ನ್ಯೂಸ್

ಸಂಪಾದಕೀಯ | ಪರಿಸರ ರಕ್ಷಣೆ ಆದ್ಯತೆಯಾಗಲಿ; ಹಸಿರು ಬಜೆಟ್ ಅನುಷ್ಠಾನಕ್ಕೆ ಬರಲಿ

ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಕಡೆಗಣಿಸಿದ ಫಲವೇ ಎಲ್ಲ ದಿಕ್ಕುಗಳಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಲು ಅಗತ್ಯ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಭಿವೃದ್ಧಿಯ ಉಳಿದ ಪ್ರಕ್ರಿಯೆಗಳು ವ್ಯರ್ಥವಾದಂತೆಯೇ. ವಾಯು, ಶಬ್ದ, ಜಲಮಾಲಿನ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಭಾರತದಲ್ಲಿ ವಾಯುಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಪ್ರಮಾಣ ಕಳೆದ ಎರಡು ದಶಕಗಳಲ್ಲೇ ಎರಡೂವರೆ ಪಟ್ಟು ಹೆಚ್ಚಳವಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್​ಇ) ಹೊಸ ಅಧ್ಯಯನ ವರದಿ ತಿಳಿಸಿದೆ. ವಾಯುಮಾಲಿನ್ಯದಿಂದ ಜಾಗತಿಕವಾಗಿ 66.70 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಭಾರತವೊಂದರಲ್ಲೇ 16.70 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಸಂಭವಿಸುತ್ತಿರುವ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ವಾಯುಮಾಲಿನ್ಯದಿಂದ ಆಗುತ್ತಿದೆ ಎಂದು ವರದಿ ಬೊಟ್ಟುಮಾಡಿದೆ. ಭಾರತದ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ( ಎಕ್ಯುಐ) ಅಪಾಯದ ಮಟ್ಟ ಮೀರುತ್ತಿದೆ. ವಾಯುಮಾಲಿನ್ಯದ ಪ್ರಮಾಣ ತಗ್ಗಿಸದಿದ್ದಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಪರಿಸರಕ್ಕೆ ಹಲವು ಬಗೆಯಲ್ಲಿ ನಷ್ಟ ಉಂಟುಮಾಡುತ್ತಿರುವ ಮಾನವನಿರ್ವಿುತ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪರಿಹಾರದ ದಾರಿಯತ್ತ ಮುನ್ನಡೆಯಬೇಕಿದೆ.

ಮತ್ತೊಂದೆಡೆ, ಹವಾಮಾನ ಬದಲಾವಣೆಯಿಂದ ಆಗುವ ಪ್ರಕೃತಿ ವಿಕೋಪದ ಹಾನಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹಸಿರು ಬಜೆಟ್ ರೂಪಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಸ್ವಾಗತಾರ್ಹ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ನಡೆಸಿರುವ ಅಧ್ಯಯನದ ಪ್ರಾಥಮಿಕ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳಿಂದ ಸುಮಾರು 2500 ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಅರಣ್ಯ ಮಾತ್ರವಲ್ಲದೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಕಂದಾಯ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಶೇಕಡ 20 ಅನುದಾನವನ್ನು ಹಸಿರು ಬಜೆಟ್​ಗಾಗಿ ಮೀಸಲಿಡುವ ನಿರೀಕ್ಷೆ ಇದೆ. ಇಂಥ ಉಪಕ್ರಮಗಳು ಅಗತ್ಯ. ಏಕೆಂದರೆ, ಪರಿಸರ ಸಂರಕ್ಷಣೆ ಎಂಬುದು ಈಗ ಕೆಲವೇ ಇಲಾಖೆ, ಸಂಸ್ಥೆಗಳ ಜವಾಬ್ದಾರಿ ಅಲ್ಲ. ಸಾಮೂಹಿಕ ಜವಾಬ್ದಾರಿ ಮತ್ತು ಬದ್ಧತೆ ಈ ನಿಟ್ಟಿನಲ್ಲಿ ಅಗತ್ಯ.

ಈ ಹಿಂದೆಯೂ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳು ಘೋಷಣೆಯಾಗಿವೆಯಾದರೂ, ಅವುಗಳ ಅನುಷ್ಠಾನದ ಪ್ರಮಾಣ ನೋಡಿದರೆ ನಿರಾಸೆಯಾಗುತ್ತದೆ. ಹಸಿರು ಆಯವ್ಯಯದ ವಿಷಯದಲ್ಲಿ ಹೀಗಾಗಬಾರದು. ಬರೀ ಘೋಷಣೆಗೆ ಸೀಮಿತವಾಗಬಾರದು. ಇದರಡಿ ತೆಗೆದುಕೊಳ್ಳಲಾಗುವ ಹಸಿರೀಕರಣ ಸೇರಿದಂತೆ ಹಲವು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು. ಇಂಥ ಕಾರ್ಯಕ್ರಮಗಳಲ್ಲಿ ಜನರ ಸಹಭಾಗಿತ್ವವೂ ಹೆಚ್ಚಬೇಕು. ಆಗಲೇ, ಪರಿಸರದ ಮೇಲಿನ ಶೋಷಣೆಯನ್ನು ತಡೆಯಲು, ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಸಾಗಲು ಶಕ್ಯವಾಗಬಲ್ಲದು. ಅಂಥದ್ದೊಂದು ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಲಿ.