ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಮಯದಲ್ಲಿ ಮತ್ತು ನಂತರದಲ್ಲಿ ಸರ್ಕಾರ ರಚಿಸಿದ ಮೇಲೆ ಜನರಿಗೆ ವಿವಿಧ ಭರವಸೆಗಳನ್ನು ನೀಡುವುದು ವಾಡಿಕೆಯಾಗಿದೆ. ಜನರನ್ನು ಸೆಳೆಯುವ ನಿಟ್ಟಿನಲ್ಲಿ ಇಂಥ ಆಶ್ವಾಸನೆಗಳು ಒಂದು ಹಂತಕ್ಕೆ ಬೇಕಾಗುತ್ತದೆ ಎಂದು ಒಪ್ಪಬಹುದಾದರೂ, ಸ್ವರ್ಗವನ್ನೇ ಧರೆಗಿಳಿಸುವ ಅಥವಾ ಕಾರ್ಯಸಾಧ್ಯವಲ್ಲದ ಯೋಜನೆಗಳನ್ನು ಸಹ ಪ್ರಕಟಿಸುವುದು ಅಥವಾ ಜನರನ್ನು ಮೆಚ್ಚಿಸಲೋಸುಗ ಚಿತ್ರವಿಚಿತ್ರ ಕೊಡುಗೆಗಳನ್ನು ಪ್ರಕಟಿಸುವುದು ಎಷ್ಟು ಸರಿ? ಇದರ ಪರಿಣಾಮಗಳೇನು? ಎಂಬಿತ್ಯಾದಿ ಪ್ರಶ್ನೆ-ಚರ್ಚೆಗಳು ಇದ್ದೇ ಇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಚಿನ ದಿನಗಳಲ್ಲಿ ಉಚಿತ ಕೊಡುಗೆ (ಫ್ರೀ ಬೀ) ಘೋಷಣೆಗಳ ವಿರುದ್ಧವಾಗಿ ಮಾತಾಡುತ್ತಿರುವುದರಿಂದಾಗಿ ಜಿಜ್ಞಾಸೆ ಮತ್ತಷ್ಟು ಹೆಚ್ಚಿದೆ. ಫ್ರೀ ಬೀ ಘೋಷಣೆಗಳ ಬಗ್ಗೆ ಎರಡು ವಾದಗಳಿವೆ, ಇಂಥ ಘೋಷಣೆಯಿಂದ ಜನರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ಏನೂ ಆಗದು; ಇದು ಬರೀ ಪ್ರಚಾರದ ಗಿಮಿಕ್ ಎಂಬುದು ಒಂದು ವಾದ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂತಾದವರು ಫ್ರೀ ಬೀಯನ್ನು ಸಮರ್ಥಿಸುತ್ತಾರೆ. ಆರೋಗ್ಯ, ಶಿಕ್ಷಣ ಮುಂತಾದ ರಂಗಗಳಿಗೆ ನೀಡುವ ಉಚಿತ ಕೊಡುಗೆಗಳು ವ್ಯರ್ಥವಾಗುವುದಿಲ್ಲ ಎಂಬುದು ಅವರ ಪ್ರತಿಪಾದನೆ. ಈ ವಿಷಯ ಈಗ ಸವೋಚ್ಚ ನ್ಯಾಯಾಲಯದವರೆಗೂ ಹೋಗಿದ್ದು, ವಿಚಾರಣೆ ನಡೆಯುತ್ತಿದೆ. ಈ ನಡುವೆಯೇ, ಕೇಂದ್ರೀಯ ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಗಮನಾರ್ಹ ಪ್ರಸ್ತಾವವೊಂದನ್ನು ಮುಂದಿಟ್ಟಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಗಳನ್ನು ಈಡೇರಿಸಲು ಹಣಕಾಸಿನ ಮೂಲಗಳನ್ನು ಹೇಗೆ ಹೊಂದಿಸುತ್ತವೆ ಎಂಬುದನ್ನು ವಿವರಿಸಬೇಕು ಎಂದು ಆಯೋಗ ಸಲಹೆ ನೀಡಿದೆ. ಪಕ್ಷಗಳು ಈ ರೀತಿ ಮಾಡುವುದರಿಂದ ಜನರಿಗೆ ಮಾಹಿತಿ ಲಭಿಸಿ ಆಯ್ಕೆ ನಿರ್ಧರಿಸಲು ಸಹಾಯವಾಗುತ್ತದೆ ಎಂಬುದು ಆಯೋಗದ ಚಿಂತನೆ. ಚುನಾವಣಾ ಭರವಸೆಗಳನ್ನು ನಿಯಂತ್ರಿಸುವುದಕ್ಕೆ ಸದ್ಯಕ್ಕೆ ನಮ್ಮಲ್ಲಿ ಕಾನೂನುಗಳಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಪಕ್ಷಗಳು ಸ್ವಲ್ಪ ಗಂಭೀರವಾಗಿವೆ; ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಆಡಳಿತ ನಡೆಸುವ ಪಕ್ಷಗಳು ಮಾಹಿತಿ ನೀಡುವ ರೂಢಿ ಶುರುವಾಗಿದೆ.
ಭಾರತದಂತಹ ವೈವಿಧ್ಯ ಸಾಮಾಜಿಕ-ಆರ್ಥಿಕ ದೇಶದಲ್ಲಿ ಜನರ ನೆರವಿಗೆ ಸರ್ಕಾರಗಳು ಕೆಲ ಕೊಡುಗೆಗಳನ್ನು ಪ್ರಕಟಿಸಬೇಕಾದುದು ಅಗತ್ಯ ಎಂದು ಒಪ್ಪಬಹುದು. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಹಾಗೇ ಇಂಥ ಘೋಷಣೆಗಳನ್ನು ಈಡೇರಿಸಲು ಆರ್ಥಿಕ ಮೂಲದ ಸ್ಪಷ್ಟತೆ ಇರಬೇಕಾಗುತ್ತದೆ ಮತ್ತು ರ್ತಾಕ ನೆಲೆಗಟ್ಟು ಸಹ ಇರಬೇಕಾಗುತ್ತದೆ. ಹಾಗಿಲ್ಲವಾದಲ್ಲಿ ಯೋಜನೆಗಳನ್ನು ಘೋಷಿಸಿ, ನಂತರದಲ್ಲಿ ಅವಕ್ಕೆ ಹಣಕಾಸಿನ ನೆರವು ಇಲ್ಲದೆ ತೆವಳುವುದೋ ಅಥವಾ ಅರ್ಧಕ್ಕೆ ಕೈಬಿಡುವುದೋ ಆಗುತ್ತದೆ ಹೊರತು ಲಾಭವೇನಿಲ್ಲ. ಮೇಲಾಗಿ ಪಕ್ಷಗಳು ಕೇವಲ ರಾಜಕೀಯ ಲಾಭದ ಉದ್ದೇಶವನ್ನಿಟ್ಟುಕೊಂಡು ಉಚಿತ ಕೊಡುಗೆಗಳನ್ನು ಘೋಷಿಸಿದರೆ ಅದರಿಂದ ದೇಶದ ಮೇಲೆ ಸಹ ಒಟ್ಟಾರೆಯಾಗಿ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ವ್ಯಾಪಕ ಚರ್ಚೆ ನಡೆದು ನಿಷ್ಕರ್ಷೆಗೆ ಬರುವುದು ಉತ್ತಮ.