ಹೊರಜಗತ್ತಿಗೆ ತನ್ನ ವಿದ್ಯಮಾನಗಳು ಗೊತ್ತಾಗಬಾರದು ಎಂದು ಚೀನಾ ಎಷ್ಟೇ ಯತ್ನಿಸಿದರೂ, ಕೆಲ ವಿಚಾರಗಳು ಹೇಗೋ ಹೊರಗೆ ಬರುತ್ತಿವೆ, ಆದ್ದರಿಂದ ಆ ದೇಶದ ಕುತಂತ್ರ ಮತ್ತು ಕುಕೃತ್ಯಗಳು ಪೂರ್ತಿಯಾಗಲ್ಲದಿದ್ದರೂ, ಕೆಲಮಟ್ಟಿಗಾದರೂ ಜಗತ್ತಿನ ಗಮನಕ್ಕೆ ಬರುತ್ತಿವೆ. ಕರೊನಾ ವಿಷಯದಲ್ಲಿ ಮತ್ತು ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಚೀನಾ ಅನುಸರಿಸಿದ ನಡೆಗಳು ಮತ್ತು ನಿಗೂಢತೆಯ ಕೆಲವು ಅಂಶ ಈಗ ಅನಾವರಣಗೊಂಡಿದೆ. ಕರೊನಾ ಉಗಮದ ಮೂಲ ಚೀನಾವೇ ಎಂದು ಇಡೀ ಜಗತ್ತು ಗಟ್ಟಿಯಾಗಿ ನಂಬಿದ್ದರೂ, ಆ ದೇಶ ಮಾತ್ರ ಬೇರೆಯದೇ ರೀತಿಯಲ್ಲಿ ವಾದಿಸುತ್ತಿದೆ. ಕರೊನಾ ತನ್ನಲ್ಲಿ ಮೊದಲು ಕಾಣಿಸಿಕೊಂಡಿರಬಹುದಾದರೂ, ಆ ವೈರಸ್ನ ಉಗಮಸ್ಥಾನ ತಾನಲ್ಲ ಎಂದು ಅದು ಹೇಳಿಕೊಳ್ಳುತ್ತಿದೆ. ಆದರೆ ಈ ವಿಷಯದಲ್ಲಿ ಜಗತ್ತನ್ನು ಚೀನಾ ತಪ್ಪುದಾರಿಗೆಳೆದಿದೆ ಎಂಬ ಸಂಗತಿ ಈಗ ಬಹಿರಂಗವಾಗಿರುವ ‘ವುಹಾನ್ ಕಡತ’ದಲ್ಲಿ ಗೋಚರಿಸಿದೆ.
ಕರೊನಾ ಮೊದಲು ಕಾಣಿಸಿಕೊಂಡ ಹುಬೆ ಪ್ರಾಂತ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಅರ್ಧದಷ್ಟನ್ನು ಮಾತ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿತ್ತು. ಅಂದರೆ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಪಟ್ಟಿಮಾಡಿದ ಸೋಂಕಿತ ಪ್ರಕರಣಗಳಲ್ಲಿ, ಸರ್ಕಾರ ಉದ್ದೇಶಪೂರ್ವಕವಾಗಿ ಕೆಲವನ್ನು ಮಾತ್ರ ಹೇಳಿತ್ತು. ಇದರ ಹುನ್ನಾರ ಏನೆಂಬುದು ಸ್ಪಷ್ಟ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಪದೇಪದೆ ಈ ಸಂಗತಿ ಉಲ್ಲೇಖಿಸುತ್ತ ಚೀನಾ ಮೇಲೆ ಕೆಂಡಕಾರುತ್ತಿದ್ದರು. ಚೀನಾದ ಇನ್ನೊಂದು ಉದ್ದೇಶಪೂರ್ವಕ ಕುತಂತ್ರ ಎಂದರೆ, ಗಲ್ವಾನ್ ಕಣಿವೆಯಲ್ಲಿ ಸೈನಿಕ ಕಾರ್ಯಾಚರಣೆ. ಕಳೆದ ವರ್ಷದ ಜೂನ್ 15ರಂದು ಸಂಭವಿಸಿದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಆ ಪ್ರದೇಶದಲ್ಲಿ ಬೇಕೆಂದೇ ಗಲಾಟೆ ಎಬ್ಬಿಸಿ ಭಾರತೀಯ ಸೈನಿಕರನ್ನು ಹತ್ಯೆಮಾಡಲೆಂದೇ ಚೀನಾ ಸರ್ಕಾರವೇ ಯೋಜಿಸಿತ್ತು ಎಂದು ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಬೊಟ್ಟುಮಾಡಲಾಗಿದೆ.
ಗಲ್ವಾನ್ ಘಟನೆ ಮತ್ತು ಅದಕ್ಕೂ ಹಿಂದಿನ ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಭದ್ರತೆ ವಿಚಾರದಲ್ಲಿ ಹಾಗೂ ರಾಜತಾಂತ್ರಿಕವಾಗಿ ಬಿಗಿ ಮತ್ತು ಖಡಕ್ ನಿಲುವು ಪ್ರದರ್ಶಿಸಿದ್ದರಿಂದಾಗಿ ಚೀನಾ ಅಂದುಕೊಂಡಂತೆ ನಡೆಯಲಿಲ್ಲ. ಕರೊನಾ ವಿಚಾರದಲ್ಲಂತೂ ಜಗತ್ತಿನ ಬಹುತೇಕ ದೇಶಗಳು ಚೀನಾ ಬಗ್ಗೆ ಅಸಮಾಧಾನ ಮತ್ತು ಅಸಹನೆ ಹೊಂದಿವೆ. ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಹೊರಜಗತ್ತಿಗೆ ಅದು ನೀಡಿದ್ದಿದ್ದರೆ ಎಷ್ಟೋ ಸಾವುನೋವು ತಪ್ಪಿಸಬಹುದಾಗಿತ್ತು ಎಂಬುದು ಅಂತಾರಾಷ್ಟ್ರೀಯ ವಲಯದ ಭಾವನೆ. ಇದು ನಿಜ ಕೂಡ. ಇದರ ಜತೆಗೆ, ತನ್ನ ವಿಸ್ತರಣಾವಾದದಿಂದಾಗಿಯೂ ಚೀನಾ ಕೆಲ ದೇಶಗಳಿಗೆ ಅಪಥ್ಯವಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಆ ದೇಶ ತೋರುತ್ತಿರುವ ಆಕ್ರಮಕ ಧೋರಣೆ ಅಮೆರಿಕದಂಥ ದೇಶವನ್ನೂ ಕೆರಳಿಸಿದೆ. ಈ ಎಲ್ಲ ಕಾರಣಗಳಿಂದ ಕೆಲವೇ ಕೆಲವು ದೇಶಗಳ ಬೆಂಬಲ ಹೊರತುಪಡಿಸಿದಂತೆ ಜಾಗತಿಕ ವಲಯದಲ್ಲಿ ಚೀನಾ ದಿನೇದಿನೆ ಒಬ್ಬಂಟಿಯಾಗುತ್ತ ಸಾಗುತ್ತಿದೆ. ಚೀನಾ ಬಗ್ಗೆ ವಿಶ್ವದ ದೇಶಗಳಲ್ಲಿ ನಕಾರಾತ್ಮಕ ಭಾವನೆ ಬೆಳೆಯುತ್ತಿರುವಂತೆ, ಮತ್ತೊಂದೆಡೆ, ಭಾರತದ ಕುರಿತು ಸದ್ಭಾವನೆ ಹೆಚ್ಚುತ್ತಿದೆ. ಆ ಲೆಕ್ಕದಲ್ಲಿ ಇದು ಭಾರತಕ್ಕೆ ಅನುಕೂಲಕರವಾದ ಬೆಳವಣಿಗೆ ಎನ್ನಬಹುದು.