ನ್ಯೂಸ್

ಮಹತ್ವದ ವಿದ್ಯಮಾನ: ಶಾರದಾ ಪೀಠ ಕಾರಿಡಾರ್​ಗೆ ಪಿಒಕೆ ಸರ್ಕಾರ ಒಪ್ಪಿಗೆ

Webdesk - Ravikanth

ಶಾರದಾ ಪೀಠ ಕಾರಿಡಾರ್ ನಿರ್ವಿುಸುವುದಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ಅಚ್ಚರಿಯ ಜತೆಗೆ ಕುತೂಹಲವನ್ನೂ ಮೂಡಿಸಿದೆ. ಭಾರತದ ಜನರು ಶಾರದಾ ಪೀಠಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು; ಇದರಿಂದ ಎರಡೂ ದೇಶಗಳ ಜನರ ನಡುವಣ ಬಾಂಧವ್ಯವೂ ವರ್ಧಿಸುತ್ತದೆ; ಅಲ್ಲದೆ ಆರ್ಥಿಕ ಚಟುವಟಿಕೆಗೂ ಇಂಬು ದೊರೆಯುತ್ತದೆ ಎಂದು ಪಿಒಕೆ ವಿಧಾನಸಭೆ ನಿರ್ಣಯವು ಹೇಳಿದೆ. ಹಿಂದೆ ಭಾರತದ ಭಾಗವೇ ಆಗಿದ್ದ ಪಿಒಕೆ, ಯುದ್ಧದ ಪರಿಣಾಮವಾಗಿ ಪಾಕ್ ವಶಕ್ಕೆ ಹೋಗಿದ್ದು, ದೇಶ ವಿಭಜನೆ ನಂತರದಲ್ಲಿ ಅಲ್ಲಿನ ಶಾರದಾ ಪೀಠಕ್ಕೆ ತೆರಳಲು ಭಾರತದ ಯಾತ್ರಿಗಳಿಗೆ ಸಮಸ್ಯೆ ಆಯಿತು. ಶಾರದಾ ಪೀಠವು ಐತಿಹಾಸಿಕ ಮಹತ್ವ ಹೊಂದಿದ್ದು, ವೇದಕಾಲದಲ್ಲಿ ಶೈಕ್ಷಣಿಕ ಕೇಂದ್ರವಾಗಿತ್ತೆಂಬ ಮಾಹಿತಿಯಿದೆ.

ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರು ಇಲ್ಲಿ ಸಾಧನೆ ಮಾಡಿದ್ದರು. ಆಚಾರ್ಯ ಶಂಕರರು ಅಲ್ಲಿನ ಪಂಡಿತರನ್ನು ವಾದದಲ್ಲಿ ಸೋಲಿಸಿ ಸರ್ವಜ್ಞ ಪೀಠಾರೋಹಣ ಮಾಡಿದ್ದರು. ಹೀಗಾಗಿ ಭಾರತೀಯರಿಗೆ ಶಾರದಾ ಪೀಠದ ಜತೆ ಭಾವನಾತ್ಮಕ ಸಂಬಂಧವೂ ಇದೆ. ಕಳೆದ 75 ವರ್ಷಗಳಿಂದ ಮುಚ್ಚಿದ್ದ, ಕಾಶ್ಮೀರದ ಎಲ್​ಒಸಿ ಸನಿಹದಲ್ಲಿರುವ ಟಿಟ್ವಾಲ್​ನಲ್ಲಿನ ಶಾರದಾ ದೇಗುಲವನ್ನು ಜೀಣೋದ್ಧಾರಗೊಳಿಸಿ, ಈಚೆಗೆ ಭಕ್ತರಿಗೆ ಮುಕ್ತಗೊಳಿಸಲಾಯಿತು. ಈ ಸಂದರ್ಭದಲ್ಲಿ, ಪಿಒಕೆಯಲ್ಲಿನ ಶಾರದಾ ಪೀಠಕ್ಕೆ ಹೋಗಲು ಅವಕಾಶ ನೀಡಬೇಕೆಂಬ ಆಗ್ರಹವನ್ನು ಅಲ್ಲಿನ ಮುಖ್ಯಸ್ಥರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೆದುರು ಮಂಡಿಸಿದರು. ಅದಾದ ಕೆಲ ದಿನಗಳಲ್ಲೇ ಪಿಒಕೆ ವಿಧಾನಸಭೆ ನಿರ್ಣಯ ಕೈಗೊಂಡಿದೆ.

ಆದರೆ ಈ ನಿರ್ಧಾರ ಸಹಜವಾಗಿಯೇ ಪಾಕ್ ಸರ್ಕಾರಕ್ಕೆ ಹಾಗೂ ಅಲ್ಲಿನ ಉನ್ನತ ರಾಜಕೀಯ ನಾಯಕರಿಗೆ ಕೋಪ ತಂದಿದೆ. ಇದು ಸಹಜ ಕೂಡ. ಏಕೆಂದರೆ ಅಂತಾರಾಷ್ಟ್ರೀಯ ವಲಯದಲ್ಲಿ ಇದು ಬೇರೆಯದೇ ಸಂದೇಶ ನೀಡುತ್ತದೆ. ಹೀಗಾಗಿ ಈ ಯೋಜನೆಗೆ ಪಾಕ್ ಸರ್ಕಾರ ಅವಕಾಶ ನೀಡುವುದೇ ಎಂಬ ಅನುಮಾನವೂ ಇದೆ. ಪಾಕ್ ಕೇಂದ್ರೀಯ ಸರ್ಕಾರದ ಜತೆ ಪಿಒಕೆ ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದು, ಈ ನಿರ್ಣಯಕ್ಕೆ ಅದೂ ಒಂದು ಕಾರಣವಾಗಿರಬಹುದು. ಇದಲ್ಲದೆ, ಪಿಒಕೆಯಲ್ಲಿನ ಕೆಲ ಜನರು ಭಾರತ ಸೇರುವ ಬಗ್ಗೆ ಒಲವು ಹೊಂದಿದ್ದಾರೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿವಂಚಿತವಾಗಿರುವುದು; ಕೇಂದ್ರೀಯ ಸರ್ಕಾರದಿಂದ ಸೂಕ್ತ ನೆರವು ದೊರೆಯದಿರುವುದು; ಇತ್ತ ಕಾಶ್ಮೀರ ಕಣಿವೆಯಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದೆ. ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದಾದ, ಪಾಕ್ ವ್ಯಾಪ್ತಿಯಲ್ಲಿರುವ ಕರ್ತಾರ್ಪರ ಕಾರಿಡಾರ್ ನಿರ್ವಣವಾದ ನಿದರ್ಶನ ಈಚಿನ ದಿನಗಳಲ್ಲೇ ನಮ್ಮ ಮುಂದಿದೆ. ಶಾರದಾ ಪೀಠದ ವಿಚಾರದಲ್ಲೂ ಹೀಗಾಗಬಹುದೇ ಎಂಬುದನ್ನು ಕಾದುನೋಡಬೇಕು. ಆರಂಭದಿಂದಲೂ ವಿನಾಕಾರಣ ಭಾರತದ ಮೇಲೆ ದ್ವೇಷಕಾರುತ್ತ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಪಾಕ್ ನಾಯಕರು ಜನರ ಭಾವನೆಗಳನ್ನು ಅರಿಯುತ್ತಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ವಿಶ್ವದೇಶಗಳ ದೃಷ್ಟಿಯಲ್ಲಿ ‘ವಿಫಲ ರಾಷ್ಟ್ರ’ ಎಂಬ ಅನಾದರಕ್ಕೆ ಗುರಿಯಾಗಿರುವ ಪಾಕಿಸ್ತಾನ ಭಾರತದ್ವೇಷವನ್ನು ಮುಂದುವರಿಸಿಕೊಂಡೇ ಬಂದರೆ, ಇನ್ನಷ್ಟು ತೊಂದರೆಗೆ ಸಿಲುಕುವುದಂತೂ ನಿಶ್ಚಿತ.