ನ್ಯೂಸ್

ಕಟ್ಟೆಚ್ಚರ ಅಗತ್ಯ: ಮುಂಗಾರು ನಿರ್ವಹಣೆಗೆ ಆಡಳಿತ ಯಂತ್ರ ಸಜ್ಜಾಗಲಿ..

Webdesk - Ravikanth

ಪ್ರಸ್ತುತ ಮುಂಗಾರು ಆರಂಭದಲ್ಲಿ ಮಳೆ ಅಗತ್ಯ ಪ್ರಮಾಣದಲ್ಲಿ ಸುರಿದಿರಲಿಲ್ಲ. ಆದರೆ, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಅನೇಕ ಜಿಲ್ಲೆ- ತಾಲೂಕುಗಳ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸುವ ಪರಿಸ್ಥಿತಿ ತಲೆದೋರಿದೆ. ಕೊಡಗು, ದಕ್ಷಿಣ ಕನ್ನಡದಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಜೊಯಿಡಾ ತಾಲೂಕಿನ ಅನಮೊಡ ಘಾಟ್​ನಲ್ಲಿ ಗುಡ್ಡ ಕುಸಿತವಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಕಳಸ ಸಮೀಪದ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಚಿಕ್ಕಮಗಳೂರಿನಲ್ಲಿ ಹಳ್ಳಕ್ಕೆ ಇಳಿದ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಶುರುವಿನಲ್ಲೇ ಇಷ್ಟೆಲ್ಲ ಹಾನಿ, ಸಮಸ್ಯೆಗಳು ಗೋಚರಿಸತೊಡಗಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವುದು ನಿರೀಕ್ಷಿತ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಳೆ ಬಾಧಿತ ಜಿಲ್ಲಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ಮುನ್ನೆಚ್ಚರಿಕೆ ಜತೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು, ಜನರಿಗೆ ಸಕಾಲಕ್ಕೆ ಮಾಹಿತಿ ನೀಡಲು, ಅಗತ್ಯಬಿದ್ದರೆ ಸ್ಥಳಾಂತರದ ವ್ಯವಸ್ಥೆ ಮಾಡಲು ಜಿಲ್ಲಾ ಆಡಳಿತಗಳಿಗೆ ಸೂಚಿಸಿದ್ದಾರೆ. ಪ್ರಕೃತಿ ವಿಕೋಪ ನಿರ್ವಹಣೆ ತಂಡಗಳ ಜತೆಗೆ ಮಾತುಕತೆಯನ್ನೂ ನಡೆಸಿದ್ದಾರೆ. ಯಾವ್ಯಾವ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಬೀಳುತ್ತದೆ, ಎಲ್ಲೆಲ್ಲಿ ಏನೇನು ಸಮಸ್ಯೆಗಳು ತಲೆದೋರುತ್ತವೆ ಎಂದು ಒಂದು ಅಂದಾಜು ಇರುತ್ತದೆ. ಹವಾಮಾನ ಇಲಾಖೆ ಕೂಡ ಈ ನಿಟ್ಟಿನಲ್ಲಿ ಮುನ್ಸೂಚನೆ ಕೊಟ್ಟಿರುತ್ತದೆ. ಹೀಗಾಗಿ, ಪ್ರತಿ ಜಿಲ್ಲಾಡಳಿತಗಳು ಮಳೆಗಾಲದಲ್ಲಿ ತಲೆದೋರುವ ಪರಿಸ್ಥಿತಿ ಎದುರಿಸಲು ಸಜ್ಜಾಗಿಯೇ ಇರಬೇಕೆಂಬುದು ನಿರೀಕ್ಷಿತ. ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಹೇಳಿರುವುದು ಸೂಕ್ತವಾಗಿದೆಯಾದರೂ, ಕಳೆದ 2-3 ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಹಾನಿಯಾದ ಪ್ರಕರಣಗಳಲ್ಲಿ ಕೆಲವರಿಗೆ ಯೋಗ್ಯ ರೀತಿಯಲ್ಲಿ ಪರಿಹಾರದ ಹಣ ತಲುಪಿಲ್ಲ ಹಾಗೂ ಇದರಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸುವ ಅಗತ್ಯ ಇದೆ. ಮಹಾರಾಷ್ಟ್ರದಲ್ಲೂ ಮುಂದಿನ ಕೆಲ ದಿನಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂಬ ಮುನ್ಸೂಚನೆ ನೀಡಲಾಗಿರುವುದರಿಂದ ಗಡಿಭಾಗದ ಪ್ರದೇಶಗಳಿಗೆ, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ನದಿಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರಲಿದೆ. ಮಹಾರಾಷ್ಟ್ರ ಅಣೆಕಟ್ಟುಗಳಿಂದ ಏಕಾಏಕಿ ನೀರು ಬಿಡುಗಡೆ ಮಾಡುವುದರಿಂದ ನೆರೆ ಉಂಟಾಗಿ ಈ ಭಾಗದ ಜನರು ತೊಂದರೆಗೆ ಒಳಗಾದ ಉದಾಹರಣೆಗಳಿವೆ. ಹೀಗಾಗದಂತೆ, ಮಹಾರಾಷ್ಟ್ರ ಜತೆ ಸೂಕ್ತ ಸಂಪರ್ಕವನ್ನು ರಾಜ್ಯದ ಆಡಳಿತ ಇಟ್ಟುಕೊಂಡರೆ ಅನಾಹುತ ಸಾಧ್ಯತೆ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳ ನಡುವೆ ಈ ಮುಂಚೆಯೇ ಮಾತುಕತೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರುಪೂರ್ವ ಮಳೆ ಅಬ್ಬರಿಸಿತ್ತು. ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ತೊಂದರೆ ಎದುರಿಸಬೇಕಾಯಿತು. ಇಲ್ಲಿ ಅನೇಕ ಕಡೆಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಇಲ್ಲಿ ವರುಣ ಕೊಂಚ ಬಿಡುವು ನೀಡಿದ್ದಾನಾದರೂ ಮತ್ತೆ ಮಳೆ ಅಬ್ಬರಿಸದು ಎನ್ನಲಾಗದು. ಮಳೆ ನೀರನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ಮುನ್ನೆಚ್ಚರಿಕಾ ಕ್ರಮಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದಿಲ್ಲ ಎಂಬ ಆಕ್ಷೇಪಗಳಿವೆ. ಇದಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಿಸಬೇಕಾದುದು ಬಿಬಿಎಂಪಿ ಹೊಣೆಗಾರಿಕೆ.