ಕರೊನಾದ ಹಾವಳಿ, ನೆರೆಯ ಸಮಸ್ಯೆ ಇದೆಲ್ಲದರಿಂದ ರಾಜ್ಯದಲ್ಲಿ ಆದಾಯದ ಕೊರತೆ ಹೆಚ್ಚಿದೆ. ವೆಚ್ಚವನ್ನು ತಗ್ಗಿಸುವುದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ತುಂಬ ಅವಶ್ಯ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅನಗತ್ಯ ವೆಚ್ಚವನ್ನು ವರ್ಷದಲ್ಲಿ ಶೇಕಡ 5ರಷ್ಟಾದರೂ ಕಡಿಮೆ ಮಾಡುವಂತೆ ತಾಕೀತು ಮಾಡಿದ್ದಾರೆ. ಈ ಹಿಂದಿನ ಸರ್ಕಾರಗಳು ಕೂಡ ಇಂಥ ಕ್ರಮಗಳಿಗೆ ಮುಂದಾಗಿದ್ದವು. ಆದರೆ, ಅಧಿಕಾರಿವರ್ಗ ಅದನ್ನು ಗಂಭೀರವಾಗಿ ಸ್ವೀಕರಿಸದ, ಸರಿಯಾಗಿ ಅನುಷ್ಠಾನ ಮಾಡದ ಪರಿಣಾಮ ಸಮಸ್ಯೆ ಹಾಗೆಯೇ ಉಳಿಯಿತು. ಪ್ರಸಕ್ತ ಸ್ಥಿತಿಯಲ್ಲಿ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಹೆಚ್ಚುತ್ತಿದ್ದು, ಬಂಡವಾಳ ವೆಚ್ಚ ಕಡಿಮೆಯಾಗುತ್ತಿದೆ. ಇಂಥ ಹೊತ್ತಲ್ಲಿ ಅನಗತ್ಯ ವೆಚ್ಚವನ್ನು ಸಂಪೂರ್ಣವಾಗಿ ನಿಯಂತ್ರಿಸಿದಲ್ಲಿ 2500ರಿಂದ 3000 ಕೋಟಿ ರೂಪಾಯಿಗಳ ಉಳಿತಾಯ ಸಾಧ್ಯ ಎಂಬುದನ್ನು ಹಣಕಾಸು ಇಲಾಖೆಯ ಮೂಲಗಳೇ ಖಚಿತ ಪಡಿಸಿವೆ. ಇದೇನು ಸಣ್ಣ ಮೊತ್ತವಲ್ಲ. ಹನಿ ಹನಿ ಸೇರಿಯೇ ಹಳ್ಳವಾಗುವಂತೆ ಸಣ್ಣ ಸಣ್ಣ ಉಳಿಕೆಯೂ ದೊಡ್ಡ ಪರಿಣಾಮ ಬೀರಬಲ್ಲದು.
ಇಂದಿನ ಆರ್ಥಿಕ ಸಂಕಷ್ಟದ ದಿನಗಳಲ್ಲಿಯೂ ಬೊಕ್ಕಸದ ಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ದುಂದುವೆಚ್ಚಗಳು ಮುಂದುವರಿದಿರುವುದು ದುರದೃಷ್ಟಕರ. ಕೆಲವು ಅಧಿಕಾರಿಗಳು ಮೂರು-ನಾಲ್ಕು ಕಾರುಗಳನ್ನು ಬಳಸುತ್ತಿದ್ದರೆ, ನಿಗಮ-ಮಂಡಳಿಗಳಲ್ಲಿ ಅನಗತ್ಯ ವೆಚ್ಚಗಳೇ ಹೆಚ್ಚು. ಈಗಲೇ ಆರ್ಥಿಕ ಶಿಸ್ತು ರೂಪಿಸಿಕೊಳ್ಳದಿದ್ದರೆ, ಮಿತವ್ಯಯದ ಕ್ರಮಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಕೇಂದ್ರ ಸರ್ಕಾರ 2023ರಿಂದ ಜಿಎಸ್ಟಿ ಪರಿಹಾರವನ್ನು ನಿಲ್ಲಿಸಲಿದ್ದು, ಆ ಕೊರತೆ ನೀಗಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕಿದೆ.
ಆಡಳಿತ ಸುಧಾರಣೆಯ ಭಾಗವಾಗಿ ಇಲಾಖೆಗಳ ವಿಲೀನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ಅಗತ್ಯವಿದೆ. ಈ ಮೂಲಕ ಸಿಬ್ಬಂದಿ ಮರು ನಿಯೋಜನೆ ಮಾಡಿ, ವೆಚ್ಚ ತಗ್ಗಿಸಬಹುದಾಗಿದೆ. ಅನಗತ್ಯ ನಿಗಮ ಮತ್ತು ಮಂಡಳಿಗಳನ್ನು ರದ್ದು ಮಾಡುವ ಕುರಿತಾದ ಚರ್ಚೆಯೂ ಸರ್ಕಾರದ ಮಟ್ಟದಲ್ಲಿ ನಡೆದಿದ್ದು, ಉತ್ತಮ ಬೆಳವಣಿಗೆಯೇ ಸರಿ. ದುಂದುವೆಚ್ಚ ಹೇಗೆ ಮತ್ತು ಎಲ್ಲಿ ಆಗುತ್ತಿದೆ ಎಂಬುದು ಅಧಿಕಾರಿಗಳಿಗೆ ತಿಳಿದೇ ಇದೆ. ಇದನ್ನು ತಡೆಯುವ ಇಚ್ಛಾಶಕ್ತಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕಿದೆ.
ಮುಂದಿನ ದಿನಗಳು ಮತ್ತಷ್ಟು ಸವಾಲಿನಿಂದ ಕೂಡಿವೆ ಎಂಬುದರಲ್ಲಿ ಅನುಮಾನವಿಲ್ಲ. ಇತ್ತೀಚೆಗಷ್ಟೇ ಹೊಸ ಸಂಪುಟ ರಚನೆಯಾಗಿದೆ. ಹೊಸ ಸಚಿವರು ಮತ್ತು ಅಧಿಕಾರಿಗಳು ಸರಳತೆಯನ್ನೇ ಆದ್ಯತೆಯಾಗಿಸಿಕೊಂಡು, ಮಾದರಿಯಾಗಬೇಕು. ಆಯಾ ಇಲಾಖೆಗಳಲ್ಲಿನ ಅನಗತ್ಯ ವೆಚ್ಚ ಕಡಿಮೆ ಮಾಡಿದರೆ, ಬೊಕ್ಕಸದ ಮೇಲಿನ ಹೊರೆಯೂ ಅಷ್ಟರ ಮಟ್ಟಿಗೆ ತಗ್ಗಿಸಬಹುದು. ಅಂಥ ಬದ್ಧತೆ ಈಗ ವ್ಯಕ್ತವಾಗಬೇಕಿದೆ. ಮುಖ್ಯಮಂತ್ರಿಗಳ ಆಶಯ, ಕಳಕಳಿ ಅನುಷ್ಠಾನದ ರೂಪ ತಳೆದರೆ ಆರ್ಥಿಕ ಶಿಸ್ತಿಗೂ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ.