಹೆಚ್ಚಿಸುವ ನಿಟ್ಟಿನಲ್ಲಿ ನಬಾರ್ಡ್ ಜತೆ ರ್ಚಚಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಹಣದುಬ್ಬರದ ಪ್ರಸ್ತುತ ದಿನಗಳಲ್ಲಿ ರೈತನಿಗೆ ಅನುಕೂಲಕರವಾಗಿ ಪರಿಣಮಿಸಲಿದೆ.

ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಬೀಳು ಭೂಮಿಯಲ್ಲಿ ಕೃಷಿ ಉತ್ತೇಜನ ನೀಡುವುದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪಾಳುಬಿದ್ದಿದೆ ಎಂದು ಅಂದಾಜಿಸಲಾಗಿದ್ದು, ಹಲವೆಡೆ ಇಂತಹ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಈ ಜಮೀನಿನಲ್ಲಿ ಕೃಷಿ ಕೈಗೊಂಡಲ್ಲಿ ರೈತರ ಆದಾಯ ಹೆಚ್ಚಿಸಲು ಹಾಗೂ ಕೃಷಿ ಉತ್ಪನ್ನ ವರ್ಧನೆಯಾಗಲು ಮಹತ್ವದ ಕೊಡುಗೆ ನೀಡಲಿದ್ದು, ಈ ನೀತಿಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವುದು ಉತ್ತಮ. ಸರ್ಕಾರಿ ಭೂಮಿ ಕಬಳಿಕೆಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಈ ಹಿಂದಿನ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಎಂಬ ಕಾನೂನು ಜಾರಿಗೊಳಿಸಿತ್ತು.

ಈ ಕಾನೂನಿನ ಪ್ರಕಾರ ಭೂ ಒತ್ತುವರಿದಾರರಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ, ನೆರವಾಗುವ ಅಧಿಕಾರಿಗಳಿಗೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಅನೇಕ ರೈತರು ಬಂಧನ ಭೀತಿ ಎದುರಿಸುತ್ತಿದ್ದುದನ್ನು ಅರಿತ ಪ್ರಸ್ತುತ ಸರ್ಕಾರವು ಮಳೆಗಾಲದ ಅಧಿವೇಶನದ ವೇಳೆ ಸೆ. 14ರಂದು ಈ ಕಾಯ್ದೆಗೆ ತಿದ್ದುಪಡಿ ಮಂಡಿಸಿದಾಗ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ನಂತರ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ 2022ಕ್ಕೆ ರಾಜ್ಯಪಾಲರು ಅಂಕಿತ ಹಾಕುವುದರೊಂದಿಗೆ ಸಾಕಷ್ಟು ರೈತರು ನಿರಾಳರಾಗುವಂತಾಯಿತು. ಇದೇ ರೀತಿಯಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿನ ಬಾಣೆ, ಬೆಟ್ಟ, ಸೊಪ್ಪಿನಬೆಟ್ಟ, ಕುಮ್ಕಿ, ಕಾನು ಜಮೀನುಗಳನ್ನು ಹಲವಾರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ನಿರ್ಧರಿಸಿದ್ದು, ಅದನ್ನು ಕೂಡ ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ತರಬೇಕೆಂಬ ನಿರೀಕ್ಷೆ ಅನ್ನದಾತರದ್ದಾಗಿದೆ.