ನ್ಯೂಸ್

ಸಂಪಾದಕೀಯ | ಕಟ್ಟೆಚ್ಚರ ಅಗತ್ಯ; ಲಸಿಕೆ ಪಡೆಯಲು ಉದಾಸೀನ ಬೇಡ

Webdesk - Ravikanth

ನವೆಂಬರ್ 25ರಂದು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕರೊನಾ ಸೋಂಕಿನ ರೂಪಾಂತರಿ ತಳಿ ಒಮಿಕ್ರಾನ್ ಈಗ ಕರ್ನಾಟಕದ ಮೂಲಕ ಭಾರತಕ್ಕೂ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಓರ್ವ ವಿದೇಶಿ ಸೋಂಕಿತ ದುಬೈಗೆ ವಾಪಸಾಗಿದ್ದಾನೆ. ಈ ಮೂಲಕ ಒಂದೇ ವಾರದ ಅವಧಿಯಲ್ಲಿ 30 ದೇಶಗಳಿಗೆ ಒಮಿಕ್ರಾನ್ ವ್ಯಾಪಿಸಿದ್ದು, ಒಟ್ಟು 375 ಪ್ರಕರಣಗಳು ದಾಖಲಾಗಿವೆ. ಇದರ ಸೋಂಕು ಕಂಡುಬಂದವರಲ್ಲಿ ಮೆದು ಲಕ್ಷಣಗಳಿದ್ದು, ಯಾರಿಗೂ ಮಾರಕವಾಗಿ ಪರಿಣಮಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಭಾರತದಲ್ಲಿ ಒಮಿಕ್ರಾನ್ ಪತ್ತೆಯಾದ ಕುರಿತು ಗುರುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ಈ ವೈರಾಣುವಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಒಮಿಕ್ರಾನ್ ಮಾರಕ ಹೌದೋ, ಅಲ್ಲವೋ ಎಂಬುದರ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ’ ಎಂದು ತಿಳಿಸಿದೆ. ಆದರೆ, ಒಮಿಕ್ರಾನ್ ಪ್ರವೇಶ ಕರೊನಾದ ಮೂರನೇ ಅಲೆಯನ್ನು ಸೃಷ್ಟಿಸಲಿದೆಯೇ ಎಂಬ ಆತಂಕವೂ ಕಾಡುತ್ತಿದೆ. ‘ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಲಸಿಕೆ ಪಡೆದುಕೊಂಡವರಿಗಷ್ಟೇ ಮಾಲ್, ಥೇಟರ್​ಗೆ ಪ್ರವೇಶ ಕಲ್ಪಿಸಲಾಗುತ್ತದೆ’ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

ದೇಶದಲ್ಲಿ ಒಂದೂವರೆ ವರ್ಷಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಗುರುವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 99,753 ಇತ್ತು. 2020 ಜೂನ್ 1ರಂದು 97,009 ಸಕ್ರಿಯ ಪ್ರಕರಣಗಳಿದ್ದವು. ಆದರೆ, ಈಗಲೂ ದೇಶದ 15 ಜಿಲ್ಲೆಗಳಲ್ಲಿ ಸೋಂಕು ಖಚಿತತೆ ಪ್ರಮಾಣ ಶೇಕಡ 10ಕ್ಕಿಂತ ಹೆಚ್ಚಿದೆ. 18 ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.5ರಿಂದ 10ರಷ್ಟಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ 10 ಸಾವಿರಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ. ಹೀಗಾಗಿ, ಕರೊನಾದ ಆತಂಕ ಕ್ರಮೇಣವಾಗಿ ಕರಗುತ್ತಿದೆ ಎಂದುಕೊಳ್ಳುವಾಗಲೇ ಒಮಿಕ್ರಾನ್ ತಳಿ ಕಾಣಿಸಿಕೊಂಡಿದೆ. ಕೇಂದ್ರದ ಆರೋಗ್ಯ ಸಚಿವರು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಲಿದ್ದಾರೆ.

ಹೆಚ್ಚುಕಡಿಮೆ ಎರಡು ವರ್ಷಗಳ ಬಳಿಕ ದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಂಡಿವೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುತ್ತಿದೆ. ಮತ್ತೊಂದೆಡೆ, ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಂಡಿದ್ದು, ವ್ಯಾಪಾರ- ವಹಿವಾಟು ಹಳಿಗೆ ಮರಳುತ್ತಿದೆ. ಇತರ ರಂಗದ ಚಟುವಟಿಕೆಗಳು ಕೂಡ ವೇಗ ಪಡೆದುಕೊಳ್ಳುತ್ತಿವೆ. ಇಂಥ ಹೊತ್ತಲ್ಲಿ ಹೊಸ ಸವಾಲನ್ನು ಎದುರಿಸುವ ಸನ್ನಿವೇಶ ಎದುರಾಗಿದೆ. ಭಯಭೀತರಾಗುವ ಅಗತ್ಯವಿಲ್ಲವಾದರೂ ತೀವ್ರ ಕಟ್ಟೆಚ್ಚರವಂತೂ ವಹಿಸಲೇ ಬೇಕಿದೆ. ಜನರು ಮತ್ತೆ ಕರೊನಾ ಸಂಬಂಧಿ ಸುರಕ್ಷಾ ನಿಯಮಗಳನ್ನು ಪಾಲಿಸಬೇಕಿದೆ. ಮುಖ್ಯವಾಗಿ, ಬಹಳಷ್ಟು ಜನರು ಇನ್ನೂ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿಲ್ಲ. ಈ ಉದಾಸೀನಕ್ಕೆ ಭಾರಿ ಬೆಲೆ ತೆರಬೇಕಾದಿತು. ಜನರು ಇನ್ನಾದರೂ ಎಚ್ಚೆತ್ತುಕೊಂಡು ಲಸಿಕೆ ಪಡೆದುಕೊಳ್ಳಬೇಕು, ಸುರಕ್ಷಿತ ಅಂತರದ ಪಾಲನೆ, ಮಾಸ್ಕ್ ಧಾರಣೆಯನ್ನು ಮರೆಯಲೇ ಬಾರದು. ಸೋಂಕಿನ ಹೊಸ ತಳಿ ಹಬ್ಬದಂತೆ ಈಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆ ಬರದಂತೆ ತಡೆಯಬಹುದು. ಈ ಜವಾಬ್ದಾರಿ ಸರ್ಕಾರದ ಮೇಲೂ, ಜನಸಾಮಾನ್ಯರ ಮೇಲೂ ಇದೆ.