ನ್ಯೂಸ್

ಸಂಪಾದಕೀಯ| ಬೆಲೆಯೇರಿಕೆಗೆ ಕಡಿವಾಣ ಬೇಕು; ಜನಸಾಮಾನ್ಯರ ಬದುಕು ದುಸ್ತರ..

Webdesk - Ravikanth

ಕರೊನಾ ಕಾರಣದಿಂದಾಗಿ ಎಲ್ಲ ರಂಗಗಳ ಮೇಲೂ ದುಷ್ಪರಿಣಾಮವಾಗಿದ್ದು, ಬದುಕು ಕಷ್ಟಕರವೆನಿಸಿದೆ. ಅದರಲ್ಲೂ ಕಡಿಮೆ-ಮಧ್ಯಮ ಆದಾಯ ಹೊಂದಿರುವ ಜನಸಾಮಾನ್ಯರ ಜೀವನ ಮತ್ತಷ್ಟು ಕಠಿಣವೆನಿಸಿದೆ. ಖಾಸಗಿ ವಲಯದಲ್ಲಿ ಲಕ್ಷಾಂತರ ಜನರ ನೌಕರಿ ಹೋಗಿದ್ದು, ಪರ್ಯಾಯ ಜೀವನೋಪಾಯ ಹುಡುಕಿಕೊಳ್ಳುವುದು ಅಷ್ಟು ಸುಲಭವಿಲ್ಲ. ಮಾಹಿತಿ ತಂತ್ರಜ್ಞಾನದಂಥ ಕೆಲ ವಲಯಗಳಲ್ಲಿ ಉದ್ಯೋಗಸೃಷ್ಟಿಯಾಗುತ್ತಿದ್ದು, ಆ ಪ್ರಮಾಣ ಇವತ್ತಿನ ಪರಿಸ್ಥಿತಿಗೆ ಸಾಕಾಗುವಷ್ಟು ಇಲ್ಲ. ಇನ್ನೊಂದೆಡೆ, ಸಣ್ಣಪುಟ್ಟ ವ್ಯಾಪಾರ ಮತ್ತು ಸ್ವಉದ್ಯೋಗ ನಂಬಿಕೊಂಡವರು ಸಹ ಕಂಗಾಲಾಗಿದ್ದಾರೆ. ಜನರ ಹಾಗೆ, ಸರ್ಕಾರಗಳ ಆದಾಯ ಕೂಡ ಕಡಿಮೆಯಾಗಿದೆ. ಆದ್ದರಿಂದ, ಘೋಷಿತ ಯೋಜನೆಗಳಲ್ಲಿಯೇ ಅನುದಾನ ಕಡಿತ ಮಾಡುವ ಜತೆಗೆ, ಹೊಸ ಹೊಸ ಯೋಜನೆಗಳಿಗೆ ಆಸ್ಪದ ಕಡಿಮೆ ಇದೆ.

ಈಗ ಕೈಗಾರಿಕಾ ವಲಯ ನಿಧಾನವಾಗಿ ಚೇತರಿಕೆ ಕಾಣುತ್ತಿರುವುದರಿಂದಾಗಿ, ಸ್ವಲ್ಪ ಆಶಾಭಾವನೆ ಮೂಡಿದೆಯಾದರೂ, ಕರೊನಾಪೂರ್ವ ಸ್ಥಿತಿಗೆ ತಲುಪಲು ಇನ್ನೂ ಸಾಕಷ್ಟು ಸಮಯ ಬೇಕು ಎಂಬುದು ಸ್ಪಷ್ಟ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ ಪ್ರಮಾಣ ತಿಂಗಳಿಗೆ ಲಕ್ಷ ಕೋಟಿ ರೂ. ದಾಟಿದೆ ಎಂಬುದು ನಿಜವಾದರೂ, ಬೆಲೆ ಹೆಚ್ಚಳದಿಂದಾಗಿ ಇಷ್ಟು ಸಂಗ್ರಹ ಆಗುತ್ತಿದೆ ಎಂಬ ಅಂಶವನ್ನು ಮರೆಯುವಂತಿಲ್ಲ. ಹಣದುಬ್ಬರ ಹೆಚ್ಚಳದಿಂದಾಗಿ ಬಹುತೇಕ ಎಲ್ಲ ವಸ್ತುಗಳ ಬೆಲೆ ಏರಿರುವುದರಿಂದಾಗಿ ಜನರ ಬವಣೆಯೂ ಹೆಚ್ಚಿದೆ. ವಿಶೇಷವಾಗಿ, ಪೆಟ್ರೋಲ್ ಮತ್ತು ಡೀಸೆಲ್ ದರ ಏರುತ್ತಲೇ ಇದ್ದು, ಅದರ ಪರಿಣಾಮವಾಗಿ ಅನೇಕ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ದೈನಂದಿನ ಅಗತ್ಯ ವಸ್ತುಗಳಾದ ಎಣ್ಣೆ, ಬೇಳೆಕಾಳು ಇತ್ಯಾದಿ ಒಂದುಕಡೆಯಾದರೆ, ನಿರ್ಮಾಣ ಸಾಮಗ್ರಿಗಳ ಬೆಲೆಯೂ ಏರಿದೆ. ಖಾದ್ಯ ತೈಲ ದರ ಪ್ರತಿ ಲೀಟರಿಗೆ 80-90 ರೂ. ಇದ್ದುದು ಈಗ ಡಬಲ್ ಆಗಿದೆ. ಅಡುಗೆ ಅನಿಲ ಸಿಲಿಂಡರ್ ದರ ಒಂದೂವರೆ ವರ್ಷದಲ್ಲಿ ಸುಮಾರು 300 ರೂ. ಹೆಚ್ಚಿದೆ. ಒಟ್ಟಿನಲ್ಲಿ ಯಾವ ದರ ದರ ಏರಿಲ್ಲ ಎಂದು ಕೇಳುವ ಪರಿಸ್ಥಿತಿಯಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಸ್ವಲ್ಪ ಇಳಿಕೆಯಾಗಿದೆ. ಆದರೆ ಅದರ ಲಾಭ ಭಾರತದಲ್ಲಿನ ಗ್ರಾಹಕರಿಗೆ ದಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ- ಇಂಧನದ ಮೇಲೆ ವಿಧಿಸಲಾಗುವ ತೆರಿಗೆಯನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಯಾರಿಲ್ಲದಿರುವುದು. ಈ ಕೋವಿಡ್ ಸಂಕಷ್ಟ ಕಾಲದಲ್ಲಿ ಇಂಧನ ತೆರಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದ್ದು, ಇದನ್ನು ಕಳೆದುಕೊಳ್ಳಲು (ಎಲ್ಲೋ ಕೆಲವು ರಾಜ್ಯಗಳು ತೆರಿಗೆಯನ್ನು ಸ್ವಲ್ಪ ಕಡಿಮೆ ಮಾಡಿವೆ) ಸಿದ್ಧರಿಲ್ಲ. ಇಂಧನ ದರ ಸ್ವಲ್ಪ ಕಡಿಮೆಯಾದರೆ ಇತರ ವಸ್ತುಗಳ ದರ ಸಹ ತುಸು ತಗ್ಗುವ ಸಾಧ್ಯತೆ ಹೆಚ್ಚು. ಆದರೆ ಈ ಸಾಹಸಕ್ಕೆ ಮುಂದಾಗುವವರು ಯಾರು ಎಂಬುದೇ ಪ್ರಶ್ನೆ. ಕರೊನಾ ಕಾರಣದಿಂದಾಗಿ, ಸರ್ಕಾರಗಳು ಆದಾಯದ ದೊಡ್ಡ ಪಾಲನ್ನು ಆರೋಗ್ಯ ವ್ಯವಸ್ಥೆಗೆೆ ವ್ಯಯಿಸಬೇಕಾಗಿ ಬಂದಿದೆ ಎಂಬುದು ನಿಜವಾದರೂ, ಜನರ ಕಷ್ಟವನ್ನು ಕೂಡ ಗಣನೆಯಲ್ಲಿ ಇರಿಸಿಕೊಂಡು ಬೆಲೆಯೇರಿಕೆ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.