ನಿವೃತ್ತಿಯಾಗುವ ಶಿಕ್ಷಕರ ಸಂಖ್ಯೆಗೆ ಸಮಪ್ರಮಾಣದಲ್ಲಿ ಆಯಾ ಅವಧಿಯಲ್ಲೇ ಹೊಸ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಮುಂದಿನ ವರ್ಷಗಳಲ್ಲಿ ಜಾರಿಗೆ ತರಲಾಗುವುದು ಎಂಬ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದು, ಇದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಂದರೆ ಶಿಕ್ಷಣ ರಂಗದ ಏಳ್ಗೆಗೆ ಹಾಗೂ ಶಿಕ್ಷಕ ಆಕಾಂಕ್ಷಿಗಳಿಗೆ ಬಹುದೊಡ್ಡ ಕೊಡುಗೆಯಾಗಿ ಪರಿಣಮಿಸಲಿದೆ. ಇದರ ಜತೆಗೆ, ಇಲಾಖೆಗೆ ಸಂಬಂಧಿಸಿ ದೂರುದುಮ್ಮಾನ ಹೇಳಿಕೊಳ್ಳಲು ಪ್ರತ್ಯೇಕ ಆಯೋಗ ರಚಿಸಲಾಗುವುದೆಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ನಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿ, ಮೇ ತಿಂಗಳಲ್ಲಿ ಪರೀಕ್ಷೆಯನ್ನು ಕೂಡ ನಡೆಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಬರುವ ಡಿಸೆಂಬರ್ 22ರ ಒಳಗಾಗಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಯೋಜಿಸಲಾಗಿದೆ. ಹೀಗೆ, ಮುಂಚಿತವಾಗಿಯೇ ತಯಾರಿ ಮಾಡಿಕೊಂಡಿದ್ದರೂ ಈ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಅವಧಿ ಅಂದಾಜು ಒಂಬತ್ತು ತಿಂಗಳು ಆಗುತ್ತದೆ. ಇನ್ನು ನಿವೃತ್ತಿಯಾಗುವ ಶಿಕ್ಷಕರ ಸಂಖ್ಯೆಗೆ ಸಮನಾಗಿ ಆಯಾ ಅವಧಿಯಲ್ಲೇ ನೇಮಕಾತಿ ಮಾಡಿಕೊಳ್ಳುವುದು ಸವಾಲಿನ ಸಂಗತಿಯೇ ಆಗಲಿದೆ. ಏಕೆಂದರೆ, ಪ್ರತಿ ತಿಂಗಳು ಒಂದಿಷ್ಟು ಶಿಕ್ಷಕರು ನಿವೃತ್ತರಾಗುತ್ತಾರೆ. ಅಷ್ಟೇ ಪ್ರಮಾಣದಲ್ಲಿ ತಕ್ಷಣವೇ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಎಂದರೆ ಅದೊಂದು ನಿರಂತರ ಪ್ರಕ್ರಿಯೆಯಾಗಿ ಪರಿಣಮಿಸುತ್ತದೆ. ಇದನ್ನು ನಿಭಾಯಿಸಲು ಪ್ರತ್ಯೇಕ ವ್ಯವಸ್ಥೆಯೇ ಬೇಕಾಗಬಹುದು.
ಈ ಮೊದಲು ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಗೆ ಡಿಇಡಿ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಗೆ ಬಿಇಡಿ ಆದವರಿಂದ ಅರ್ಜಿಗಳನ್ನು ಆಹ್ವಾನಿಸಿ, ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಡಿಇಡಿ ಹಾಗೂ ಬಿಇಡಿ ಆದವರಿಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಆಯೋಜಿಸಲಾಗುತ್ತಿದ್ದು, ಇದರಲ್ಲಿ ಪಾಸಾದವರಿಗೆ ಮಾತ್ರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಅಲ್ಲದೆ, ಒಂದು ಬಾರಿ ಟಿಇಟಿ ಪಾಸಾದರೆ ಅದರ ಅರ್ಹತೆ ಅವಧಿ 3 ವರ್ಷಗಳಿಗೆ ಸೀಮಿತವಾಗಿರುತ್ತದೆ. ಈ ಅವಧಿಯ ನಂತರ ನೇಮಕಾತಿ ಪರೀಕ್ಷೆಗೆ ಅರ್ಹತೆ ಪಡೆಯಬೇಕಾದರೆ ಮತ್ತೆ ಟಿಇಟಿ ಪಾಸಾಗಬೇಕಾಗುತ್ತದೆ. ಈ ಜಟಿಲ ಪ್ರಕ್ರಿಯೆ ನೇಮಕಾತಿ ವಿಳಂಬಕ್ಕೆ ತಕ್ಕಮಟ್ಟಿಗೆ ಕಾರಣವಾದರೂ ಗುಣಮಟ್ಟದ ಶಿಕ್ಷಕರ ನೇಮಕಕ್ಕೆ ಕೊಡುಗೆ ನೀಡುತ್ತಿದೆ ಎಂದೇ ಭಾವಿಸಲಾಗಿದೆ. ಒಟ್ಟಾರೆಯಾಗಿ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ನಿರಂತರ ವ್ಯವಸ್ಥೆಯನ್ನು ರೂಪಿಸಿದರೆ ಶಿಕ್ಷಕರ ಕೊರತೆ ಆಗದಂತೆ ಸಮರ್ಥವಾಗಿ ನಿಭಾಯಿಸಬಹುದಾಗಿದೆ.