ನ್ಯೂಸ್

ಡಿಜಿಟಲ್ ಕಟ್ಟೆಚ್ಚರ: ಚಾಲ್ತಿಗೆ ಮುನ್ನ ಜಾಗೃತಿ ಅಭಿಯಾನ ಅಗತ್ಯ

Webdesk - Ravikanth

ಈಚೆಗೆ ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಡಿಜಿಟಲ್ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಕೃಷಿ, ಶಿಕ್ಷಣ ಮತ್ತು ಕರೆನ್ಸಿ ಹೀಗೆ ನಾನಾ ರಂಗಗಳಲ್ಲಿ ಡಿಜಿಟಲ್ ರಂಗು ಗೋಚರಿಸಿದೆ. ಕೇಂದ್ರವು ಈಗಾಗಲೇ ಡಿಜಿಟಲ್ ಇಂಡಿಯಾಗೆ ಒತ್ತು ಕೊಟ್ಟಿದ್ದು, ಹಣಕಾಸಿನ ವಹಿವಾಟಿನಲ್ಲೂ ಡಿಜಿಟಲ್ ರುಪಿ ಚಾಲನೆಗೆ ತರಲಿದೆ. ಬಿಟ್ ಕಾಯಿನ್ ಮುಂತಾದ ಕ್ರಿಪ್ಟೊಕರೆನ್ಸಿಗಳು ಸಹ ಡಿಜಿಟಲ್ ಕರೆನ್ಸಿ ವ್ಯಾಪ್ತಿಗೆ ಬರುತ್ತವಾದರೂ, ಸರ್ಕಾರದ್ದೇ ಆದ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಇದನ್ನು ಜಾರಿಗೆ ತರಲಾಗುತ್ತದೆ. ಇದರಿಂದ ಮುದ್ರಿತ ನೋಟುಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ಹಣಕಾಸನ್ನು ಒದಗಿಸಬಹುದು; ನಕಲಿ ನೋಟು, ಮೋಸ ತಡೆಯಬಹುದು. ಅಲ್ಲದೆ ಪಾರದರ್ಶಕತೆ ಬರುವುದರಿಂದ ತೆರಿಗೆ ವಂಚನೆ ಆಗುವುದು ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ. ಇದಲ್ಲದೆ, ಡಿಜಿಟಲ್ ರುಪಿಯನ್ನು ನಗದಾಗಿಯೂ ಪರಿವರ್ತಿಸಿಕೊಳ್ಳಬಹುದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬದಲಾದ ಜಗತ್ತಿನಲ್ಲಿ ತಂತ್ರಜ್ಞಾನವನ್ನು ಅವಲಂಬಿಸಿ ಬಹಳ ವ್ಯವಹಾರಗಳು ನಡೆಯುತ್ತಿವೆ. ಇದರಿಂದ ತ್ವರಿತವಾಗಿ ಕೆಲಸ ಆಗುವ ಜತೆಗೆ, ಪಾರದರ್ಶಕತೆಯೂ ಹೆಚ್ಚುತ್ತದೆ. ಅಂತರ್ಜಾಲ ಸವಲತ್ತು ಸರಿಯಾಗಿ ಇದ್ದರೆ ಹಳ್ಳಿಗಳ ಮೂಲೆಗೂ ಸುಲಭದಲ್ಲಿ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಅದರಲ್ಲೂ ಈಗಿನ ದಿನಗಳಲ್ಲಿ ಹಳ್ಳಿಗಳಿಂದಲೂ ವ್ಯಾಪಾರ ವ್ಯವಹಾರಗಳು ನಡೆಯುತ್ತವೆ ಹಾಗೂ ಮಹಿಳೆಯರು ಸಹ ತಂತ್ರಜ್ಞಾನ

ಆಧಾರಿತ ವ್ಯವಹಾರ ನಡೆಸುತ್ತಾರೆ. ಆದರೆ ಡಿಜಿಟಲ್ ವ್ಯವಹಾರ ಎಷ್ಟು ಪರಿಣಾಮಕಾರಿಯೋ ಅಷ್ಟೇ ಅಪಾಯವೂ ಇರುತ್ತದೆ ಎಂಬುದನ್ನು ಮರೆಯಬಾರದು. ಅದರಲ್ಲೂ ಈಗಂತೂ ಎಲ್ಲೋ ದೂರದ ದೇಶದಲ್ಲಿ ಕುಳಿತುಕೊಂಡೇ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ ಖಾತೆ ಮುಂತಾದವನ್ನು ಹ್ಯಾಕ್ ಮಾಡಬಹುದು. 2023ರ ಕೊನೆಯಲ್ಲಿ ಡಿಜಿಟಲ್ ಕರೆನ್ಸಿ ಭಾರತದಲ್ಲಿ ಚಲಾವಣೆಗೆ ಬರುವ ಸಾಧ್ಯತೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆ ಇರುವುದರಿಂದ ಸುರಕ್ಷತೆ ಹಾಗೂ ಪಾರದರ್ಶಕತೆ

ಬಗ್ಗೆ ಹೆಚ್ಚು ಅನುಮಾನಪಡುವ ಅಗತ್ಯ ಇಲ್ಲವಾದರೂ, ಭಾರತದಂತಹ ಗ್ರಾಮೀಣ ಪ್ರದೇಶಗಳು ಹೆಚ್ಚಿರುವ, ಡಿಜಿಟಲ್ ಸಾಕ್ಷರತೆ ಇನ್ನೂ ಹೆಚ್ಚಬೇಕಿರುವ ದೇಶದಲ್ಲಿ ಡಿಜಿಟಲ್ ಕರೆನ್ಸಿ ಜಾರಿ ಮತ್ತು ವಹಿವಾಟಿನ ಮೇಲೆ ಹದ್ದಿನ ಕಣ್ಣು ಇರಿಸುವುದು ಅನಿವಾರ್ಯವಾಗುತ್ತದೆ. ಡಿಜಿಟಲ್ ಕರೆನ್ಸಿ ಚಾಲ್ತಿಗೆ ತರುವ ಮುನ್ನ ಜನರಲ್ಲಿ ಈ ಬಗ್ಗೆ ಮಾಹಿತಿ ನೀಡುವುದು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವ್ಯಾಪಕ ಅಭಿಯಾನ ಹಮ್ಮಿಕೊಳ್ಳುವುದು ಅಗತ್ಯ. ಇದರಿಂದ ಈ ಮಾಧ್ಯಮದ ಸುಲಭ ಬಳಕೆಗೆ ಅನುವಾಗುವುದಲ್ಲದೆ, ದುರುಪಯೋಗಕ್ಕೂ ಕಡಿವಾಣ ಹಾಕಲು ಸಾಧ್ಯ. ಐಟಿ ರಂಗದಲ್ಲಿ ಭಾರತ ಬಹಳ ಮುಂದುವರಿದಿರುವುದರಿಂದ ಡಿಜಿಟಲ್ ಕರೆನ್ಸಿ ಯಶಸ್ಸಿನ ಬಗ್ಗೆ ಭರವಸೆ ಇರಿಸಲು ಕಾರಣಗಳಿವೆ.