ನ್ಯೂಸ್

ಸಂಪಾದಕೀಯ | ಶಾಸಕರ ಜವಾಬ್ದಾರಿ: ಸದನ ಕಲಾಪದಲ್ಲಿ ಸಕ್ರಿಯ ಪಾತ್ರವಿರಲಿ

Webdesk - Ravikanth

ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯುತ್ತಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ಕಂಡುಬರುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಲ್ಲದೆ ಜಾರಿಗೆ ತರಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಂತೂ, ಸರ್ಕಾರದ ವಿರುದ್ಧ ‘ದಾಖಲೆಯ ಬಾಂಬ್’ ಸಿಡಿಸುವ ಮೂಲಕ ರಾಜಕೀಯ ವಾತಾವರಣವನ್ನು ಕಾವೇರಿಸಿದ್ದಾರೆ. ಇದರ ಜತೆಗೆ, ಸದನ ಕೆಲ ಹೊಸ ಮಸೂದೆಗಳು ಹಾಗೂ ತಿದ್ದುಪಡಿ ಮಸೂದೆಗಳ ಮಂಡನೆಗೂ ಸಾಕ್ಷಿಯಾಗಿದೆ.

ಎಪಿಎಂಸಿ, ಜಿಎಸ್​ಟಿ, ರಸ್ತೆ ಸುರಕ್ಷತೆ, ಕೆಟಿಟಿಪಿ ಇತ್ಯಾದಿ ಮಸೂದೆಗಳು ಅವಗಾಹನೆಗೆ ಮಂಡಿಸಲ್ಪಟ್ಟಿವೆ. ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಾಗಿ ಹಣ ವಿತರಣೆಯನ್ನು ಜುಲೈ 10ರಂದು ಆರಂಭಿಸುವುದಾಗಿ ಸರ್ಕಾರ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಜತೆ ಸಂವಾದವನ್ನೂ ನಡೆಸಲಿದ್ದಾರೆ. ಹಾಗೇ, ತಂತಮ್ಮ ಇಲಾಖೆಗಳಲ್ಲಿನ ಬೆಳವಣಿಗೆಗಳು, ವಾಸ್ತವ ಸ್ಥಿತಿಗತಿ ಹಾಗೂ ಮುಂದಿನ ಆಲೋಚನೆಗಳ ಬಗ್ಗೆ ಕೆಲ ಸಚಿವರು ಸದನಕ್ಕೆ ವಿವರಿಸಿದ್ದಾರೆ. ಈ ನಡುವೆ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾಡಿರುವ ಘೋಷಣೆಯೊಂದು ಗಮನ ಸೆಳೆಯುವಂತಿದೆ. ಸದನದಲ್ಲಿ ಕೋರಂ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಸದನಕ್ಕೆ ಮೊದಲು ಬರುವ ಶಾಸಕರಿಗೆ ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

ಅದರಂತೆ, ಮಂಗಳವಾರ ಶಾಸನಸಭೆಗೆ ಮೊುದಲು ಬಂದ ಶಾಸಕರ ಹೆಸರನ್ನು ಓದಿ ಹೇಳುವ ಮೂಲಕ, ಈ ವಿಷಯದಲ್ಲಿ ತಾವು ಗಂಭೀರವಾಗಿರುವುದನ್ನು ತೋರಿಸಿದ್ದಾರೆ. ಇಂಥದೊಂದು ಬಹುಮಾನದ ಆಮಿಷದ ಬಗ್ಗೆ ಕೇಳಿದಾಗ, ಮಕ್ಕಳಿಗೆ ಬಹುಮಾನದ ಆಸೆ ತೋರಿಸುವ ಹಾಗೆ, ಶಾಸಕರು ಸದನಕ್ಕೆ ಬರಲು ಹೀಗೆ ಮಾಡುವ ಅಗತ್ಯವಿದೆಯೇ ಎಂಬ ಅನಿಸಿಕೆ ಮೂಡುವುದಾದರೂ, ನಮ್ಮ ಸದನ ಕಲಾಪಗಳನ್ನು ನೋಡಿದಾಗ, ವಾಸ್ತವ ಮನವರಿಕೆಯಾಗುತ್ತದೆ. ಇದು ಯಾವುದೋ ಇದು ಯಾವುದೋ ಒಂದು ರಾಜ್ಯಕ್ಕೆ ಸೀಮಿತವಾದ ಪ್ರವೃತ್ತಿಯಲ್ಲ. ಕಲಾಪಕ್ಕೆ ಶಾಸಕರ ಗೈರು ಅಥವಾ ಕಲಾಪಗಳಲ್ಲಿ ಆಸಕ್ತಿ ತೋರಿಸದ ಕುರಿತು ಬಹಳ ವರ್ಷಗಳಿಂದ ಚರ್ಚೆಯಾಗುತ್ತಿದೆ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಸದನಕ್ಕೆ ಗೈರಾಗಲು ಅವಕಾಶ ಇದೆ. ಆದರೆ ಪಿಳ್ಳೆನೆವ ಹೇಳಿ ಕಲಾಪಕ್ಕೆ ಚಕ್ಕರ್ ಹಾಕುವುದು ಉದಾಸೀನ ಪ್ರವೃತ್ತಿಯ ದ್ಯೋತಕವೇ ಸರಿ.

ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಮತ್ತು ಮಸೂದೆಗಳ ಬಗ್ಗೆ ರ್ಚಚಿಸಲು ವಿಧಾನಮಂಡಲದ ಅಧಿವೇಶನಗಳು ಜನಪ್ರತಿನಿಧಿಗಳಿಗೆ ಉತ್ತಮ ವೇದಿಕೆ ಒದಗಿಸುತ್ತವೆ. ಸದನದಲ್ಲಿ ಮಂಡನೆಯಾದ ಮಸೂದೆಗಳ ಬಗ್ಗೆ ರ್ಚಚಿಸಲು ಅಥವಾ ವಿಶ್ಲೇಷಿಸಲು ಪ್ರತಿಪಕ್ಷದವರಿಗೆ ಸಾಧ್ಯವಾಗದಿದ್ದಲ್ಲಿ ಆಡಳಿತ ಪಕ್ಷದ ಕೆಲಸ ಸುರಳೀತವಾಗಿಬಿಡುತ್ತದೆ. ಎಷ್ಟೋ ಮಹತ್ವದ ಮಸೂದೆಗಳು ಸಹ ಚರ್ಚೆಯಿಲ್ಲದೆ ಅಥವಾ ಕೆಲವೇ ನಿಮಿಷಗಳ ಚರ್ಚೆಯಲ್ಲಿ ಅಂಗೀಕಾರಗೊಂಡ ನಿದರ್ಶನಗಳಿವೆ. ಸದನ ಕಲಾಪದಲ್ಲಿ ಪೂರ್ವತಯಾರಿಲ್ಲದೆ ಮಾತನಾಡಲಾಗದು. ಒಂದಷ್ಟು ತಯಾರಿ ಮಾಡಿಕೊಂಡೇ ಬರಬೇಕು. ಇದು ಶಾಸಕರಲ್ಲಿ ಅಧ್ಯಯನಶೀಲತೆಯನ್ನು ತನ್ನಿಂತಾನೆ ಬೆಳೆಸುತ್ತದೆ. ವಿಧಾನಸಭೆ-ವಿಧಾನಪರಿಷತ್ ಅಥವಾ ಲೋಕಸಭೆ-ರಾಜ್ಯಸಭೆಯ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸಂಸದೀಯ ಪಟುಗಳಾದವರು ಅನೇಕ. ಅಂಥದೊಂದು ಆಸಕ್ತಿ ಮತ್ತು ಬದ್ಧತೆಯನ್ನು ಜನರು ಶಾಸಕರಿಂದ ನಿರೀಕ್ಷಿಸುತ್ತಾರೆ.