ರಾಜ್ಯದ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿ ರದ್ದಾಗಲಿದೆ. ಇದುವರೆಗೆ ಬೆಂಗಳೂರು ನಗರ ಸೇರಿದಂತೆ ಕಮಿಷನರೇಟ್ ಪ್ರದೇಶಗಳಲ್ಲಿ ಜಾರಿಯಲಿದ್ದ ಈ ನಿಯಮ ಈಗ ರಾಜ್ಯವ್ಯಾಪಿಯಾಗಲಿದೆ. ಅಪಘಾತಗಳ ನಿಯಂತ್ರಣ ದೃಷ್ಟಿಯಿಂದ ಇಲಾಖೆಯ ಈ ಕ್ರಮ ಸರಿ ಎನ್ನಬಹುದು. ಆದರೆ, ಈ ನಿಯಮ ಕೂಡ ಹತ್ತರಲ್ಲಿ ಹನ್ನೊಂದು ಎನ್ನುವಂತಾಗದೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ವಾಹನ ಸವಾರರನ್ನು ಬೆದರಿಸುವ ತಂತ್ರಕ್ಕೂ ಅವಕಾಶವಾಗಬಾರದು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಅಪಘಾತಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲು. ರಾಜ್ಯದಲ್ಲಿ ಪ್ರತಿದಿನ ಸರಾಸರಿ ವಿವಿಧ ಸ್ವರೂಪದ 150ಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಕ್ಕೆ ಕಾರಣಗಳು ಹಲವು ಇರಬಹುದು. ಆದರೆ, ಮುನ್ನೆಚ್ಚರಿಕೆ ವಹಿಸಿದರೆ ನಿಯಂತ್ರಣ ಸಾಧ್ಯವಿದೆ. ಪೊಲೀಸ್ ಇಲಾಖೆ ಪ್ರಕಾರ ಬಹುತೇಕ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆಯೇ ಕಾರಣ. ಇಲಾಖೆ ಅಭಿಪ್ರಾಯ ಗಮನಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ.
ಅಪಘಾತಗಳನ್ನು ನಿಯಂತ್ರಿಸಲು ಕಂಡುಕೊಳ್ಳುವ ಪರಿಹಾರ ಮಾರ್ಗಗಳಲ್ಲಿ ವಾಹನ ಚಾಲನಾ ಪರವಾನಗಿ ರದ್ದು ಕೂಡ ಒಂದು. ಆದರೆ, ಪರವಾನಗಿ ರದ್ದುಪಡಿಸುವುದರಿಂದ ಬಹುತೇಕ ಉದ್ದೇಶ ಈಡೇರಲಿದೆ ಎನ್ನಲಾಗದು. ಚಾಲನಾ ಪರವಾನಗಿ ರದ್ದತಿಯೊಂದಿಗೆ ಇತರ ಸಾಧ್ಯತೆಗಳನ್ನು ಪರಿಶೀಲಿಸಿ ಅವುಗಳ ಅನುಷ್ಠಾನಕ್ಕೂ ಪ್ರಯತ್ನ ಮಾಡಬೇಕು.ಹಾಳಾದ ರಸ್ತೆಗಳೂ ಕೂಡ ಅಪಘಾತಗಳಿಗೆ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು. ಮದ್ಯಪಾನ ಹಾಗೂ ಡ್ರಗ್ಸ್ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಕೂಡ ಸಂಚಾರಿ ನಿಯಮಗಳ ಉಲ್ಲಂಘನೆ ಪಟ್ಟಿಯಲ್ಲಿ ಬರಲಿದೆ. ಈ ಕಾರಣಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎಂಬುದನ್ನೂ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಶಿಕ್ಷೆಯೊಂದೇ ಸಮಸ್ಯೆಗಳಿಗೆ ಪರಿಹಾರ ಎಂಬ ನಿರ್ಧಾರಕ್ಕೆ ಬರಬಾರದು. ಸಮಸ್ಯೆಯ ಮೂಲ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಕೂಡ ಪರಿಹಾರ ಕ್ರಮಗಳಲ್ಲಿ ಒಂದು.
ಕೆಲವು ವರ್ಷಗಳ ಹಿಂದಿನ ಒಂದೆರಡು ದುರಂತಗಳನ್ನು ಉಲ್ಲೇಖ ಮಾಡಬಹುದಾದರೆ ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಬಸ್ ಪಿಕ್ ಅಪ್ ಡ್ಯಾಮ್ಗೆ ಉರುಳಿಬಿದ್ದು ಸಂಭವಿಸಿದ ಸಾವು-ನೋವು, ಚಿತ್ರದುರ್ಗದ ಸಂತೆ ಹೊಂಡದಲ್ಲಿ ಬಸ್ ಪಲ್ಟಿಯಾಗಿ ಸಂಭವಿಸಿದ ಸಾವು - ನೋವಿಗೆ ಸಂಚಾರಿ ನಿಯಮಗಳ ಉಲ್ಲಂಘನೆಯೊಂದಿಗೆ ಬೇರೆ ಕಾರಣಗಳೂ ಇವೆ. ಇಂತಹ ಕಾರಣಗಳನ್ನೂ ಪತ್ತೆ ಮಾಡಿ ಸರಿಪಡಿಸುವ ಕ್ರಮ ಆಗಬೇಕು. ಒಂದು ಬಸ್ಗೆ ಫಿಟ್ನೆಸ್ ಸರ್ಟಿಫಿಕೇಟ್ ಇರಲಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯೇ ದೃಢಪಡಿಸಿತ್ತು. ಅಫಘಾತಗಳಿಗೆ ಕಾರಣವಾಗಬಹುದಾದ ಇಂತಹ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವು-ನೋವು ತಡೆಗೆ ಪೂರಕವಾಗಿ ವಾಹನ ಚಾಲನಾ ಪರವಾನಗಿ ರದ್ದುಪಡಿಸುವ ಪೊಲೀಸ್ ಇಲಾಖೆಯ ಕ್ರಮವನ್ನು ಯಾರೂ ವಿರೋಧಿಸಲಾರರು. ಆದರೆ ಈ ನಿಯಮವೇ ಮತ್ತೊಂದು ಅಕ್ರಮಕ್ಕೆ ರಹದಾರಿಯಾಗಬಾರದು. ಯಾರದ್ದೋ ತಪ್ಪಿಗೆ ಮತ್ತೆ ಯಾರಿಗೋ ಶಿಕ್ಷೆಯಾಗದಂತೆ ಎಚ್ಚರಿಕೆ ವಹಿಸಬೇಕು. ಚಾಲನಾ ಪರವಾನಗಿ ರದ್ಧತಿಯ ನಿಯಮ ದುರ್ಬಳಕೆಗೆ ಇರುವ ಸಾಧ್ಯಾಸಾಧ್ಯತೆಗಳನ್ನು ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಈ ನಿಯಮ ದುರ್ಬಳಕೆಯಾಗದಂತೆಯೂ ಎಚ್ಚರಿಕೆ ವಹಿಸಬೇಕು.